Tuesday, 16 July 2019

ಕಾಲನ ಕರೆಗೆ ಕೊನೆಗೂ ಓಗೊಟ್ಟ ನಮ್ಮ ಶ್ರೀನಿವಾಸ ಆಚಾರ್ಯ

ಕಾಲನ ಕರೆಗೆ ಕೊನೆಗೂ ಓಗೊಟ್ಟ ನಮ್ಮ ಶ್ರೀನಿವಾಸ ಆಚಾರ್ಯ 

ಭಾರತೀಯ ಇತಿಹಾಸ ಸಂಕಲನಾ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಶ್ರೀಯುತ ಶ್ರೀನಿವಾಸ ರಾವ್ (ನಮ್ಮ ನೆಚ್ಚಿನ ಶ್ರೀನಿವಾಸ ಆಚಾರ್ಯ) ನಿನ್ನೆ ಇತಿಹಾಸ ಸೇರಿದ್ದಾರೆ. ಇತಿಹಾಸದ ಬಗ್ಗೆ ಅತೀವ ಆಸಕ್ತಿ ಹೊಂದಿ ನನ್ನಂತಹ ಅನೇಕರಿಗೆ ಭಾರತೀಯ ಇತಿಹಾಸದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿ ಕೊನೆಗೆ ಇತಿಹಾಸ ಸೇರಿದ ವ್ಯಕ್ತಿ ಅವರು. ನಮಗೆ ಗುರುಕುಲದಲ್ಲಿ ಅವರು ಹೇಳುತ್ತಿದ್ದ ಇತಿಹಾಸ ಪಾಠ ಇಂದೂ ನೆನಪಿದೆ. ಶಿವಾಜಿ, ಚಾಣಕ್ಯ, ಆಜಾದ್ ಇತ್ಯಾದಿ ಕಥೆಗಳನ್ನು ಧಾರಾವಾಹಿಯಂತೆ ಕಣ್ಣಿಗೆ ಕಟ್ಟುವ ಹಾಗೆ ಅನೇಕ ದಿನಗಳವರೆಗೆ ಹೇಳುತ್ತಿದ್ದರು. ನಿನ್ನೆ ಬಂದೆರಗಿದ ಅವರ ಅಕಾಲಿಕ ನಿಧನ ವಾರ್ತೆ ನನ್ನಂತಹ ಅನೇಕ ಶಿಷ್ಯಂದಿರಿಗೆ ಆಘಾತವನ್ನುಂಟುಮಾಡಿದೆ.

ಶ್ರೀನಿವಾಸ ಆಚಾರ್ಯರದ್ದು ಬಹುಮುಖ ವ್ಯಕ್ತಿತ್ವ. ಇತಿಹಾಸವಲ್ಲದೆ ಕುಸ್ತಿ, ಮಲ್ಲಯುದ್ಧ ಹೀಗೆ ಅನೇಕ ಶಾರೀರಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ತುಂಗೆಯ ತಟದಲ್ಲಿ ಮರಳು ರಾಶಿಯ ಮೇಲೆ ಹನುಮಾನ್ ಚಡ್ಡಿ ಹಾಕಿ ಅವರು ನಮಗೆ ಹೇಳಿಕೊಡುತ್ತಿದ್ದ ಕುಸ್ತಿ ಇನ್ನೂ ನೆನಪಿದೆ. ನನಗೆ ನೆನಪಿರುವಂತೆ ಅವರ ಮಾರ್ಗದರ್ಶನದಲ್ಲಿ ನಾನು ಮತ್ತು ನನ್ನ ಸ್ನೇಹಿತ ಕೇಶವ ಇಬ್ಬರೂ ಹರಿಹರಪುರದಲ್ಲಿ ಕುಸ್ತಿ ಪ್ರದರ್ಶನ ಕೂಡಾ ಮಾಡಿದ್ದೇವೆ. ಅಷ್ಟೇ ಅಲ್ಲದೆ ನನ್ನ ಮೊದಲನೇ ಪ್ರಾಜೆಕ್ಟ್ ವರ್ಕ್ "ಗ್ರಾಮೀಣ ಭಾರತದ ಅಧ್ಯಯನ" ಅವರ ಮಾರ್ಗದರ್ಶನದಲ್ಲಿಯೇ ಆಗಿದೆ. ನನ್ನ ಜೊತೆಗೆ ನನ್ನ ಸಹಾಧ್ಯಾಯಿಗಳಿಗೆ ವನವಾಸಿ ಹಾಗೂ ನಗರ ಭಾರತದ ಅಧ್ಯಯನದ ಪ್ರಾಜೆಕ್ಟ್ ವರ್ಕ್  ಮಾಡಿಸಿದ್ದರು. ಪ್ರಜ್ಞಾ, ಪ್ರತಿಭಾ ಗಣದಲ್ಲಿರುವಾಗಲೇ (ಗುರುಕುಲದಲ್ಲಿ ೭, ೮ ನೇ ತರಗತಿ) ಇತಿಹಾಸದ M.A ಪುಸ್ತಕಗಳನ್ನು ಓದುತ್ತಿದ್ದೆವು ಅಂದರೆ ಅದರಲ್ಲಿ ಶ್ರೀನಿವಾಸ ಆಚಾರ್ಯರ ಪಾತ್ರ ಬಹಳಷ್ಟಿದೆ. ನಾನು ಅವರ ಮಾರ್ಗ ದರ್ಶನದಲ್ಲಿ ಧೃತಿ ಗಣದಲ್ಲಿದ್ದಾಗ (೯ ನೇ ತರಗತಿ) ಸ್ಥಳೀಯ ಪತ್ರಿಕೆಯ ವಿಶೇಷ ಸಂಚಿಕೆಗೆ "ಪ್ರಾಚೀನ ಭಾರತೀಯರ ಸಾಧನೆಗಳು" ಎಂಬ ಶೀರ್ಷಿಕೆಯಡಿ ಲೇಖನವನ್ನು ಕೂಡಾ ಬರೆದಿದ್ದೇನೆ. ಪ್ರಕಟಿತವಾದ ನನ್ನ ಮೊದಲ ಲೇಖನ ಅದು. ಇಂದೂ ಅಭ್ಯಸಿಸುತ್ತಿರುವ ನಿರಂತರ ಬರವಣಿಗೆಗೆ ಅವರೂ ಸ್ಫೂರ್ತಿಯಾಗಿದ್ದಾರೆ. ಶ್ರೀ ವಿದ್ಯಾನಂದ ಶೆಣೈ ಅವರಂತೆ 'ಭಾರತ ದರ್ಶನ' ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ಮಾಡಿಸಬೇಕೆಂದು ಅವರೂ ಇಚ್ಚಿಸಿದ್ದರು - ಅದು ಇನ್ನೂ ಸಾಧ್ಯವಾಗಿಲ್ಲದ್ದಕ್ಕೆ ಬೇಸರವಿದೆ.

ಕೇವಲ ಪಠ್ಯ ವಿಷಯಗಳಲ್ಲದೇ ಗುರುಕುಲದಲ್ಲಿ ಮಕ್ಕಳೊಂದಿಗೆ ಇಡ್ಲಿ ತಿನ್ನುವ, ಪಾಯಸ ಸುರಿಯುವ ಸ್ಪರ್ಧೆಗಳಲ್ಲಿ ಅವರೂ 'ಸಾಥ್' ಕೊಡುತ್ತಿದ್ದರು. ಅವರ ಜೊತೆ ಗೆಲ್ಲುವುದು ಕಷ್ಟವಾಗಿತ್ತಾದರೂ ಗೆದ್ದ ಅನುಭವವಿದೆ ನನಗೆ..! ಅನೌಪಚಾರಿಕವಾಗಿ ನಮ್ಮ ಹರಟೆಗಳು ಗಂಟೆಗಟ್ಟಲೆ ನೆಡೆಯುತ್ತಿದ್ದವು. ಸಂಪರ್ಕ, ಪ್ರವಾಸ ಪ್ರಿಯರಾಗಿದ್ದ ಅವರು ನನ್ನನ್ನು ಒಮ್ಮೆ ಕೊಪ್ಪದಲ್ಲಿರುವ ಕ್ರೈಸ್ತ ಪಾದ್ರಿಯವರ ಮನೆಗೆ ಸಂಪರ್ಕಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೆಡೆದ ಕ್ರೈಸ್ತ-ಹಿಂದೂ ಧರ್ಮದ ಬಗೆಗಿನ ಚರ್ಚೆ ಇಂದೂ ನನಗೆ ನೆನಪಿದೆ.

ಒಟ್ಟಿನಲ್ಲಿ ನಾವಿದ್ದ ಆರೂ ವರ್ಷ ಅವರು ಗುರುಕುಲದಲ್ಲಿ ಆಚಾರ್ಯರಾಗಿಯೇ ಇದ್ದರು. ನಂತರದಲ್ಲಿ ಭಾರತೀಯ ಇತಿಹಾಸ ಸಂಕಲನಾ ಸಮಿತಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು. ಗುರುಕುಲ ಬಿಟ್ಟ ನಂತರ ನನ್ನ ಮತ್ತು ಶ್ರೀನಿವಾಸ ಆಚಾರ್ಯರ ಸಂಪರ್ಕ ಕಡಿಮೆಯಾಗಿತ್ತಾದರೂ, ಪೂರ್ವ ಛತ್ರ ಸಭೆಗಳಲ್ಲಿ (Alumni meet) ಭೇಟಿಯಾದಾಗ ನಮ್ಮನ್ನು ಬಹಳ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನಮ್ಮ ನೆಚ್ಚಿನ ಆಚಾರ್ಯರ ಅಕಾಲಿಕ ನಿಧನ ಬಹಳ ದುಃಖ ತಂದಿದೆ. ಅವರ ಕುಟುಂಬಕ್ಕೆ, ಅಭಿಮಾನಿ ಬಳಗಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ. ಆಚಾರ್ಯರ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ ಎಂದು ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಆಷಾಢ-ಪೂರ್ಣಿಮೆ.
೧೬-೦೭-೨೦೧೯, ಬೆಂಗಳೂರು.