ಭಾವಾವೇಷ ಮತ್ತು ಭಾವನಾತ್ಮಕತೆ.
ಮನುಷ್ಯನ ಅಸ್ತಿತ್ವ ಮತ್ತೊಬ್ಬರಿಗೆ ತಿಳಿಯುವುದೇ ಅವನಿಂದ ಹೊರಹೊಮ್ಮುವ ಭಾವನೆಗಳಿಂದ. ಒಂದರ್ಥದಲ್ಲಿ ನಮ್ಮ ಭಾವನೆಗಳೇ ನಮ್ಮ ನಿಜವಾದ ಬಾಂಧವರು. ಈ ಭಾವನೆಗಳು ನಮ್ಮ ಮನದಾಳದಲ್ಲಿ ಅಲೆಗಳಂತೆ ಹುಟ್ಟುತ್ತವೆ, ನಿರಂತರವಾಗಿ ಹುಟ್ಟುತ್ತಲೇ ಇರುತ್ತವೆ. ಈ ಅಲೆಗಳು ಸಮುದ್ರದ ಅಲೆಗಳಿಗಿಂತ ಶಕ್ತಿಶಾಲಿಗಳಾಗಿವೆ, ಹಾಗಾಗಿಯೇ ಅಪಾಯಕಾರಿಯೂ ಆಗಿವೆ. ಆದ್ದರಿಂದ ಈ ಭಾವನೆಗಳೆಂಬ ಅಲೆಗಳನ್ನು ಸರಿಯಾಗಿ ನಿಭಾಯಿಸಬೇಕಾಗುತ್ತದೆ. ನಿಭಾಯಿಸಲಾಗದೆ ಹೊರಹೊಮ್ಮುವ ಅತೀವ ಭಾವನೆಯನ್ನು 'ಭಾವಾವೇಷ' ಎನ್ನಬಹುದು.
ಇಷ್ಟಾಗಿ ಈ ಬಗ್ಗೆ ನನಗೇಕೆ ಬರೆಯಬೇಕೆಂಬ ಭಾವನೆ ಉಂಟಾಯಿತು? ಇತ್ತೀಚಿಗಷ್ಟೇ ನೆಡೆದ IPL ಕ್ರಿಕೆಟ್ ಪಂದ್ಯಾವಳಿ, ಅದರಲ್ಲಿ RCB ತಂಡದ ಗೆಲುವು, ನಂತರ ಗೆಲುವಿನ ಸಂಭ್ರಮಾಚರಣೆ, ತದನಂತರ ಉಂಟಾದ ಅನಾಹುತ, ಈ ಕಾರಣದಿಂದ ಅನೇಕ ಕುಟುಂಬಗಳಿಗಾದ ತುಂಬಲಾರದ ನಷ್ಟ, ರಾಜಕೀಯ ಕೆಸರೆರಚಾಟ - ಜನರೇಕೆ ಹೀಗೆ? ಎಂಬ ವಿಷಯ ನನ್ನನ್ನು ಕೆಲದಿನಗಳಿಂದ ಕಾಡುತ್ತಿದೆ. ಒಂದು ಆಟ ಆರ್ತನಾದದವರೆಗೆ ಹೋಗಲು ಮೂಲ ಕಾರಣ 'ಭಾವಾವೇಷ'ವೇ ಆಗಿದೆ. ಒಂದು ಕ್ರೀಡೆಯ ಬಗೆಗಿನ ಅಭಿಮಾನ, ಈ ಅಭಿಮಾನವೆಂಬ ಭಾವನೆಯನ್ನು ಸರಿಯಾಗಿ ವ್ಯಕ್ತಪಡಿಸಲಾಗದ ಅಭಿಮಾನಿಗಳ ಹುಚ್ಚು, ಈ ಹುಚ್ಚು ಭಾವನೆಯನ್ನು ಒಟ್ಟು ಸೇರಿಸಿ ರಾಜಕೀಯ ಲಾಭ ಪಡೆಯುವ ತೆವಲು, ಹೀಗೆ ಸರಣಿ ಘಟನೆಗಳಿಗೆ ಕಾರಣ - 'ಭಾವಾವೇಷ'.ಇತ್ತೀಚಿನ ದಿನಗಳಲ್ಲಿ ಈ ಭಾವಾವೇಷದ ವರ್ತನೆಗಳು ಸಮೂಹ ಸನ್ನಿಯಂತೆ ಹರಡುತ್ತಿರುವುದು ಆಘಾತಕಾರಿ. ಕಳೆದ ಮಾರ್ಚ್ ನಲ್ಲಿ ೧೦೦ ಅಡಿಗೂ ಎತ್ತರದ ರಥವನ್ನು ಕಟ್ಟಿ, ಅದರ ಸಮತೋಲನ ಸಾಧ್ಯವಾಗದೆ, ಅದು ನೆಲಕ್ಕುರುಳಿ ದೇವರ ದರ್ಶನಕ್ಕೆಂದು ಬಂದ ಭಕ್ತರಲ್ಲೊಬ್ಬ ದೇವರ ಪಾದ ಸೇರಿ, ಇನ್ನೂ ಅನೇಕರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿತ್ತು. ಇದು ತಾವೇನೋ ಮಹತ್ತರವಾಗಿ ಯಾರೂ ಮಾಡದ ಕಾರ್ಯ ಮಾಡುತ್ತೇವೆಂಬ ಕೆಲವರ ಭಾವಾವೇಷದ ರಥ ನಿರ್ಮಾಣದ ಪರಿಣಾಮ. ಹಾಗೆಯೇ, ಕಳೆದ ವರ್ಷ ಮಹಿಳೆಯೊಬ್ಬರು ಅತೀ ಉತ್ಸಾಹದಲ್ಲಿ ಮಗನೊಂದಿಗೆ ತಮ್ಮ ನೆಚ್ಚಿನ ನಟನ ಸಿನೆಮಾವನ್ನು ಮೊದಲ ಪ್ರದರ್ಶನದಲ್ಲಿ ನೋಡಲು ಹೋಗಿ ಕಾಲ್ತುಳಿತಕ್ಕೊಳಗಾಗಿದ್ದರು. ಅನೇಕ ಪ್ರವಾಸಿ ಸ್ಥಳಗಳು ಜವರಾಯನ ಸ್ಥಾನವಾದಂತೆ ಕಾಣುತ್ತವೆ. ಇಲ್ಲಿ ಅಲ್ಲಿನ ವ್ಯವಸ್ಥೆಗಳ ಅಥವಾ ನಿರ್ವಾಹಕರ ನ್ಯೂನತೆ ಏನೇ ಇರಬಹುದು, ಆದರೆ ಜನರು ತಮ್ಮ ಅತೀವ ಅಭಿಮಾನ, ಉತ್ಸಾಹ, ಕುತೂಹಲ ಇವುಗಳನ್ನು ಹಿಡಿದಿಡಲಾಗದೆ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದರೆಂಬುದು ವಾಸ್ತವ ಮತ್ತು ದುರಂತ.ಇತ್ತೀಚಿಗೆ ಸಾಮಾಜಿಕ ಜಾಲತಾಣಗಳು ಭಾವನೆಗಳನ್ನು ಹೊರಹಾಕಲು ಸಿಗುವ ಸುಲಭ ಸಾಧನಗಳಾಗಿವೆ. ಸಾಮಾಜಿಕ ತಾಣಗಳಲ್ಲಿ ಫೋಟೋ/ವಿಡಿಯೋ ಹಾಕಬೇಕೆಂಬುದೇನೋ ಸರಿ, ಅದು ಬೇರೆಯವರಿಗಿಂತ ಭಿನ್ನವಾಗಿರಬೇಕೆಂಬ ಹುಚ್ಚು ಭಾವನೆ ಅನೇಕರನ್ನು ನಾನಾ ಸಮಸ್ಯೆಗಳಿಗೆ ತಳ್ಳಿದೆ. ಹೀಗಿರುವಾಗ ಭಾವಾವೇಷ ಎಂಬುದು ಒಂದು ದುಶ್ಚಟವಲ್ಲದೆ ಇನ್ನೇನು?
ಮನುಷ್ಯ ಭಾವ ಜೀವಿ. ಹುಟ್ಟಿನಿಂದ ಸಾವಿನವರೆಗೂ ಭಾವನೆಗಳನ್ನು ನಿರಂತರವಾಗಿ ಹೊರಹಾಕುತ್ತಲೇ ಇರುತ್ತಾನೆ. ನಗು, ಸಿಟ್ಟು, ದುಃಖ, ಉತ್ಸಾಹ, ವ್ಯಂಗ್ಯ, ಅಪಹಾಸ್ಯ, ಅಭಿಮಾನ, ಆತಂಕ, ..... ಇವುಗಳೆಲ್ಲ ನಮ್ಮ ಭಾವನೆಗಳ ವ್ಯಕ್ತ ರೂಪವಷ್ಟೇ. ಸರಿಯಾದ ರೀತಿಯಲ್ಲಿ ಭಾವನೆಗಳನ್ನು ನಿರ್ವಹಿಸಬೇಕು. ನನ್ನ ಪ್ರಕಾರ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ಅಲೆಯಂತೆ - ಹುಟ್ಟಿದ ಮೇಲೆ ಒಂದಾದ ನಂತರ ಒಂದನ್ನು ಹಿಂಬಾಲಿಸಿ ಬರುತ್ತವೆ. ಹಾಗಾಗಿ ಭಾವನೆಗಳ ಹುಟ್ಟಿನ ಮೇಲೆ ನಾವು ನಿಗಾ ವಹಿಸಬೇಕಷ್ಟೆ. ಯಾವುದೇ ಭಾವನೆ ಒಳ್ಳೆಯದೇ, ಆದರೆ ಅದು ವಿವೇಕವೆಂಬ ಚೌಕಟ್ಟನ್ನು ದಾಟಿದಾಗ ಭಾವಾವೇಷವಾಗಿ ಅವಾಂತರಗಳಿಗೆ ಆಹ್ವಾನ ಮಾಡುತ್ತದೆ.
ಒಂದಂತೂ ಸತ್ಯ - ಏಕಕಾಲದಲ್ಲಿ ಬುದ್ಧಿ ಅಥವಾ ಭಾವನೆ ಎರಡರಲ್ಲಿ ಒಂದೇ ಕೆಲಸ ಮಾಡುತ್ತದೆ. ಅತೀ ಬುದ್ದಿವಂತರು ಅನೇಕಬಾರಿ ಭಾವ ಶೂನ್ಯರಾಗಿ ವರ್ತಿಸುವುದನ್ನು ನೋಡುತ್ತೇವೆ. ಅದರಂತೆಯೇ, ಅತಿಯಾದ ಭಾವನೆಗಳ ಒತ್ತಡ (ಅದು ಯಾವ ಭಾವನೆಯೇ ಆಗಿರಲಿ), ಬುದ್ದಿಯನ್ನು ಮರೆಮಾಚಿ ನಮ್ಮನ್ನು ಭಾವಾವೇಷಿಗಳನ್ನಾಗಿ ಮಾಡಿ ಪ್ರಜ್ಞಾಹೀನರನ್ನಾಗಿಸುತ್ತದೆ. ಸಿಟ್ಟಿನಿಂದ ಕೂಡಿದ ವ್ಯಕ್ತಿ ತಾನೇನು ಮಾತನಾಡುತ್ತಿದ್ದೇನೆಂದು ಮರೆಯುತ್ತಾನೆ, ಅತ್ಯಂತ ದುಃಖದಲ್ಲಿರುವ ವ್ಯಕ್ತಿ ಆತ್ಮಹತ್ಯೆಗೂ ಕೈ ಹಾಕುತ್ತಾನೆ, ಅತಿಯಾದ ಆತ್ಮ ವಿಶ್ವಾಸದಿಂದಾಗಿ ಅನಾಹುತಕ್ಕೊಳಗಾದವರೆಷ್ಟೋ! ಅತಿಯಾಗಿ ನಗುವ-ನಗಿಸುವ ಭರದಲ್ಲಿ ಇನ್ನೊಬ್ಬ ವ್ಯಕ್ತಿಗಾಗುವ ಅವಮಾನ ಮರೆಯುತ್ತಾನೆ, ಅತಿಯಾಗಿ ಅಭಿಮಾನ ತೋರಿಸಲು ಹೋಗಿ ಸ್ವಂತ ಪ್ರಜ್ಞೆಯನ್ನೇ ಮರೆಯುತ್ತಾನೆ. ಹೀಗೆ ಭಾವಾವೇಷ ಮನುಷ್ಯನಲ್ಲಿರುವ ಬುದ್ದಿ, ಪ್ರಜ್ಞೆ ಎಲ್ಲವನ್ನು ಮರೆಸಿ ವಿಸ್ಮೃತಿಗೊಳಪಡಿಸುತ್ತದೆ.ವ್ಯವಸ್ಥಿತ ಜೀವನ ಸಾಗಿಸಲು ಬುದ್ಧಿ - ಭಾವನೆಗಳ ಸಮತೋಲನ ಅತ್ಯಗತ್ಯ. ಇದರ ಅರಿವು ಇಟ್ಟು ನೆಡೆದರೆ ಭಾವಾವೇಷಿಗಳಾಗದೆ, ಭಾವನಾತ್ಮಕ ಜೀವಿಗಳಾಗಬಹುದು.
ಕೊನೆಯ ಹನಿ : ಭಾವಾವೇಶದಿಂದ ಯಾರಿಗೂ ಹಾನಿ ಮಾಡದೇ, ನಾವು ಭಾವ ಯಾನಿಗಳಾಗೋಣವಲ್ಲವೇ !!
ಸದಾ ನಿಮ್ಮವ,
ಹ.ನಾ.ಮಾಧವ ಭಟ್.
ಜ್ಯೇಷ್ಠ-ಶುಕ್ಲ-ದ್ವಾದಶಿ.
೦೮-ಜೂನ್-೨೦೨೫, ಭಾನುವಾರ.
ಬೆಂಗಳೂರು.



Vey Well said Madhava!.. Didn't knew a creative writer in you :) More to come!
ReplyDeleteಉತ್ತಮ ಆಲೋಚನೆ
ReplyDelete