ಹವ್ಯಾಸಗಳಿಗೆ ಹಾಯ್! ಅನ್ನೋಣ!!
ನಾನು ಮೊದಲಿನಿಂದಲೂ ಕೂಡ ಸ್ವಲ್ಪ ಓದುವ ಹಾಗೇ ಬರೆಯುವ ಹವ್ಯಾಸವನ್ನು ಇರಿಸಿಕೊಂಡಿದ್ದೆ. ಆದರೆ, ಈ ಹವ್ಯಾಸ ಕ್ರಮೇಣ ದೂರವಾಗುತ್ತಾ ಬಂದಿದ್ದನ್ನು ಗಮನಿಸಲೇ ಇಲ್ಲ..! ಕೆಲ ದಿನಗಳ ಹಿಂದೆ ನನ್ನ ತಲೆಯಲ್ಲಿ ಬರುವ ಯೋಚನೆ - ಚಿಂತನೆಗಳನ್ನು ಕಾಗದದಲ್ಲಿ ಮೂಡಿಸಬೇಕೆಂದು ಕುಳಿತಾಗ, ಬಹಳ ಅಸಾಧ್ಯವೇನೂ ಅನ್ನಿಸುವಷ್ಟು ನನ್ನ ಬರೆಯುವ ಹವ್ಯಾಸ ನನ್ನಿಂದ ದೂರವಾದದ್ದು ಭಾಸವಾಗಿತ್ತು. ಹವ್ಯಾಸಗಳೇ ಹಾಗೇ. ನಾವದನ್ನು ಸಾಕಿ-ಸಲಹ ಬೇಕು, ಇಲ್ಲವೇ ದೂರವಾಗುತ್ತವೆ. ಇದು ಬರವಣಿಗೆಗಷ್ಟೇ ಸೀಮಿತವಲ್ಲ. ಸಂಗೀತ, ಕವನ ರಚನೆ, ಚಿತ್ರ ಬಿಡಿಸುವುದು, ನೃತ್ಯ, ಕೊಳಲು, ತಬಲ, ಗಿಟಾರ್ ಇತ್ಯಾದಿ ವಾದನಗಳು..... ಹೀಗೆ ಎಲ್ಲ ಹವ್ಯಾಸಗಳಿಗೂ ಅನ್ವಯವಾಗುತ್ತದೆ. ಅಭ್ಯಾಸದಲ್ಲಿದ್ದರೆ ಮಾತ್ರ ಹವ್ಯಾಸ ನಮ್ಮಲ್ಲಿ ಜೀವಂತವಾಗಿದ್ದು ಜೀವನವನ್ನು ರಸಭರಿತವಾಗಿರಿಸಿರುತ್ತದೆ.
ಒಮ್ಮೆ ಅವಲೋಕಿಸಿದರೆ ನನ್ನಲ್ಲೇ ಮೂಡುವ ಪ್ರಶ್ನೆ - ಹವ್ಯಾಸಗಳು ನಮಗೇಕೆ ಬೇಕು? ಹವ್ಯಾಸಗಳೇ ಇಲ್ಲದೆ ಜೀವನ ಸಾಧ್ಯವಿಲ್ಲವೇ? ನಮ್ಮಲ್ಲೇ ಅನೇಕರಿಗೆ ಹವ್ಯಾಸ ಬಿಡಿ, ಯಾವುದೇ ನಿಯಮಿತ ಅಭ್ಯಾಸಗಳೂ ಸಹ ಇರುವುದಿಲ್ಲ. ಈ ಹವ್ಯಾಸಗಳೊಂದ ನಮಗೇನಾದರೂ ಪ್ರಯೋಜನವಾದರೂ ಉಂಟೆ? ಮುಂದುವರಿದರೆ ಅನಿಸುತ್ತದೆ - ಖಂಡಿತ ಉಂಟೆಂದು...!! ಹವ್ಯಾಸಗಳು ದೀರ್ಘಾವಧಿಯಲ್ಲಿ ನಮ್ಮಲ್ಲೊಂದು ನೆಮ್ಮದಿಯನ್ನು ಮೂಡಿಸುವುದನ್ನು ಕಂಡಿದ್ದೇನೆ. ಅದು ಒಂಟಿತನವನ್ನು ದೂರವಾಗಿಸುತ್ತದೆ. ನಮ್ಮನ್ನು ಪರಿಣಿತರನ್ನಾಗಿಸುತ್ತದೆ.
ಅನೇಕರು ತಮ್ಮಲ್ಲಿರುವ ಹವ್ಯಾಸಗಳನ್ನು ಪೋಷಿಸಿ, ಅದನ್ನೇ ಪವೃತ್ತಿಯನ್ನಾಗಿಸಿ, ಕ್ರಮೇಣ ವೃತ್ತಿಯನ್ನಾಗಿರಿಸಿಕೊಂಡಿರುತ್ತಾರೆ. ಪ್ರಸಿದ್ಧ ಸಂಗೀತಗಾರರು, ಚಿತ್ರಕಲಾಕಾರರು, ಬರಹಗಾರರು, ಹಾಸ್ಯ ಕಲಾವಿದರು......ಹೀಗೆ. ಇನ್ನು ಕೆಲವರು ಹವ್ಯಾಸಗಳನ್ನು ವೃತ್ತಿಯಾಗಲ್ಲದಿದ್ದರೂ, ಪ್ರವೃತ್ತಿಯನ್ನಾಗಿರಿಸಿಕೊಂಡಿರುತ್ತಾರೆ. ನಾಟಕಕಾರರು, ವನ್ಯಜೀವಿ ಛಾಯಾಗ್ರಾಹಕರು, ಹವ್ಯಾಸಿ ಲೇಖಹರು...ಇತ್ಯಾದಿ. ಮತ್ತೆ ಕೆಲವರು ತಮ್ಮಲ್ಲಿರುವ ಹವ್ಯಾಸವನ್ನು ಕೇವಲ ಹವ್ಯಾಸದ ಹಂತದಲ್ಲಿಯೇ ಇರಿಸಿಕೊಂಡಿರುತ್ತಾರೆ. ನಾನು ಈ ಗುಂಪಿನಲ್ಲಿ ಬರುತ್ತೇನೆ ಅನ್ನಿಸುತ್ತದೆ. ಚಿಂತನೆಗಳಿಗೆ ಅಕ್ಷರದ ರೂಪ ಕೊಡುವ ಹವ್ಯಾಸ ನನ್ನದು. ಈಗ ಕಷ್ಟಪಟ್ಟು ಈ ಹವ್ಯಾಸವನ್ನು ಮತ್ತೆ ಚಿಗುರಿಸುವ ಪ್ರಯತ್ನ ಮಾಡುತ್ತಿದ್ದೇನೆ.
ನನ್ನ ಪ್ರಕಾರ ಉತ್ತಮ ಹವ್ಯಾಸಗಳು ನಮ್ಮಲ್ಲಿರಲೇ ಬೇಕು - ಇಲ್ಲದಿದ್ದರೆ ಕಷ್ಟಪಟ್ಟು ರೂಢಿಸಿಕೊಳ್ಳಬೇಕು. ಹವ್ಯಾಸಗಳು ನಮ್ಮೊಂದಿಗೆ ನಾವೇ ಮಾತನಾಡಿಕೊಳ್ಳುವ ವಿಧಾನವೂ ಹೌದು, ನಮ್ಮನ್ನು ನಮಗೇ ಅರ್ಥ ಮಾಡಿಸುವ ಸಾಧನವೂ ಹೌದು. ಹವ್ಯಾಸ ನಮ್ಮನ್ನು engage ಮಾಡಿಡುತ್ತದೆ (ತೊಡಗಿಸಿಡುತ್ತದೆ). Let me put it in another way ! ನಾವು ಸ್ವಭಾವ ಸಹಜ ಯಾವಾಗಲೂ engage ಆಗಿಯೇ ಇರುತ್ತೇವೆ. ಉತ್ತಮ ಹವ್ಯಾಸಗಳು ಇರದೇ ಇದ್ದಾಗ ಅದರ ಜಾಗವನ್ನು ಬೇರೆಯವು ಆಕ್ರಮಿಸಿಕೊಳ್ಳುತ್ತವೆ ಅಷ್ಟೇ.
ನನ್ನಲ್ಲಿ ನಾನೇ ಕಂಡುಕೊಂಡಂತೆ, ಏನು ಮಾಡಬೇಕೆಂದು ತೋಚದೇ ಇದ್ದಾಗ ನನ್ನನ್ನು Facebook ಓಗೊಟ್ಟು ಕರೆಯುತ್ತದೆ. ಸಮಯ ಹೋದದ್ದೇ ತಿಳಿಯುವುದಿಲ್ಲ. ಅಷ್ಟರಲ್ಲಿ, Twitter , Whatsapp ಗಳು ತಮ್ಮನ್ನು ಸಹ ಮಾತನಾಡಿಸುವಂತೆ ಅಳುತ್ತವೆ! ಇವರನ್ನು ಮಾತನಾಡಿಸಿ ಮುಗಿಸುವ ವೇಳೆಗೆ, Instagram ನೆನಪಾಗುತ್ತದೆ. ಇಷ್ಟರ ಮಧ್ಯೆ ನನ್ನ ಓದುವ - ಬರೆಯುವ ಹವ್ಯಾಸ ಒಂದು ಹೆಜ್ಜೆ ಹಿಂದೆ ಹಾಕಿರುತ್ತದೆ. ನಾನು ಇದನ್ನು ಗಮನಿಸಿಕೊಂಡಾಗ ಬಹಳ ಪ್ರಯತ್ನ ಮಾಡಿ ಏನಾದರೂ ಓದಬೇಕು - ಬರೆಯಬೇಕು ಅಂದುಕೊಂಡೆ. ಆದರೆ ಹಳೆಯ ಅಭ್ಯಾಸ ಮತ್ತೆ ನನ್ನನ್ನು Mobile ಕಡೆಗೆ ಕೊಂಡೊಯ್ಯುವುದನ್ನು ಗಮನಿಸಿದೆ. ಅದೇಕೆ ಹೀಗೆ ಎಂದು ಯೋಚಿಸಿದಾಗ, ನನಗನಿಸಿದ್ದು - ಅಲ್ಲಿ ನಿಶ್ಚಿತ ಗುರಿ ಇಲ್ಲ, ಹಾಗೆಯೇ ಯಾವುದೇ ಶ್ರಮ ಇಲ್ಲ...! ಆದರೆ ಹವ್ಯಾಸಗಳು ಹಾಗಲ್ಲ - ಸ್ವಲ್ಪ ಶ್ರಮ ಬೇಕೇ ಬೇಕು - They demand time , they demand attention . ಹಾಗಾಗಿಯೇ ಅನೇಕರ ಉತ್ತಮ ಹವ್ಯಾಸಗಳನ್ನು ಮೊಬೈಲ್ ನುಂಗಿ ಹಾಕುತ್ತದೆ. ಕಾಲ ಕ್ರಮೇಣ Mobile ನಲ್ಲಿ Apps ಅನ್ನು switch ಮಾಡುವುದೇ ಹವ್ಯಾಸವಾಗಿಬಿಡುತ್ತದೆ...!! ಇದು ನನ್ನ ಅನುಭವವೂ ಹೌದು.
ನಮ್ಮ ಹವ್ಯಾಸ ನಮಗಷ್ಟೇ ಅಲ್ಲದೆ ಇತರರಿಗೂ ಖುಷಿಯನ್ನುಂಟು ಮಾಡಿದರೆ - That's great !!
ಕೊನೆಯ ಹನಿ: ಹವ್ಯಾಸಗಳು ನಮಗಿರಬೇಕು. ಇಲ್ಲದಿದ್ದರೆ ರೂಢಿಸಿಕೊಳ್ಳಬೇಕು. ಅದೊಂಥರಾ Investment ಇದ್ದಹಾಗೆ. The early we invest, the more we invest - results in more returns....!! So , ದುರಭ್ಯಾಸಗಳಿಗೆ ವೇಸ್ಟ್ ಮಾಡುವ ಬದಲು ಹವ್ಯಾಸಗಳಿಗೆ ಇನ್ವೆಸ್ಟ್ ಮಾಡೋಣ...!
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಮಾರ್ಗಶೀರ್ಷ-ಶುಕ್ಲ-ನವಮಿ, ಭಾನುವಾರ.
೧೨-ಡಿಸೆಂಬರ್-೨೦೨೧ , ಭಾನುವಾರ.
ಬೆಂಗಳೂರು.



