Saturday, 29 February 2020

ರೀಡಿಂಗ್ ಅನ್ನು ರೂಢಿಸಿಕೊಳ್ಳೋಣ

ರೀಡಿಂಗ್ ಅನ್ನು ರೂಢಿಸಿಕೊಳ್ಳೋಣ

ಇಂದಿನ ಕಾಲಮಾನದಲ್ಲಿ "ಓದುವುದು" ಎಂಬ ಪ್ರಕ್ರಿಯೆ ಶಾಲಾ-ಕಾಲೇಜು ಹಂತಕ್ಕಷ್ಟೇ ಸೀಮಿತವಾಗಿದೆ. ಕಾಲೇಜಿನ ನಂತರವೂ ಓದುವುದು ಒಂದು ನಿರರ್ಥಕ ಕ್ರಿಯೆ ಎಂಬ ಭಾವನೆ ನಮ್ಮಲ್ಲನೇಕರಿಗಿದೆ. ನಾವು ಇದಕ್ಕೆ ಬಹು ದೊಡ್ಡ ಕಾರಣ 'ಡಿಜಿಟಲೈಜೆಷನ್' ಅಂದುಕೊಂಡಿದ್ದೇವೆ. ಆದರೆ ನಾವೆಷ್ಟು ಜನ ಓದುವ ಪ್ರಕ್ರಿಯೆಯನ್ನು 'ಡಿಜಿಟಲ್' ರೂಪದಲ್ಲಿ ರೂಢಿಸಿಕೊಂಡಿದ್ದೇವೆ? ಬೆರಳೆಣಿಕೆಯಷ್ಟು ಮಾತ್ರ. ನಾನಿಲ್ಲಿ ಹೇಳಬಯಸುತ್ತಿರುವುದು 'ಓದು' ಎಂಬ ಪ್ರಕ್ರಿಯೆಯ ಕುರಿತೇ ವಿನಃ ಓದುವ ಮಾಧ್ಯಮದ ಕುರಿತಲ್ಲ. ಶಾಲಾ-ಕಾಲೇಜಿನ ನಂತರ  ನಾವೇಕೆ ಓದುವುದನ್ನು ನಿಲ್ಲಿಸುತ್ತೇವೆ ಎಂದು ಯೋಚಿಸಿದಾಗ ನನಗನಿಸಿದ್ದನ್ನುಇಲ್ಲಿ ಬರೆಯುತ್ತಿದ್ದೇನೆ.

ನಾವು ಓದುವ ರೂಢಿಯನ್ನು ಬಿಡಲು ಪ್ರಮುಖ ಕಾರಣ 'ಓದು' ಎನ್ನುವುದು ಒಂದು ಅಪ್ರಯೋಜಕ - ಅಪ್ರಸ್ತುತ ಕ್ರಿಯೆ ಅಂದುಕೊಂಡಿರುವುದೇ ಆಗಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಕೂಡ "ಓದುವುದು ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ" ಎಂಬ ಅಘೋಷಿತ ನಿಲುವನ್ನು ನಮ್ಮಲ್ಲಿ ತುಂಬಿಸಿದೆ. ಹಾಗಾಗಿ ಪರೀಕ್ಷೆ ಇಲ್ಲದೆ ಓದುವುದು ಅಪ್ರಸ್ತುತವಲ್ಲದೆ ಇನ್ನೇನು ಅನಿಸುವುದು ಸಹಜವೇ ಆಗಿದೆ. ಇದಕ್ಕೆ ಪೂರಕವಾಗಿ ನಮ್ಮಲ್ಲನೇಕರಿಗೆ "ಮಾಹಿತಿ" ಹಾಗೂ "ಜ್ಞಾನ" ಇವುಗಳ ನಡುವಿನ ಅಂತರ ತಿಳಿಯದಾಗಿದೆ. ಮಾಹಿತಿಯನ್ನೇ ಜ್ಞಾನ ಅಂದುಕೊಂಡಾಗ ನಿರಂತರ ಓದು ಅಪ್ರಯೋಜಕವಾಗುತ್ತದೆ. ಇಂದಿನ ಜೀವನ ಪದ್ಧತಿಯೂ ಸಹ ಮಾಹಿತಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಜ್ಞಾನಕ್ಕೆ ಕೊಡುವುದಿಲ್ಲ. ಈ ಕಾರಣದಿಂದಾಗಿಯೇ ನಿರಂತರ ಮಾಹಿತಿ ಬಿತ್ತರಿಸುವ 24X7 ನ್ಯೂಸ್  ಚಾನೆಲ್ ಗಳು ನಾಯಿಕೊಡೆಗಳಂತೆ ಎಲ್ಲಡೆ ಹಬ್ಬಿರುವುದು..! ಈ ರೀತಿಯ ಮಾಹಿತಿಗಳಿಗೆ ಮಾಧ್ಯಮವಾಗಿರುವುದರಿಂದ ತಾನೇ ಫೇಸ್ಬುಕ್ , ವಾಟ್ಸಪ್ಪ್ , ಟ್ವಿಟ್ಟರ್ ಗಳು ನಮ್ಮ ಜೀವನದ ಅಂಗವಾಗಿರುವುದು..!!

ಮಾಹಿತಿಗಳನ್ನು ಹೊಂದುವುದೇ ಪ್ರಮುಖವಾದಾಗ, ನಿರಂತರ ಓದುವುದು ಅಷ್ಟೇನೂ ಪ್ರಯೋಜನಕಾರಿಯಾಗುವುದಿಲ್ಲ. ಹಾಗಾಗಿ ನಾವು ಎಷ್ಟು ಬೇಕೋ ಅಷ್ಟು ಮಾಹಿತಿಯನ್ನು ಇಂಟರ್ನೆಟ್ ನಿಂದ ತೆಗೆದುಕೊಂಡು ಸುಮ್ಮನಾಗಿಬಿಡುತ್ತೇವೆ. (ಇದೆ ಇಂಟರ್ನೆಟ್ ಜ್ಞಾನಾರ್ಜನೆಗೆ ಬಹಳ ಒಳ್ಳೆಯ ಮಾಧ್ಯಮವಾಗಬಲ್ಲದು ಎಂಬುವುದೇ ಇನ್ನೊಂದು ಅಂಶ).  ಒಂದು ವಿಷಯವನ್ನು ಕುರಿತು ಕೆಲ ಪುಟಗಳನ್ನು ಓದುವುದು ನಿಜಕ್ಕೂ ಅಸಾಧ್ಯವಾಗಿ ಬಿಟ್ಟಿದೆ. ಕಾಲೇಜಿನಲ್ಲಿಯೇ ನೋಡಿ, ಟೆಕ್ಸ್ಟ್ ಬುಕ್, ರೆಫೆರೆನ್ಸ್ ಬುಕ್ ಗಳಿಗಿಂತ ಪ್ರೊಫೆಸರ್ ಕೊಡುವ ಜೆರಾಕ್ಸ್ ನೋಟ್ಸ್ ಗಳು ಹೆಚ್ಚು ಪ್ರಿಯವಾಗುತ್ತವೆ, ಅಲ್ಲವೇ? !

ಇದಕ್ಕೆ ಸರಿಯಾಗಿ ಇಂದಿನ ಧಾವಂತ ಜೀವನದಲ್ಲಿ ನಮಗೆ ಆಫೀಸ್ ಕೆಲಸ ಬಿಟ್ಟು ಬೇರೆ ಜೀವನವೇ ಇಲ್ಲದಂತಾಗಿದೆ. ೯-೧೨ ಘಂಟೆಗಳ ಆಫೀಸ್ ಕೆಲಸ, ಅದಕ್ಕೆ ೧-೨ ಘಂಟೆಗಳ ಪ್ರಯಾಣ..! ಕೆಲವರು ೧೦ ಘಂಟೆ ಕೆಲಸ ಮಾಡಲು ೫ ಘಂಟೆ ಪ್ರಯಾಣಿಸುವುದನ್ನೂ ನೋಡಿದ್ದೇನೆ. ಸಮಯವಷ್ಟೂ ಟ್ರಾಫಿಕ್ ನಲ್ಲಿ, ಆಫೀಸ್ ನಲ್ಲಿ ಹೋದರೆ ಓದುವ ಮಾತಿನ್ನೆಲ್ಲಿ, ಅಲ್ಲವೇ? ಹೀಗಾಗಿ ನಮಗೆ ಸಮಯವೇ ಇಲ್ಲದಾಗಿದೆ. ಇದ್ದರೂ ತಲೆಗೆ ಕೆಲಸ ಕೊಡದೇ ಸುಮ್ಮನೆ ಕಣ್ಣಾಡಿಸುವ ಫೇಸ್ಬುಕ್ , ವಾಟ್ಸಪ್ಪ್ ಗಳು ಹೆಚ್ಚು ಆಕರ್ಷಣೀಯವಾಗುತ್ತವೆ.

ಆದರೆ, ನಾವು ಜ್ಞಾನಾರ್ಜನೆಗಾಗಿ, ಹೊಸ ವಿಚಾರಗಳಿಗಾಗಿ ಓದುವುದನ್ನು ರೂಢಿಸಿಕೊಳ್ಳಬೇಕು. ಓದುವ ಮಾಧ್ಯಮ ಯಾವುದೇ ಇರಲಿ - ಅದು ಪುಸ್ತಕವೇ ಆಗಿರಲಿ ಅಥವಾ ಡಿಜಿಟಲ್ ಮಾಧ್ಯಮವೇ ಆಗಿರಲಿ, ನಿರಂತರ ಓದುವ ಹವ್ಯಾಸ ನಮ್ಮದಾಗಬೇಕು. ಓದುವುದು ನಮ್ಮ ಚಿಂತನಾ ಪ್ರಪಂಚಕ್ಕೆ ಹೊಸದಾದ ಪೂರಕ ಅಂಶಗಳನ್ನು ಸಂಗ್ರಹಿಸುತ್ತದೆ. ಒಳ್ಳೆಯ ಭಾಷಾ ಜ್ಞಾನವೂ ನಮ್ಮದಾಗುತ್ತದೆ. ಚಿಂತನಾ ಶಕ್ತಿಯನ್ನೂ ವೃದ್ಧಿಸುವಂತೆ ಮಾಡುತ್ತದೆ. ನಾವು ಗ್ರಂಥಾಲಯಗಳಿಗೆ ಭೇಟಿ ಕೊಡುವುದನ್ನು ಅಭ್ಯಸಿಸಿಕೊಳ್ಳಬೇಕು. ಅಲ್ಲಿರುವ ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶವಿದ್ದರೆ ಮನೆಗಳಲ್ಲಿ ಸಂಗ್ರಹಯೋಗ್ಯ ಪುಸ್ತಕಗಳನ್ನು ಇಟ್ಟುಕೊಳ್ಳಬೇಕು. ಮಕ್ಕಳಿಗೆ ಪಠ್ಯೇತರ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಮೊಬೈಲ್, ಲ್ಯಾಪ್ಟಾಪ್, ಬೈಕ್-ಕಾರ್ ಗಳಂತೆ ಪುಸ್ತಕಗಳೂ ನಮ್ಮ ಜೀವನದ ಭಾಗವಾಗಬೇಕು. ಒಟ್ಟಿನಲ್ಲಿ "ಓದುವುದು" ಒಂದು ದೈನಂದಿನ ಚಟುವಟಿಕೆಯಾಗಬೇಕು.

ಮಾಹಿತಿ ಎನ್ನುವುದು ಕ್ಷಣಿಕವಾದ ಆಗು-ಹೋಗುಗಳ ಸಂಗ್ರಹವಷ್ಟೇ. ಹಾಗಾಗಿಯೇ, ಇಂದಿನ ದಿನಪತ್ರಿಕೆ ನಾಳೆ ಹಳಸಾಗುವುದು. ಮಾಹಿತಿಗಳ ಆಗರಗಳಾದ ಫೇಸ್ಬುಕ್, ವಾಟ್ಸಪ್ಪ್, ಟ್ವಿಟ್ಟರ್ ಗಳಿಗೆ ಅರ್ಪಿಸುವ ಕೊಂಚ ಸಮಯವನ್ನು ಓದುವುದರಲ್ಲಿ ವಿನಿಯೋಗಿಸಿದರೆ  - ಬದುಕು ಹಸನಾಗುವುದಲ್ಲವೇ..?! ದಿನಕ್ಕೆ ಕೇವಲ ೩೦ ನಿಮಿಷಗಳನ್ನು ಓದಲು ನೀಡಿದರೂ ನಮ್ಮ ಚಿಂತನ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಕಾಣಬಹುದು.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಫಾಲುನ-ಶುಕ್ಲ-ಷಷ್ಠಿ,
೨೯-ಫೆಬ್ರುವರಿ-೨೦೨೦, ಶನಿವಾರ
ಬೆಂಗಳೂರು.