Showing posts with label Habit. Show all posts
Showing posts with label Habit. Show all posts

Sunday, 1 October 2023

ಬರೆಯುವುದೆಂದರೆ ಇಷ್ಟ - ಆದರೂ ಬಲು ಕಷ್ಟ !!

 ಬರೆಯುವುದೆಂದರೆ ಇಷ್ಟ - ಆದರೂ ಬಲು ಕಷ್ಟ !

ಬಹಳ ದಿನಗಳ ನಂತರ ಏನಾದರೂ ಬರೆಯಬೇಕೆನಿಸಿದ್ದರಿಂದ ಪೇಪರ್ - ಪೆನ್ ತೆಗೆದುಕೊಂಡೆ. ಆದರೆ ಭಾವನೆಗಳನ್ನು ಬರಹದ ರೂಪಕ್ಕೆ ಇಳಿಸುವುದು ಯಾಕೋ ಕಷ್ಟವೆನಿಸಿದಂತಾಯಿತು. ಇದು ಬಹಳ ದಿನಗಳ ಅಂತರದಿಂದಾಗಿಯೂ ಇರಬಹುದು. ಹಾಗಾಗಿ ಈ ಬರಹ ಬರಗಾಲದಲ್ಲಿ 'ಬರಹ' ದ ಬಗ್ಗೆಯೇ ಬರೆಯೋಣವೆನಿಸಿ ಮುಂದುವರಿಸುತ್ತಿದ್ದೇನೆ.

ಶೈಕ್ಷಣಿಕ ಉದ್ದೇಶದ ಹೊರತಾಗಿ ನಾನು ಬರೆಯಲು ಆರಂಭಿಸಿದ್ದು ನನ್ನ ವಿದ್ಯಾಸ್ಥಾನವಾದ ಪ್ರಬೋಧಿನಿ ಗುರುಕುಲದಲ್ಲಿ. ಗುರುಕುಲದಲ್ಲಿ ಅಪ್ಪ-ಅಮ್ಮನೊಂದಿಗೆ ಮೊಬೈಲ್/ ದೂರವಾಣಿಯಲ್ಲಿ ಮಾತನಾಡಲು ಅವಕಾಶವಿರಲಿಲ್ಲ. ಆ ದಿನಗಳಲ್ಲಿ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾನ್ಡ್ ಲೆಟರ್ ಬಳಸಿ ಪಾತ್ರಮುಖೇನವೇ ಪೋಷಕರನ್ನು ಸಂಪರ್ಕಿಸಬೇಕಿತ್ತು. 'ತೀರ್ಥರೂಪರಾದ ತಂದೆ-ತಾಯಿಯವರಿಗೆ ನನ್ನ ನಮಸ್ಕಾರಗಳು' ಎಂದು ಪತ್ರ ಆರಂಭಿಸುತ್ತಿದ್ದೆ, 'ಮತ್ತೆಲ್ಲಾ ಕ್ಷೇಮ' ಎಂದು ಮುಗಿಸುತ್ತಿದ್ದೆ. ೫೦ ಪೈಸೆಯ ಪೋಸ್ಟ್ ಕಾರ್ಡ್ ನಲ್ಲಿ ಅಪ್ಪ ಅಮ್ಮನಿಗೆ ಹೇಳಬೇಕಾದ್ದನ್ನು ಸಂಕ್ಷಿಪ್ತವಾಗಿ ಹೇಳುವುದೇ ಬಹುದೊಡ್ಡ ಶಿಕ್ಷಣ. ಅನೇಕರು ಉಳಿದವರಿಗೆ ಬರೆದ ಕೇವಲ ಪತ್ರಗಳೇ ಪುಸ್ತಕಗಳಾಗಿ ಸಂಪನ್ನವಾಗಿವೆ. ಪತ್ರವೆನ್ನುವುದು ಜರಡಿ ಇಳಿಸಿದ ಹಣ್ಣಿನ ರಸದಂತೆ...!

ಭಾವನೆಗಳನ್ನೂ, ಚಿಂತನೆಗಳನ್ನೂ ಮಾತಿನ ರೂಪದಲ್ಲಿ ವ್ಯಕ್ತ ಪಡಿಸುವುದಕ್ಕಿಂತ ಬರಹದ ರೂಪದಲ್ಲಿ ವ್ಯಕ್ತ ಪಡಿಸುವುದು ಏಕೆ ಕಷ್ಟ? ಬಹುಶ: ಬರಹವೆನ್ನುವುದು ಮಾತಿಗಿಂತಲೂ ಔಪಚಾರಿಕ ಮಾಧ್ಯಮವಾಗಿರುವುದರಿಂದ ಕಷ್ಟವೆನಿಸಬಹುದೇನೋ? ನಮ್ಮ ಭಾವನೆಗಳೋ ಅಥವಾ ಚಿಂತನೆಗಳೋ ಕೇವಲ ಮಾತಿಗಿಂತಲೂ ಬರಹದ ರೂಪದಲ್ಲಿ ವ್ಯಕ್ತವಾದಾಗ ಅದು ತನ್ನ ಅಳಿಸಲಾಗದ ಛಾಪನ್ನು ಮೂಡಿಸುತ್ತದೆ - ಮತ್ತು ಇದೇ ಕಾರಣದಿಂದಲೋ ಏನೋ ಜನ ಬರಹಕ್ಕೆ ಹಿಂಜರಿಯುತ್ತಾರೆ. ಮಾತಿನಲ್ಲೇ ಮನೆ ಕಟ್ಟುತ್ತಾರೆ! 

ಮಾತು ಕೇಳುಗರನ್ನು ಆಕರ್ಷಿಸುತ್ತದೆ, ದೃಶ್ಯ ನೋಡುಗರನ್ನು ಸೆಳೆಯುತ್ತದೆ, ಆದರೆ ಬರಹ ಓದುಗರನ್ನು ಉದ್ದೇಶಿಸಿರುತ್ತದೆ. ಓದುವುದು ಕೇಳುವುದಕ್ಕಿಂತ ಕಷ್ಟವಾದ್ದರಿಂದ ಅದರ ಮೂಲವಾದ ಬರಹ ಮಾತಿಗಿಂತಲೂ ಸ್ವಲ್ಪ ಕಷ್ಟ..! ಭಾವನೆ ಮಾತಿನ ರೂಪದಲ್ಲಿ ವ್ಯಕ್ತವಾದಾಗ ಧ್ವನಿಯ ಏರಿಳಿತ, ಅಂಗಾಂಗಗಳ ಚಲನೆ, ದೇಹದ ಭಾವ, ಕಣ್ಣಿನ ನೋಟ ಹೀಗೆ ಎಲ್ಲವೂ ಸಂವಹನಕ್ಕೆ ಸಹಕರಿಸುತ್ತವೆ, ಅದನ್ನು ಸುಲಭವಾಗಿಸುತ್ತದೆ. ಒಂದು ಕಣ್ಣೀರು ದುಃಖವನ್ನೂ, ತುಟಿಯ ಮೇಲಿನ ಒಂದು ನಗು ಸಂತೋಷವನ್ನೂ ಸೂಚಿಸುತ್ತದೆ. ಅದೇ ದುಃಖವನ್ನೋ, ಸಂತೋಷವನ್ನೋ ವ್ಯಕ್ತಪಡಿಸಲು ಬರಹಕ್ಕೆ ನಾಲ್ಕಾರು ವಾಕ್ಯಗಳೇ ಬೇಕಾಗಬಹುದು. ಏಕೆಂದರೆ ಬರಹ ಎನ್ನುವುದು ಸ್ವತಂತ್ರ ಸಂವಹನಾ ಮಾಧ್ಯಮ. ಇಲ್ಲಿ ಅಕ್ಷರಗಳೇ ಮಾತನಾಡಬೇಕಷ್ಟೆ. ಬರೆದದ್ದನ್ನು ಓದುಗ ಹೇಗೆ 'ಓದುತ್ತಾನೋ' ಅಲ್ಲ ಹೇಗೆ 'ಸ್ವೀಕರಿಸುತ್ತಾನೋ' ಹಾಗೆ ಅದು ಅರ್ಥವಾಗುತ್ತದೆ. ಬರಹಗಾರನ ಬರಹದ 'ದುಃಖ', ಓದುಗನ ಕೈಯಲ್ಲಿ 'ಸಂತೋಷ' ವಾಗಿ ಬದಲಾದರೆ ಅದು ವಿಪರ್ಯಾಸವೇ ಸರಿ. ಇದು ಬರಹಗಾರನಿಗೆ ಇರುವ ಸವಾಲಷ್ಟೇ.

ಬರಹ ಬಹಳ ಶಕ್ತಿಶಾಲಿಯಾದ ಸಂವಹನಾ ಮಾಧ್ಯಮ. ಚಿಂತನೆಗಳನ್ನು ಕಾಗದದ ಮೇಲೆ ವ್ಯವಸ್ಥಿತವಾಗಿ ಬಟ್ಟಿ ಇಳಿಸುವ ಪ್ರಕ್ರಿಯೆಯೇ ಬರಹ. ಆಗಲೇ ಹೇಳಿದಂತೆ ಬರಹವೊಂದು ಔಪಚಾರಿಕ ಮಾಧ್ಯಮವಾಗಿರುವುದರಿಂದ ಇಲ್ಲಿ ವ್ಯಕ್ತವಾಗುವ ಭಾವನೆಗಳೂ, ಚಿಂತನೆಗಳೂ ವ್ಯವಸ್ಥಿತ ವಿಧಾನವನ್ನು ಅಪೇಕ್ಷಿಸುತ್ತವೆ. ಭಾಷೆಯ ತಕ್ಕಮಟ್ಟಿನ ಪ್ರೌಢಿಮೆಯೂ (ಮಾತಿಗಿಂತ) ಅಗತ್ಯವೆನಿಸುತ್ತದೆ. ಈ ಕಾರಣದಿಂದಾಗಿ ಬರಹಗಾರ ಸ್ವಲ್ಪಮಟ್ಟಿನ ಶ್ರಮವಹಿಸಬೇಕಾಗುತ್ತದೆ. ಇಂದು ನಾವಾಡಿದ ಮಾತು ಕೆಲವು ಕಾಲಾನಂತರ ಮರೆತು ಹೋಗಬಹುದು - ಇದು ಮಾತಿಗಿರುವ ಶಾಪ ಮತ್ತು ವರವೂ ಆಗಿದೆ. ಆದರೆ ಒಮ್ಮೆ ಅಚ್ಚಾದ ಬರಹ ಎಂದಿಗೂ ಅಚ್ಚಳಿಯದಂತೆ ಇತಿಹಾಸ ಸೇರುತ್ತದೆ. ಸಾರ್ವಕಾಲಿಕವಾಗುತ್ತದೆ. ಅಮರವಾಗುತ್ತದೆ. ಅಳಿದು ಹೋದ ರಾಜ-ಮಹಾರಾಜರುಗಳ ಬಗ್ಗೆ, ಕಳೆದು ಹೋದ ಸಾಮ್ರಾಜ್ಯಗಳ ಬಗ್ಗೆ ನಮಗೆ ತಿಳಿದಿರುವುದು ಅವರು ಬರೆಸಿದ ಎಂದೂ ಅಳಿಸದ ಶಾಸನ ಬರಹಗಳಿಂದಲೇ ಅಲ್ಲವೇ? ಹಾಗೆಯೇ ಅನೇಕರು ತಮ್ಮ ತರಹೇವಾರಿ ಬರಹಗಳಿಂದಲೇ ಇಂದಿಗೂ ಜೀವಂತವಾಗಿರುವರಲ್ಲವೇ?

ಚೌಕಟ್ಟಿಲ್ಲದ ಮಾತಿನ ಅವತರಿಣಿಕೆಗೆ ಹರಟೆ ಅನ್ನುತ್ತೇವೆ. ಕಾಲ ಹರಣವೇ ಮಾತಿನ ಉದ್ದೇಶವಾಗಿದ್ದರೆ ಅದು ಹಾಳು-ಹರಟೆಯಾಗುತ್ತದೆ. ಈ ಸಾಧ್ಯತೆ ಬರವಣಿಗೆಯಲ್ಲಿ ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಬರಹದಲ್ಲಿ ಮುಂದಿನ ಸಾಲು ಹಿಂದಿನ ಸಾಲನ್ನು ಅನುಸರಿಸಲೇ ಬೇಕು. ಇಲ್ಲವಾದರೆ ಅದನ್ನು ನಾವು ಅಳಿಸಿ ಸರಿಪಡಿಸಬೇಕಾಗುತ್ತದೆ. ಹಾಳು-ಹರಟೆಯಂತಲ್ಲ ಬರಹ. ಬರವಣಿಗೆ ನಮ್ಮನ್ನು ಅಧ್ಯಯನಶೀಲರನ್ನಾಗಿಸುತ್ತದೆ. ಓದುಗರನ್ನಾಗಿಸುತ್ತದೆ. ಒಳ್ಳೆಯ ಓದುಗನಷ್ಟೇ ಅದ್ಭುತ ಬರಹಗಾರನಾಗಬಲ್ಲ. ಆಳಾಗಿ ಬಲ್ಲವನು ಅರಸನಾಗಿ ಬಲ್ಲನಂತೆ, ಓದುಗನಾಗಿ ಬಲ್ಲವನು ಬರಹಗಾರನಾಗಬಲ್ಲ. 

ಇಂದು ನಾವು ಬರೆಯುವುದೇ ಇಲ್ಲ. ಕಾಲೇಜಿನಲ್ಲಿ ಹಾಕಿದ ಪೆನ್ನಿನ ಕ್ಯಾಪ್ ಅನ್ನು ತೆಗೆಯುವುದೇ ಇಲ್ಲ..! ಅಲ್ಲಿಗೆ ಅದರ ಋಣ ತೀರಿದಂತೆ. ನಮ್ಮಲ್ಲಿ ಅನೇಕರಿಗೆ ಪೆನ್ ಅನಗತ್ಯ ಅನುಪಯುಕ್ತ ಅಪ್ರಯೋಜಕ ವಸ್ತುವಾಗಿದೆ. ಬ್ಯಾಂಕಿನಲ್ಲಿ ಸಹಿ ಹಾಕಲು ಪೆನ್ ಬೇಕಾದಾಗ ಪಕ್ಕದವರ ಬಳಿ ತೆಗೆದುಕೊಂಡರಾಯಿತು..! 

ಮೊಬೈಲ್ ಮತ್ತು ಕಂಪ್ಯೂಟರ್ ಗಳು ಬರಹದ ಅವಶ್ಯಕತೆಗಳನ್ನು ಕಡಿಮೆ ಮಾಡಿದಂತೆ ಅನ್ನಿಸುತ್ತದೆ. ಆದರೆ ಅದು ವ್ಯವಹಾರದ ಅವಶ್ಯಕತೆಗಷ್ಟೇ ಸೀಮಿತವಾಗಬೇಕಲ್ಲವೇ? ಬರಹ ಅಷ್ಟು ನಿರುಪಯುಕ್ತವಾಯಿತೇ? ಸಂವಹನಾ ಮಾಧ್ಯಮವಾಗಿ ಮೊಬೈಲ್ / ದೂರವಾಣಿಗಳು ಹಳೆಯ ಪತ್ರಗಳಿಗಿಂತ ನೂರು ಪಟ್ಟು ವಾಸಿ. ಕೈ ಬರಹದ 'ಅರ್ಜಿ' ಗಿಂತ 'ಆನ್ಲೈನ್ ಅಪ್ಲಿಕೇಶನ್' ಸಾವಿರ ಪಟ್ಟು ವಾಸಿ. ಆದರೆ ಬರಹದ ಮಿತಿ ಅಷ್ಟೇ ಅಲ್ಲವಲ್ಲ. ಸಂವಹನೆಯ ದೃಷ್ಟಿಯಿಂದ ಅನೇಕ ಮಾಧ್ಯಮಗಳು ಇಂದು ಲಭ್ಯವಿದ್ದರೂ ಬರಹದ ಮಹತ್ವವನ್ನು ತಗ್ಗಿಸಲಾರವು. ವ್ಯವಹಾರಕ್ಕೆ ಹೊರತಾದ ಬರವಣಿಗೆಯನ್ನು ರೂಢಿಸಿಕೊಳ್ಳಲೇ ಬೇಕೆನ್ನುವವನು ನಾನು. ಅದು ನಮ್ಮ ಚಿಂತನಾ ಸರಣಿಯನ್ನು ಸರಳೀಕರಿಸುತ್ತದೆ. ಸಹಿ ಹಾಕುವುದು, ಅರ್ಜಿಗಳನ್ನು ತುಂಬುವುದನ್ನು ಹೊರತುಪಡಿಸಿ ವರ್ಷಕ್ಕೆ ಒಂದು ಪೆನ್ನನ್ನಾದರೂ ಖಾಲಿ ಮಾಡಬೇಕು. ನಮ್ಮ ಚಿಂತನೆಗಳನ್ನು ಬರಹರೂಪಕ್ಕೆ ಇಳಿಸಿ ವಿಮರ್ಶೆಗೊಳಪಡಿಸಿಕೊಳ್ಳಬೇಕು..!!

ಕೊನೆಯ ಹನಿ: ಬರೆಯಬೇಕೆಂಬ ಹಂಬಲವೇ ನಮ್ಮನ್ನು ಬರಹಗಾರರನ್ನಾಗಿ ಮಾಡಬಲ್ಲದು. ಬರೆಯೋಣ, ಮತ್ತೆ ಬೆಳೆಯೋಣ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಭಾದ್ರಪದ-ಕೃಷ್ಣ-ದ್ವಿತೀಯಾ.
೦೧-ಅಕ್ಟೋಬರ್-೨೦೨೩, ಭಾನುವಾರ.
ಬೆಂಗಳೂರು.

Saturday, 11 December 2021

ಹವ್ಯಾಸಗಳಿಗೆ ಹಾಯ್! ಅನ್ನೋಣ

ಹವ್ಯಾಸಗಳಿಗೆ ಹಾಯ್! ಅನ್ನೋಣ!!   

ನಾನು ಮೊದಲಿನಿಂದಲೂ ಕೂಡ ಸ್ವಲ್ಪ ಓದುವ ಹಾಗೇ ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೆ. ಆದರೆ, ಈ ಹವ್ಯಾಸ ಕ್ರಮೇಣ ದೂರವಾಗುತ್ತಾ ಬಂದಿದ್ದನ್ನು ಗಮನಿಸಲೇ ಇಲ್ಲ..! ಕೆಲ ದಿನಗಳ ಹಿಂದೆ ನನ್ನ ತಲೆಯಲ್ಲಿ ಬರುವ ಯೋಚನೆ - ಚಿಂತನೆಗಳನ್ನು ಕಾಗದದಲ್ಲಿ ಮೂಡಿಸಬೇಕೆಂದು ಕುಳಿತಾಗ, ಬಹಳ ಅಸಾಧ್ಯವೇನೂ ಅನ್ನಿಸುವಷ್ಟು ನನ್ನ ಬರೆಯುವ ಹವ್ಯಾಸ ನನ್ನಿಂದ ದೂರವಾದದ್ದು ಭಾಸವಾಗಿತ್ತು. ಹವ್ಯಾಸಗಳೇ ಹಾಗೇ. ನಾವದನ್ನು ಸಾಕಿ-ಸಲಹ ಬೇಕು, ಇಲ್ಲವೇ ದೂರವಾಗುತ್ತವೆ. ಇದು ಬರವಣಿಗೆಗಷ್ಟೇ ಸೀಮಿತವಲ್ಲ. ಸಂಗೀತ, ಕವನ ರಚನೆ, ಚಿತ್ರ ಬಿಡಿಸುವುದು, ನೃತ್ಯ, ಕೊಳಲು, ತಬಲ, ಗಿಟಾರ್ ಇತ್ಯಾದಿ ವಾದನಗಳು..... ಹೀಗೆ ಎಲ್ಲ ಹವ್ಯಾಸಗಳಿಗೂ ಅನ್ವಯವಾಗುತ್ತದೆ. ಅಭ್ಯಾಸದಲ್ಲಿದ್ದರೆ ಮಾತ್ರ ಹವ್ಯಾಸ ನಮ್ಮಲ್ಲಿ ಜೀವಂತವಾಗಿದ್ದು ಜೀವನವನ್ನು ರಸಭರಿತವಾಗಿರಿಸಿರುತ್ತದೆ. 

ಒಮ್ಮೆ ಅವಲೋಕಿಸಿದರೆ ನನ್ನಲ್ಲೇ ಮೂಡುವ ಪ್ರಶ್ನೆ - ಹವ್ಯಾಸಗಳು ನಮಗೇಕೆ ಬೇಕು? ಹವ್ಯಾಸಗಳೇ ಇಲ್ಲದೆ ಜೀವನ ಸಾಧ್ಯವಿಲ್ಲವೇ? ನಮ್ಮಲ್ಲೇ ಅನೇಕರಿಗೆ ಹವ್ಯಾಸ ಬಿಡಿ, ಯಾವುದೇ ನಿಯಮಿತ ಅಭ್ಯಾಸಗಳೂ ಸಹ ಇರುವುದಿಲ್ಲ. ಈ ಹವ್ಯಾಸಗಳೊಂದ ನಮಗೇನಾದರೂ ಪ್ರಯೋಜನವಾದರೂ ಉಂಟೆ? ಮುಂದುವರಿದರೆ ಅನಿಸುತ್ತದೆ - ಖಂಡಿತ ಉಂಟೆಂದು...!! ಹವ್ಯಾಸಗಳು ದೀರ್ಘಾವಧಿಯಲ್ಲಿ ನಮ್ಮಲ್ಲೊಂದು ನೆಮ್ಮದಿಯನ್ನು ಮೂಡಿಸುವುದನ್ನು ಕಂಡಿದ್ದೇನೆ. ಅದು ಒಂಟಿತನವನ್ನು ದೂರವಾಗಿಸುತ್ತದೆ. ನಮ್ಮನ್ನು ಪರಿಣಿತರನ್ನಾಗಿಸುತ್ತದೆ. 

ಅನೇಕರು ತಮ್ಮಲ್ಲಿರುವ ಹವ್ಯಾಸಗಳನ್ನು ಪೋಷಿಸಿ, ಅದನ್ನೇ ಪವೃತ್ತಿಯನ್ನಾಗಿಸಿ, ಕ್ರಮೇಣ ವೃತ್ತಿಯನ್ನಾಗಿರಿಸಿಕೊಂಡಿರುತ್ತಾರೆ. ಪ್ರಸಿದ್ಧ ಸಂಗೀತಗಾರರು, ಚಿತ್ರಕಲಾಕಾರರು, ಬರಹಗಾರರು, ಹಾಸ್ಯ ಕಲಾವಿದರು......ಹೀಗೆ. ಇನ್ನು ಕೆಲವರು ಹವ್ಯಾಸಗಳನ್ನು ವೃತ್ತಿಯಾಗಲ್ಲದಿದ್ದರೂ, ಪ್ರವೃತ್ತಿಯನ್ನಾಗಿರಿಸಿಕೊಂಡಿರುತ್ತಾರೆ. ನಾಟಕಕಾರರು, ವನ್ಯಜೀವಿ ಛಾಯಾಗ್ರಾಹಕರು, ಹವ್ಯಾಸಿ ಲೇಖಹರು...ಇತ್ಯಾದಿ.  ಮತ್ತೆ ಕೆಲವರು ತಮ್ಮಲ್ಲಿರುವ ಹವ್ಯಾಸವನ್ನು ಕೇವಲ ಹವ್ಯಾಸದ ಹಂತದಲ್ಲಿಯೇ ಇರಿಸಿಕೊಂಡಿರುತ್ತಾರೆ. ನಾನು ಈ ಗುಂಪಿನಲ್ಲಿ ಬರುತ್ತೇನೆ ಅನ್ನಿಸುತ್ತದೆ.  ಚಿಂತನೆಗಳಿಗೆ ಅಕ್ಷರದ ರೂಪ ಕೊಡುವ ಹವ್ಯಾಸ ನನ್ನದು. ಈಗ ಕಷ್ಟಪಟ್ಟು ಈ ಹವ್ಯಾಸವನ್ನು ಮತ್ತೆ ಚಿಗುರಿಸುವ ಪ್ರಯತ್ನ ಮಾಡುತ್ತಿದ್ದೇನೆ. 

ನನ್ನ ಪ್ರಕಾರ ಉತ್ತಮ ಹವ್ಯಾಸಗಳು ನಮ್ಮಲ್ಲಿರಲೇ ಬೇಕು - ಇಲ್ಲದಿದ್ದರೆ ಕಷ್ಟಪಟ್ಟು ರೂಢಿಸಿಕೊಳ್ಳಬೇಕು. ಹವ್ಯಾಸಗಳು ನಮ್ಮೊಂದಿಗೆ ನಾವೇ ಮಾತನಾಡಿಕೊಳ್ಳುವ ವಿಧಾನವೂ ಹೌದು, ನಮ್ಮನ್ನು ನಮಗೇ ಅರ್ಥ ಮಾಡಿಸುವ ಸಾಧನವೂ ಹೌದು. ಹವ್ಯಾಸ ನಮ್ಮನ್ನು engage  ಮಾಡಿಡುತ್ತದೆ (ತೊಡಗಿಸಿಡುತ್ತದೆ). Let me put it in another way ! ನಾವು ಸ್ವಭಾವ ಸಹಜ ಯಾವಾಗಲೂ engage ಆಗಿಯೇ ಇರುತ್ತೇವೆ. ಉತ್ತಮ ಹವ್ಯಾಸಗಳು ಇರದೇ ಇದ್ದಾಗ ಅದರ ಜಾಗವನ್ನು ಬೇರೆಯವು ಆಕ್ರಮಿಸಿಕೊಳ್ಳುತ್ತವೆ ಅಷ್ಟೇ. 

ನನ್ನಲ್ಲಿ ನಾನೇ ಕಂಡುಕೊಂಡಂತೆ, ಏನು ಮಾಡಬೇಕೆಂದು ತೋಚದೇ ಇದ್ದಾಗ ನನ್ನನ್ನು Facebook ಓಗೊಟ್ಟು ಕರೆಯುತ್ತದೆ. ಸಮಯ ಹೋದದ್ದೇ ತಿಳಿಯುವುದಿಲ್ಲ. ಅಷ್ಟರಲ್ಲಿ, Twitter , Whatsapp ಗಳು ತಮ್ಮನ್ನು ಸಹ ಮಾತನಾಡಿಸುವಂತೆ ಅಳುತ್ತವೆ! ಇವರನ್ನು ಮಾತನಾಡಿಸಿ ಮುಗಿಸುವ ವೇಳೆಗೆ, Instagram ನೆನಪಾಗುತ್ತದೆ. ಇಷ್ಟರ ಮಧ್ಯೆ ನನ್ನ ಓದುವ - ಬರೆಯುವ ಹವ್ಯಾಸ ಒಂದು ಹೆಜ್ಜೆ ಹಿಂದೆ ಹಾಕಿರುತ್ತದೆ. ನಾನು ಇದನ್ನು ಗಮನಿಸಿಕೊಂಡಾಗ ಬಹಳ ಪ್ರಯತ್ನ ಮಾಡಿ ಏನಾದರೂ ಓದಬೇಕು - ಬರೆಯಬೇಕು ಅಂದುಕೊಂಡೆ. ಆದರೆ ಹಳೆಯ ಅಭ್ಯಾಸ ಮತ್ತೆ ನನ್ನನ್ನು Mobile ಕಡೆಗೆ ಕೊಂಡೊಯ್ಯುವುದನ್ನು ಗಮನಿಸಿದೆ. ಅದೇಕೆ ಹೀಗೆ ಎಂದು ಯೋಚಿಸಿದಾಗ, ನನಗನಿಸಿದ್ದು - ಅಲ್ಲಿ ನಿಶ್ಚಿತ ಗುರಿ ಇಲ್ಲ, ಹಾಗೆಯೇ ಯಾವುದೇ ಶ್ರಮ ಇಲ್ಲ...! ಆದರೆ ಹವ್ಯಾಸಗಳು ಹಾಗಲ್ಲ - ಸ್ವಲ್ಪ ಶ್ರಮ ಬೇಕೇ ಬೇಕು - They demand time , they demand attention . ಹಾಗಾಗಿಯೇ ಅನೇಕರ ಉತ್ತಮ ಹವ್ಯಾಸಗಳನ್ನು ಮೊಬೈಲ್ ನುಂಗಿ ಹಾಕುತ್ತದೆ. ಕಾಲ ಕ್ರಮೇಣ Mobile ನಲ್ಲಿ Apps ಅನ್ನು switch ಮಾಡುವುದೇ ಹವ್ಯಾಸವಾಗಿಬಿಡುತ್ತದೆ...!! ಇದು ನನ್ನ ಅನುಭವವೂ ಹೌದು. 

ನಮ್ಮ ಹವ್ಯಾಸ ನಮಗಷ್ಟೇ ಅಲ್ಲದೆ ಇತರರಿಗೂ ಖುಷಿಯನ್ನುಂಟು ಮಾಡಿದರೆ - That's great !!

ಕೊನೆಯ ಹನಿ: ಹವ್ಯಾಸಗಳು ನಮಗಿರಬೇಕು. ಇಲ್ಲದಿದ್ದರೆ ರೂಢಿಸಿಕೊಳ್ಳಬೇಕು. ಅದೊಂಥರಾ Investment ಇದ್ದಹಾಗೆ. The early we invest, the more we invest - results in more returns....!! So , ದುರಭ್ಯಾಸಗಳಿಗೆ ವೇಸ್ಟ್ ಮಾಡುವ ಬದಲು ಹವ್ಯಾಸಗಳಿಗೆ ಇನ್ವೆಸ್ಟ್ ಮಾಡೋಣ...!

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಮಾರ್ಗಶೀರ್ಷ-ಶುಕ್ಲ-ನವಮಿ, ಭಾನುವಾರ.
೧೨-ಡಿಸೆಂಬರ್-೨೦೨೧ , ಭಾನುವಾರ.
ಬೆಂಗಳೂರು.


Saturday, 29 February 2020

ರೀಡಿಂಗ್ ಅನ್ನು ರೂಢಿಸಿಕೊಳ್ಳೋಣ

ರೀಡಿಂಗ್ ಅನ್ನು ರೂಢಿಸಿಕೊಳ್ಳೋಣ

ಇಂದಿನ ಕಾಲಮಾನದಲ್ಲಿ "ಓದುವುದು" ಎಂಬ ಪ್ರಕ್ರಿಯೆ ಶಾಲಾ-ಕಾಲೇಜು ಹಂತಕ್ಕಷ್ಟೇ ಸೀಮಿತವಾಗಿದೆ. ಕಾಲೇಜಿನ ನಂತರವೂ ಓದುವುದು ಒಂದು ನಿರರ್ಥಕ ಕ್ರಿಯೆ ಎಂಬ ಭಾವನೆ ನಮ್ಮಲ್ಲನೇಕರಿಗಿದೆ. ನಾವು ಇದಕ್ಕೆ ಬಹು ದೊಡ್ಡ ಕಾರಣ 'ಡಿಜಿಟಲೈಜೆಷನ್' ಅಂದುಕೊಂಡಿದ್ದೇವೆ. ಆದರೆ ನಾವೆಷ್ಟು ಜನ ಓದುವ ಪ್ರಕ್ರಿಯೆಯನ್ನು 'ಡಿಜಿಟಲ್' ರೂಪದಲ್ಲಿ ರೂಢಿಸಿಕೊಂಡಿದ್ದೇವೆ? ಬೆರಳೆಣಿಕೆಯಷ್ಟು ಮಾತ್ರ. ನಾನಿಲ್ಲಿ ಹೇಳಬಯಸುತ್ತಿರುವುದು 'ಓದು' ಎಂಬ ಪ್ರಕ್ರಿಯೆಯ ಕುರಿತೇ ವಿನಃ ಓದುವ ಮಾಧ್ಯಮದ ಕುರಿತಲ್ಲ. ಶಾಲಾ-ಕಾಲೇಜಿನ ನಂತರ  ನಾವೇಕೆ ಓದುವುದನ್ನು ನಿಲ್ಲಿಸುತ್ತೇವೆ ಎಂದು ಯೋಚಿಸಿದಾಗ ನನಗನಿಸಿದ್ದನ್ನುಇಲ್ಲಿ ಬರೆಯುತ್ತಿದ್ದೇನೆ.

ನಾವು ಓದುವ ರೂಢಿಯನ್ನು ಬಿಡಲು ಪ್ರಮುಖ ಕಾರಣ 'ಓದು' ಎನ್ನುವುದು ಒಂದು ಅಪ್ರಯೋಜಕ - ಅಪ್ರಸ್ತುತ ಕ್ರಿಯೆ ಅಂದುಕೊಂಡಿರುವುದೇ ಆಗಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಕೂಡ "ಓದುವುದು ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ" ಎಂಬ ಅಘೋಷಿತ ನಿಲುವನ್ನು ನಮ್ಮಲ್ಲಿ ತುಂಬಿಸಿದೆ. ಹಾಗಾಗಿ ಪರೀಕ್ಷೆ ಇಲ್ಲದೆ ಓದುವುದು ಅಪ್ರಸ್ತುತವಲ್ಲದೆ ಇನ್ನೇನು ಅನಿಸುವುದು ಸಹಜವೇ ಆಗಿದೆ. ಇದಕ್ಕೆ ಪೂರಕವಾಗಿ ನಮ್ಮಲ್ಲನೇಕರಿಗೆ "ಮಾಹಿತಿ" ಹಾಗೂ "ಜ್ಞಾನ" ಇವುಗಳ ನಡುವಿನ ಅಂತರ ತಿಳಿಯದಾಗಿದೆ. ಮಾಹಿತಿಯನ್ನೇ ಜ್ಞಾನ ಅಂದುಕೊಂಡಾಗ ನಿರಂತರ ಓದು ಅಪ್ರಯೋಜಕವಾಗುತ್ತದೆ. ಇಂದಿನ ಜೀವನ ಪದ್ಧತಿಯೂ ಸಹ ಮಾಹಿತಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಜ್ಞಾನಕ್ಕೆ ಕೊಡುವುದಿಲ್ಲ. ಈ ಕಾರಣದಿಂದಾಗಿಯೇ ನಿರಂತರ ಮಾಹಿತಿ ಬಿತ್ತರಿಸುವ 24X7 ನ್ಯೂಸ್  ಚಾನೆಲ್ ಗಳು ನಾಯಿಕೊಡೆಗಳಂತೆ ಎಲ್ಲಡೆ ಹಬ್ಬಿರುವುದು..! ಈ ರೀತಿಯ ಮಾಹಿತಿಗಳಿಗೆ ಮಾಧ್ಯಮವಾಗಿರುವುದರಿಂದ ತಾನೇ ಫೇಸ್ಬುಕ್ , ವಾಟ್ಸಪ್ಪ್ , ಟ್ವಿಟ್ಟರ್ ಗಳು ನಮ್ಮ ಜೀವನದ ಅಂಗವಾಗಿರುವುದು..!!

ಮಾಹಿತಿಗಳನ್ನು ಹೊಂದುವುದೇ ಪ್ರಮುಖವಾದಾಗ, ನಿರಂತರ ಓದುವುದು ಅಷ್ಟೇನೂ ಪ್ರಯೋಜನಕಾರಿಯಾಗುವುದಿಲ್ಲ. ಹಾಗಾಗಿ ನಾವು ಎಷ್ಟು ಬೇಕೋ ಅಷ್ಟು ಮಾಹಿತಿಯನ್ನು ಇಂಟರ್ನೆಟ್ ನಿಂದ ತೆಗೆದುಕೊಂಡು ಸುಮ್ಮನಾಗಿಬಿಡುತ್ತೇವೆ. (ಇದೆ ಇಂಟರ್ನೆಟ್ ಜ್ಞಾನಾರ್ಜನೆಗೆ ಬಹಳ ಒಳ್ಳೆಯ ಮಾಧ್ಯಮವಾಗಬಲ್ಲದು ಎಂಬುವುದೇ ಇನ್ನೊಂದು ಅಂಶ).  ಒಂದು ವಿಷಯವನ್ನು ಕುರಿತು ಕೆಲ ಪುಟಗಳನ್ನು ಓದುವುದು ನಿಜಕ್ಕೂ ಅಸಾಧ್ಯವಾಗಿ ಬಿಟ್ಟಿದೆ. ಕಾಲೇಜಿನಲ್ಲಿಯೇ ನೋಡಿ, ಟೆಕ್ಸ್ಟ್ ಬುಕ್, ರೆಫೆರೆನ್ಸ್ ಬುಕ್ ಗಳಿಗಿಂತ ಪ್ರೊಫೆಸರ್ ಕೊಡುವ ಜೆರಾಕ್ಸ್ ನೋಟ್ಸ್ ಗಳು ಹೆಚ್ಚು ಪ್ರಿಯವಾಗುತ್ತವೆ, ಅಲ್ಲವೇ? !

ಇದಕ್ಕೆ ಸರಿಯಾಗಿ ಇಂದಿನ ಧಾವಂತ ಜೀವನದಲ್ಲಿ ನಮಗೆ ಆಫೀಸ್ ಕೆಲಸ ಬಿಟ್ಟು ಬೇರೆ ಜೀವನವೇ ಇಲ್ಲದಂತಾಗಿದೆ. ೯-೧೨ ಘಂಟೆಗಳ ಆಫೀಸ್ ಕೆಲಸ, ಅದಕ್ಕೆ ೧-೨ ಘಂಟೆಗಳ ಪ್ರಯಾಣ..! ಕೆಲವರು ೧೦ ಘಂಟೆ ಕೆಲಸ ಮಾಡಲು ೫ ಘಂಟೆ ಪ್ರಯಾಣಿಸುವುದನ್ನೂ ನೋಡಿದ್ದೇನೆ. ಸಮಯವಷ್ಟೂ ಟ್ರಾಫಿಕ್ ನಲ್ಲಿ, ಆಫೀಸ್ ನಲ್ಲಿ ಹೋದರೆ ಓದುವ ಮಾತಿನ್ನೆಲ್ಲಿ, ಅಲ್ಲವೇ? ಹೀಗಾಗಿ ನಮಗೆ ಸಮಯವೇ ಇಲ್ಲದಾಗಿದೆ. ಇದ್ದರೂ ತಲೆಗೆ ಕೆಲಸ ಕೊಡದೇ ಸುಮ್ಮನೆ ಕಣ್ಣಾಡಿಸುವ ಫೇಸ್ಬುಕ್ , ವಾಟ್ಸಪ್ಪ್ ಗಳು ಹೆಚ್ಚು ಆಕರ್ಷಣೀಯವಾಗುತ್ತವೆ.

ಆದರೆ, ನಾವು ಜ್ಞಾನಾರ್ಜನೆಗಾಗಿ, ಹೊಸ ವಿಚಾರಗಳಿಗಾಗಿ ಓದುವುದನ್ನು ರೂಢಿಸಿಕೊಳ್ಳಬೇಕು. ಓದುವ ಮಾಧ್ಯಮ ಯಾವುದೇ ಇರಲಿ - ಅದು ಪುಸ್ತಕವೇ ಆಗಿರಲಿ ಅಥವಾ ಡಿಜಿಟಲ್ ಮಾಧ್ಯಮವೇ ಆಗಿರಲಿ, ನಿರಂತರ ಓದುವ ಹವ್ಯಾಸ ನಮ್ಮದಾಗಬೇಕು. ಓದುವುದು ನಮ್ಮ ಚಿಂತನಾ ಪ್ರಪಂಚಕ್ಕೆ ಹೊಸದಾದ ಪೂರಕ ಅಂಶಗಳನ್ನು ಸಂಗ್ರಹಿಸುತ್ತದೆ. ಒಳ್ಳೆಯ ಭಾಷಾ ಜ್ಞಾನವೂ ನಮ್ಮದಾಗುತ್ತದೆ. ಚಿಂತನಾ ಶಕ್ತಿಯನ್ನೂ ವೃದ್ಧಿಸುವಂತೆ ಮಾಡುತ್ತದೆ. ನಾವು ಗ್ರಂಥಾಲಯಗಳಿಗೆ ಭೇಟಿ ಕೊಡುವುದನ್ನು ಅಭ್ಯಸಿಸಿಕೊಳ್ಳಬೇಕು. ಅಲ್ಲಿರುವ ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅವಕಾಶವಿದ್ದರೆ ಮನೆಗಳಲ್ಲಿ ಸಂಗ್ರಹಯೋಗ್ಯ ಪುಸ್ತಕಗಳನ್ನು ಇಟ್ಟುಕೊಳ್ಳಬೇಕು. ಮಕ್ಕಳಿಗೆ ಪಠ್ಯೇತರ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು. ಮೊಬೈಲ್, ಲ್ಯಾಪ್ಟಾಪ್, ಬೈಕ್-ಕಾರ್ ಗಳಂತೆ ಪುಸ್ತಕಗಳೂ ನಮ್ಮ ಜೀವನದ ಭಾಗವಾಗಬೇಕು. ಒಟ್ಟಿನಲ್ಲಿ "ಓದುವುದು" ಒಂದು ದೈನಂದಿನ ಚಟುವಟಿಕೆಯಾಗಬೇಕು.

ಮಾಹಿತಿ ಎನ್ನುವುದು ಕ್ಷಣಿಕವಾದ ಆಗು-ಹೋಗುಗಳ ಸಂಗ್ರಹವಷ್ಟೇ. ಹಾಗಾಗಿಯೇ, ಇಂದಿನ ದಿನಪತ್ರಿಕೆ ನಾಳೆ ಹಳಸಾಗುವುದು. ಮಾಹಿತಿಗಳ ಆಗರಗಳಾದ ಫೇಸ್ಬುಕ್, ವಾಟ್ಸಪ್ಪ್, ಟ್ವಿಟ್ಟರ್ ಗಳಿಗೆ ಅರ್ಪಿಸುವ ಕೊಂಚ ಸಮಯವನ್ನು ಓದುವುದರಲ್ಲಿ ವಿನಿಯೋಗಿಸಿದರೆ  - ಬದುಕು ಹಸನಾಗುವುದಲ್ಲವೇ..?! ದಿನಕ್ಕೆ ಕೇವಲ ೩೦ ನಿಮಿಷಗಳನ್ನು ಓದಲು ನೀಡಿದರೂ ನಮ್ಮ ಚಿಂತನ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಕಾಣಬಹುದು.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಫಾಲುನ-ಶುಕ್ಲ-ಷಷ್ಠಿ,
೨೯-ಫೆಬ್ರುವರಿ-೨೦೨೦, ಶನಿವಾರ
ಬೆಂಗಳೂರು.