Wednesday, 20 February 2019

International Mother Language Day

ಮಾತೃ ಭಾಷೆ - ಅದು ಅಂತರಂಗದ ಭಾಷೆ.



ಫೆಬ್ರುವರಿ ೨೧ರ ಈ ದಿನವನ್ನು ಜಗತ್ತು 'ಅಂತಾರಾಷ್ಟ್ರೀಯ ಮಾತೃಭಾಷಾ ದಿನ 'ವನ್ನಾಗಿ ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ, ಮಾತೃಭಾಷೆಯ ಬಗ್ಗೆ ಮೆಲಕು ಹಾಕಲು ಇಚ್ಛಿಸುತ್ತೇನೆ.

ಭಾಷೆ ಮಾನವನಿಗಿರುವ ಒಂದು ಪ್ರಮುಖ ಸಂವಹನಾ ಮಾಧ್ಯಮ. ನಮ್ಮ ಭಾವನೆ, ಅನಿಸಿಕೆಗಳನ್ನು ಇತರರಿಗೆ ತಿಳಿಸಲು ಇರುವ ಸಾಧನವೆನ್ನಬಹುದು. ಹೀಗೆ ಇತರರೊಂದಿಗೆ ಸಂವಹಿಸಲು ಇರುವ ಭಾಷೆಗಳು ಹಲವು. ಆದರೆ, ನಾವು ನಮ್ಮ ಅಂತರಂಗದೊಂದಿಗೆ ಮಾತನಾಡುವ ಭಾಷೆ ಒಂದೇ - ಅದೇ ನಮ್ಮ ಮಾತೃ ಭಾಷೆ. ನಮ್ಮ ಭಾವನೆಗಳೊಂದಿಗೆ ಬೆರೆತು ಅದೂಕೂಡ ಒಂದು ಭಾವನಾತ್ಮಕ ವಿಷಯವಾಗಿದೆ. 

ಯಾವುದೇ ಭಾಷೆ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಂಡಿರುತ್ತದೆ. ಹಾಗಾಗಿ ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ಹಿಂದಿರುವ ಸಂಸ್ಕೃತಿಯ ಅನೇಕ ಅಂಶಗಳನ್ನು ಕಲಿಯುತ್ತೇವೆ. ಹಾಗೆಯೇ ಒಂದು ಭಾಷೆಯನ್ನು ದೂರ ಮಾಡಿಕೊಂಡಾಗ ಆ ಸಂಸ್ಕೃತಿಯ ಅನೇಕ ಅಂಶಗಳನ್ನು ದೂರ ಮಾಡಿಕೊಳ್ಳುತ್ತೇವೆ. ಈ ದೃಷ್ಟಿಯಿಂದ ನೋಡಿದಾಗ ನಮಗೆ ನಮ್ಮ ಮಾತೃಭಾಷೆಯ ಮಹತ್ವ ಅರಿವಾಗುತ್ತದೆ. ಒಬ್ಬನ ಮಾತೃಭಾಷೆ ಆತನನ್ನು ಅವನ ಮೂಲದೊಂದಿಗೆ ಜೋಡಿಸುತ್ತದೆ. ಬೇರೆ ಎಲ್ಲ ಭಾಷೆಗಳು ನಮ್ಮನ್ನು ನಮ್ಮ ಮೂಲದಿಂದ ವಿಸ್ತಾರಗೊಳಿಸುತ್ತಾ ಜಾಗತಿಕ ಮಟ್ಟಕ್ಕೆ ಏರಿಸುತ್ತವೆ. ಹಾಗಾಗಿಯೇ ಹಲವು ಭಾಷೆಗಳನ್ನು ಕಲಿಯುವುದು ಅನಿವಾರ್ಯವಷ್ಟೇ ಅಲ್ಲ ಆವಶ್ಯಕವೂ ಹೌದು.

ನಾವು ಮಾತೃ ಭಾಷೆಯ ಉಪಯೋಗ ಕಡಿಮೆ ಮಾಡಿ ಬೇರೆ ಭಾಷೆಗಳಿಗೆ ಒತ್ತು ಕೊಡುತ್ತಿದ್ದೇವೆಂದರೆ ಆ ಮಟ್ಟಿಗೆ ಬೇರೆ ಸಂಸ್ಕೃತಿಯನ್ನು ಒಳಗೆ ಬಿಟ್ಟಿದ್ದೇವೆಂದೇ ಅರ್ಥ. ಇಂದು ಆಂಗ್ಲಭಾಷೆ ಜಗತ್ತನ್ನೆಲ್ಲಾ ಆವರಿಸಿದೆಯೋ ಇಲ್ಲವೋ ಭಾರತವನ್ನಂತೂ ಬಹುವಾಗಿ ಆವರಿಸಿದೆ. ಒಂದು ಜಾಗತಿಕ ಭಾಷೆಯಾಗಿ ಆಂಗ್ಲಭಾಷೆ ನಮಗೆ ಬೇಕೇ ಬೇಕು - ಇದರಲ್ಲಿ ಸಂಶಯವೇ ಇಲ್ಲ. ಆದರೆ ಅದು ಕೇವಲ ವ್ಯಾವಹಾರಿಕ ಭಾಷೆಯಾಗದೆ ನಮ್ಮೊಳಗೆ ಇಳಿಯುತ್ತಿರುವ ವೇಗ, ಪ್ರಮಾಣ, ತೀವ್ರತೆ ಆತಂಕವನ್ನುಂಟು ಮಾಡುತ್ತದೆ. 

ವ್ಯಾವಹಾರಿಕ ಭಾಷೆಗೂ, ಮಾತೃಭಾಷೆಗೂ ನಡುವೆ ಇರುವ ವ್ಯತ್ಯಾಸವನ್ನು ಅರಿಯಲು ನಾವು ಭಾರತೀಯರು ವಿಫಲರಾಗಿದ್ದೇವೆ. ಜಪಾನ್, ಚೀನಾ, ಕೊರಿಯಾ, ಜರ್ಮನಿ, ಫ್ರಾನ್ಸ್,... ಹೀಗೆ ಅನೇಕ ದೇಶಗಳಲ್ಲಿ ಆಂಗ್ಲಭಾಷೆ ನಮ್ಮೊಳಗೆ ಹೊಕ್ಕಿರುವಷ್ಟು ಹೊಕ್ಕಿಲ್ಲ. ನಾವು ಆಂಗ್ಲಭಾಷೆಯನ್ನು ಒಂದು ಭಾಷಾ ಮಾಧ್ಯಮವನ್ನಾಗಿ ತೆಗೆದುಕೊಳ್ಳದೆ, ಒಂದು ಕಬ್ಬಿಣದ ಕಡಲೆಯಂತಿರುವ ವಿಷಯವಾಗಿ ತಿಳಿದುಕೊಂಡಿರುವುದೇ ಒಂದು ದುರಂತ. 

ಇವೆಲ್ಲದರ ಮಧ್ಯೆ, ಅನೇಕರು, ಆಂಗ್ಲಭಾಷೆಯನ್ನು ಕಲಿಯದವರ ಸ್ಥಿತಿಯನ್ನು ನೋಡಿ ತಾವು ಮಾತೃಭಾಷೆಯನ್ನು ದೂರಮಾಡುತ್ತಿರುವುದು ಮೇಲ್ನೋಟಕ್ಕೆ ವೇದ್ಯವಾಗುತ್ತಿದೆ. ಆಂಗ್ಲಭಾಷೆಯ ಜ್ಞಾನವಿಲ್ಲದಿರುವಾಗ ಜಾಗತಿಕ ಮಟ್ಟದ ವ್ಯವಹಾರ ಕಷ್ಟವಾಗುತ್ತದೆ, ಅನೇಕ ಅವಕಾಶಗಳು ಕಡಿಮೆ ಆಗುತ್ತವೆ. ಇಂತಹ ಸನ್ನಿವೇಶದಲ್ಲಿ ನಾವು ಆಂಗ್ಲಭಾಷೆಯನ್ನು ಚೆನ್ನಾಗಿ ಕಲಿಯಬೇಕೇ ಹೊರತು, ಮಾತೃಭಾಷೆಯ ಸ್ಥಾನದಲ್ಲಿ ಅದನ್ನು ಕುಳ್ಳಿರಿಸುವುವುದು ಸರಿಯಾದ ಆಯ್ಕೆಯಾಗುವುದಿಲ್ಲ. ಅನೇಕರು ಆಂಗ್ಲಭಾಷೆಯನ್ನೇ ತಮ್ಮ ಮನೆಗಳಲ್ಲಿ ನಿತ್ಯದ ಆಡುಭಾಷೆಯನ್ನಾಗಿರಿಸಿಕೊಂಡಿರುವುದು ಖೇದದ ಸಂಗತಿ.  ಇದರಿಂದ ಆಗುವ ಅಪಾಯಗಳೇ ಹೆಚ್ಚು. ಬಹುಮುಖ್ಯವಾಗಿ ನಾವು ನಮ್ಮ ಮೂಲದಿಂದ ದೂರವಾಗುತ್ತೇವೆ. ಅಂತೆಯೇ ಸಂಪೂರ್ಣ ಪಾಶ್ಚ್ಯಾತ್ಯರೂ ಆಗದೆ ತ್ರಿಶಂಕು ಸ್ಥಿತಿಯನ್ನು ತಲುಪುತ್ತೇವೆ. ಇದರ ಒಂದು ಪರಿಣಾಮವನ್ನು ನಾವು ನಮ್ಮ ಸಂಬಂಧಗಲ್ಲಿ ಕಾಣಬಹುದು. ಇಂದು ಅನೇಕರಿಗೆ ಪುರುಷರೆಲ್ಲರೂ 'ಅಂಕಲ್'ಗಳಾಗಿ ಮತ್ತು ಮಹಿಳೆಯರೆಲ್ಲರೂ 'ಆಂಟಿ'ಯಾರಾಗಿ ಕಾಣುತ್ತಾರೆ. ಅತ್ತಿಗೆ, ನಾದಿನಿ, ಬಾವ, ಬಾಮೈದ, ಚಿಕ್ಕಪ್ಪ-ದೊಡ್ಡಪ್ಪಂದಿರೆಲ್ಲಾ ಮಾಯವಾಗಿದ್ದರೆ. ಇದು ಅತ್ಯಂತ ಮೇಲಿನ ಹಂತದ ಪರಿಣಾಮ - ಇನ್ನೂ ಒಳಹೊಕ್ಕು ನೋಡಿದಾಗ ಅದರ ಆಳ ಅರಿವಾಗುತ್ತದೆ.

ಉಪಯೋಗಿಸದ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.  ಉದಾಹರಣೆಗೆ, ನಮ್ಮಲ್ಲಿ ಅನೇಕರಿಗೆ ಕನ್ನಡ ಮಾತನಾಡಲು ಬಂದರೂ, ಉಪಯೋಗಿಸದ ಕಾರಣ ಕನ್ನಡದ ಅಂಕೆ-ಸಂಖ್ಯೆಗಳ ಪರಿಚಯವಿರುವುದಿಲ್ಲ. ಅಂದರೆ, ಆಡದ ಭಾಷೆ ಉಳಿಯುವುದು ಕಷ್ಟ. ಇನ್ನು ಮಾತೃಭಾಷಾ ಶಿಕ್ಷಣ, ಸಿನಿಮಾ ಡಬ್ಬಿಂಗ್, ಅಂಗಡಿ ಮುಂಗಟ್ಟುಗಳಲ್ಲಿ ಮಾತೃಭಾಷೆ, ಬಸ್ಸು-ರೈಲು ನಿಲ್ದಾಣಗಳಲ್ಲಿ , ಸರ್ಕಾರಿ ಕಛೇರಿಗಳಲ್ಲಿ ಮಾತೃಭಾಷೆಯ ನುಡಿಗಟ್ಟುಗಳು,...ಇವಲ್ಲ ಚರ್ಚೆಯ ವಿಷಯವಾಗಬಹುದಷ್ಟೆ. ಇಂದಿನ ಸನ್ನಿವೇಶದಲ್ಲಿ ಮಾತೃಭಾಷೆಯನ್ನು ಸಂಪೂರ್ಣ ವ್ಯಾವಹಾರಿಕ ಭಾಷೆಯನ್ನಾಗಿ ಮಾಡುವುದು ಅಪ್ರಾಯೋಗಿಕ. ಆದರೆ ಅದನ್ನು ನಮ್ಮದಾಗಿಸಿಕೊಳ್ಳಬಹುದು - ಮಾತೃಭಾಷೆಯಲ್ಲಿ ಮಾತನಾಡುವ, ಓದುವ-ಬರೆಯುವ ಕೆಲಸವಾಗಬೇಕು. ನಮ್ಮ ಮಾತೃಭಾಷೆಯ ಪ್ರಧಾನ ಪ್ರಾಕಾರಗಳೆನಿಸಿದ ಜಾನಪದ-ದಾಸ ಸಾಹಿತ್ಯಗಳನ್ನು ಅಭ್ಯಸಿಸಬೇಕು. ಇವೆಲ್ಲವೂ ನಮ್ಮ ಸೃಜನಾತ್ಮಕ ಶಕ್ತಿ, ಸಂವೇದನಾ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ನಮ್ಮ ಮಾತೃಭಾಷೆಯನ್ನು ಅಭ್ಯಸಿಸಬೇಕು. ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಮಾತೃಭಾಷೆಯ ಪರಿಚಯವನ್ನು ಪೂರ್ಣವಾಗಿ ಮಾಡಿಕೊಳ್ಳಬೇಕು - ಒಟ್ಟಿನಲ್ಲಿ ಮನೆಗೆದ್ದು ಮಾರು ಗೆಲ್ಲಲು ಹೊರಡಬೇಕು.

ಕೊನೆಯ ಹನಿ: English ನಲ್ಲಿ 'ರಂಗೋಲಿ' ಹಾಕಲೂ ಆಗುವುದಿಲ್ಲ, 'ಮಡಿಬಟ್ಟೆ' ಉಡಲೂ ಆಗುವುದಿಲ್ಲ. ಎಷ್ಟೇ ಆದರೂ, 'Ragi Ball' ಗಿಂತ 'ರಾಗಿ ಮುದ್ದೆ'ಯೇ ಗಟ್ಟಿ. 'ಅನ್ನ'ಕ್ಕಿರುವ ಅಂದ 'Rice'ನಲ್ಲಿಲ್ಲ. 'ಬಾಳೆಎಲೆ ಊಟ'ದ  ಗಮ್ಮತ್ತು 'Banana leaf'ನಲ್ಲಿ ಮಾಡುವ 'Meal'ನಲ್ಲಿಲ್ಲ. ಅನೇಕರು ಮಾತೃಭಾಷೆಯಲ್ಲಿ ಸರಿಯಾಗಿ ವ್ಯವಹರಿಸಲು ಬಾರದೇ English ಗೆ ಜೋತು ಬಿದ್ದಿರುವುದನ್ನು ನಾವು ಒಂದು 'ಹೆಗ್ಗಳಿಕೆ' ಅಂದುಕೊಂಡರೆ ಅದು ಮೂರ್ಖತನವೇ ಸರಿ.


ಸದಾ ನಿಮ್ಮವ, 
ಹ.ನಾ.ಮಾಧವ ಭಟ್
ಮಾಘ-ಕೃಷ್ಣ-ದ್ವಿತೀಯಾ, ಗುರುವಾರ.
೨೧-೦೨-೨೦೧೯
ಬೆಂಗಳೂರು.
ದಿನ ವಿಶೇಷ: ಅಂತಾರಾಷ್ಟ್ರೀಯ ಮಾತೃಭಾಷಾ ದಿನ. 


Saturday, 2 February 2019

Life: Sports and Sportiveness

।। ಆಟವಾಡದೇ ಇದ್ದರೂ, ಕ್ರೀಡಾ ಮನೋಭಾವ ನಮ್ಮದಾಗಿಸಿ ಕೊಳ್ಳೋಣ ।।

ತ್ತೀಚಿಗೆ ಕೆಲ ತಿಂಗಳುಗಳಿಂದ ವಾರಕ್ಕೆರಡು ಬಾರಿಯಂತೆ ಫುಟ್ಬಾಲ್ ಆಡಲು ಹೋಗುತ್ತಿದ್ದೇನೆ. ಆರಂಭದಲ್ಲಿ ಸ್ನೇಹಿತರ ಒತ್ತಾಯಕ್ಕೆ ಹೋಗಲು ಶುರು ಮಾಡಿದರೂ, ಇದುವರೆಗೂ ಒಂದೂ ಗೋಲ್ ಹೊಡೆಯದೆ ಇದ್ದರೂ, ಫುಟ್ಬಾಲ್ ಶೂ ಹಾಕಿ ರೊನಾಲ್ಡೊ ರೇಂಜ್ ಗೆ ಮೈದಾನಕ್ಕೆ ಇಳಿಯುತ್ತೇನೆ. ನನ್ನಂತೆ ಇನ್ನೂ ಕೆಲ ರೊನಾಲ್ಡೊಗಳು ಜೊತೆಗಿದ್ದಾರೆಂಬುದೇ ನನ್ನ ಧೈರ್ಯ. ಆದರೆ  ಅದೇನೋ ಗೊತ್ತಿಲ್ಲ, ಎರಡು ಗಂಟೆಗಳ ಆಟದ ನಂತರ ಮೈ-ಮನಸ್ಸುಗಳೆರಡೂ ಹಗುರವಾಗುವುದಂತೂ ನಿಶ್ಚಿತ....! ಆ ಎರಡು ಗಂಟೆಗಳ ಆಟ ಇಡೀ ದಿನದ, ಇಡೀ ವಾರದ ಚಿಂತೆಗಳನ್ನೆಲ್ಲಾ ದೂರ ಮಾಡುತ್ತದೆ. ನಾವು ಕ್ರೀಡಾಸ್ಫೋರ್ತಿಯನ್ನು ತೆಗೆದುಕೊಳ್ಳಲು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಯ್ಲಿ ಯ ದರ್ಶನ ಮಾಡಬೇಕಿಲ್ಲ, ರೊನಾಲ್ಡೊ, ಸೆರೆನಾ ವಿಲಿಯಮ್ಸ್ ಆಟೋಗ್ರಾಫ್ ಪಡೆಯಬೇಕಿಲ್ಲ. ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತ ಮುತ್ತಲೇ ಒಬ್ಬ ಕ್ರಿಕೆಟಿಗನೋ, ಫುಟ್ಬಾಲ್ ಆಟಗಾರನೋ, ಚೆಸ್ ಚಾಂಪಿಯನ್ನೋ, ಕಬ್ಬಡ್ಡಿ ವೀರನೋ ಸಿಗುತ್ತಾನೆ..! ನಮ್ಮ ಜೊತೆ ಕೆಲಸ ಮಾಡುವ ಇಂತಹ ಕೆಲ ರೊನಾಲ್ಡೊಗಳೇ ನಮ್ಮ ಫುಟ್ಬಾಲ್ ಆಟಕ್ಕೆ ಪ್ರೇರಣೆ...!!

ಇಂದಿನ ದಿನಗಳಲ್ಲಿ ಪಾಠಗಳ ಹಾವಳಿಯಿಂದಾಗಿ ಆಟಗಳ ಸಂಖ್ಯೆ, ಉತ್ಸಾಹ ಎರಡೂ ಕೂಡಾ ಮಕ್ಕಳಲ್ಲಿಯೇ ಕಡಿಮೆಯಾಗಿದೆ. ಆಟಗಳ ಬಗೆಗಿನ ಒಟ್ಟಾರೆ ಕಲ್ಪನೆಯ ಕೊರತೆಯಿಂದಾಗಿ ಕ್ರಿಕೆಟ್ ಒಂದೇ ಆಟವಾಗಿರುವುದು ಕಂಡು ಬರುತ್ತದೆ. ಆದರೂ ಸಹ ಇತ್ತೀಚಿಗೆ ಕಬ್ಬಡ್ಡಿ & ಹಾಕಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ.

ಡಾ||ಹೆಡಗೇವಾರ್ 
ಆಟಗಳಿಂದ ನಾವು ಕಲಿಯುವ ಪಾಠ ಅನೇಕ. ಒಂದು ತಂಡ (ಟೀಮ್)ದ ಭಾಗವಾಗುವುದು ಹೇಗೆ ಎಂದು ಆಟಗಳು ಸುಲಭವಾಗಿ ಕಲಿಸಿಕೊಡುತ್ತವೆ. ಅದು ನಮ್ಮಲ್ಲಿರುವ ಒಂಟಿತನವನ್ನು ಹೋಗಲಾಡಿಸಿ, ಇತರರೊಂದಿಗೆ ಬೆರೆಯುವುದು ಹೇಗೆಂದು ಕಲಿಸುತ್ತದೆ. ಹೌದು, ಇನ್ನೂಚಿಕ್ಕವಳಾದ ನನ್ನ ಮಗಳು ಇಷ್ಟು ದಿನ ಒಬ್ಬಳೇ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿದ್ದಳು, ಆದರೆ ಈಗ ದೊಡ್ಡವಳಾಗುತ್ತಾ ಆಟವಾಡಲು ಯಾರಾದರೂ ಬೇಕು ಎಂದು ಆಶಿಸುವುದನ್ನು ಗಮನಿಸುತ್ತಿದ್ದೇನೆ. ಆಟಗಳ ಆಕರ್ಷಣೆ ವ್ಯಕ್ತಿಗಳನ್ನು ಪರಸ್ಪರ ಹತ್ತಿರ ತರುತ್ತದೆ. ಹೀಗೆ ಕ್ರೀಡೆಗಳು ಕೇವಲ ಶಾರೀರಿಕ ವ್ಯಾಯಾಮವಾಗದೇ, ವ್ಯಕ್ತಿತ್ವ ನಿರ್ಮಾಣಕ್ಕೇ ಬುನಾದಿಯಾಗಬಹುದು. ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯರಾದ  ವನವಾಸಿ ಮಾವಳಿ ಹುಡುಗರನ್ನು ಉತ್ಕೃಷ್ಟ ಸೈನಿಕರನ್ನಾಗಿ ಪರಿವರ್ತಿಸಿದ್ದು ಇದೆ ಆಟಗಳಿಂದ. ಡಾ||ಹೆಡಗೇವಾರ್ ಕೂಡ ಸಂಘಟನೆಯನ್ನು ಬೆಳೆಸಲು ಕ್ರೀಡೆಗಳನ್ನೇ ಸಾಧನವನ್ನಾಗಿ ಬಳಸಿದರು. ಹೀಗೆ ಆಟಗಳ ಶಕ್ತಿ ಅಪಾರ.

ಆಟಗಳು ಗೆಲುವು ಮತ್ತು ಸೋಲಿನ ರುಚಿ ತೋರಿಸಿಕೊಡುತ್ತವೆ. ಸೋತಾಗ ಕಹಿಯಾಗಿರುತ್ತದೆ, ಗೆದ್ದಾಗ ಸಿಹಿಯಾಗಿರುತ್ತದೆ. ಆದರೆ ಸೋತು ಗೆದ್ದಾಗ ಅದು ನವರಸ ಭಾರಿತವಾಗಿರುತ್ತದೆ - ಇದು ಆಟಗಳಿಂದ ಸಿಗುವ ಪಾಠ. ಈ ಸೋಲು-ಗೆಲುವುಗಳನ್ನು ಅರ್ಥೈಸಿಕೊಳ್ಳುವುದೇ "ಕ್ರೀಡಾ ಮನೋಭಾವ".  ಆದರೆ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ಆಟವಾಡಲು ಶಾಲೆಗಳಲ್ಲಿ ಸರಿಯಾದ ಮೈದಾನಗಳಿಲ್ಲದಿರುವುದು ಇಂದಿನ ದುರಂತ. ಶಾಲೆಗಳು ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಗಳಂತೆ "ಕ್ರೀಡಾಂಗಣ" ಕೂಡ ಮಕ್ಕಳಿಗೆ ಅತ್ಯವಶ್ಯಕ ಎಂದು ಮನಗಾಣಬೇಕು. ಇನ್ನು ಕೆಲವು ಶಾಲೆಗಳಲ್ಲಿ, ವಸತಿ-ವಿದ್ಯಾಲಯಗಳಲ್ಲಿ ಮೈದಾನಗಳಿದ್ದೂ, ಸಿಲಬಸ್ ಎಂಬ ಸೈತಾನನಿಂದಾಗಿ ಮಕ್ಕಳು ಆಟವಾಡದಂತಾಗಿದೆ. ಪರಿಣಾಮವಾಗಿ ಕ್ರೀಡಾಮನೋಭಾವ ಕಡಿಮೆಯಾಗುತ್ತಿದೆ.

ಸುದ್ದಿ ಮಾಧ್ಯಮಗಳಲ್ಲಿ ನೋಡಿದಂತೆ, ಒಂದು ಅಂಕದಿಂದ ಫೇಲ್ ಅದರಿಂದ ಹಿಡಿದು ಅದೇ ಒಂದು ಅಂಕದಿಂದ ಮೊದಲ ರ‍್ಯಾಂಕ್‌ ತಪ್ಪಿಸಿಕೊಂಡವರವರೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಸರಿಯಾಗಿ ರೂಪಿಸದ ಪೋಷಕರ, ಅಧ್ಯಾಪಕರ, ಶಾಲಾ-ಕಾಲೇಜುಗಳ, ಒಟ್ಟಾರೆ ಸಮಾಜದ ಬೇಜವಾಬ್ದಾರಿ ನೆಡೆ ಎಂದೆನಿಸುತ್ತದೆ.

ನಾವು ದೊಡ್ಡವರಾಗುತ್ತಾ ಆಟ ಆಡುವುದನ್ನು ಕಡಿಮೆ ಮಾಡುತ್ತೇವೆ - ಮುಂದುವರಿದು ನಿಲ್ಲಿಸಿಯೇ ಬಿಡುತ್ತೇವೆ. ಇನ್ನು ಕೆಲವರಂತೂ, ಆಟವಾಡುವುದು ಮಕ್ಕಳು ಮಾತ್ರವೆಂದು ನಂಬಿ - 'ಆಟವಾಡಲು ನಾವೇನು ಮಕ್ಕಳೇ?!' ಎಂಬ ಉದ್ಗಾರ ತೆಗೆಯುತ್ತಾರೆ. ಇಂದು ದೊಡ್ಡವರಲ್ಲಿ ಕೂಡ ಕ್ರೀಡಾ ಮನೋಭಾವ ಕಡಿಮೆಯಾಗಿರುವುದು ಅನುಭವಕ್ಕೆ ಬರುತ್ತದೆ. ಅನಾವಶ್ಯಕ ಸ್ಪರ್ಧೆ, ಸೋಲಿನ ಸೇಡು, ಗೆಲುವಿಗಾಗಿ ಅಡ್ಡದಾರಿ ಇವೆಲ್ಲವೂ ಬದುಕೆಂಬ ಆಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮಾನಸಿಕ ಸ್ಥಿತಿಗಳಾಗಿವೆ. ಮೈದಾನದಲ್ಲಿ ಆಡುವುದರ ಜೊತೆಗೆ, ಬದುಕೆಂಬ ಆಟವನ್ನು "ಕ್ರೀಡಾ ಸ್ಫೂರ್ತಿ"ಯಿಂದಲೇ ಆಡೋಣ. ಗೆದ್ದರೆ ಖುಷಿ ಪಡೋಣ, ಸೋತರೆ ಇನ್ನೂ ಸಂತೋಷಿಸೋಣ, ಏಕೆಂದರೆ ಸೋಲಿನ ನಂತರದ ಗೆಲುವಿನ ರುಚಿ ಅನುಭವಿಸಿದವರಿಗಷ್ಟೇ ತಿಳಿದ ರಹಸ್ಯ...!!

ಆಶಯ: 30x40  ಕೊಠಡಿಯಲ್ಲಿ ಕಲಿತು, 30x40  ಮನೆಯಲ್ಲಿ ವಾಸಮಾಡಿ, ದೊಡ್ಡ ಕಂಪನಿ ಗಳ ಬೃಹದಾಕಾರದ ಕಟ್ಟಡಗಳಲ್ಲಿ, ಮೊದಲೇ ನಿಗದಿ ಪಡಿಸಿದ 3x4 ಜಾಗದಲ್ಲಿ ಕುಳಿತು ಕೆಲಸ ಮಾಡಿ, ಕೊನೆಯಲ್ಲಿ 3x4 ಗುಂಡಿಯಲ್ಲಿ ಮಲಗುವ ಮೊದಲು ದೊಡ್ಡ ಮೈದಾನಗಳಿಗೆ ಇಳಿದು ಆಟವಾಡೋಣವೇ? - ಕ್ರೀಡಾಮನೋಭಾವವನ್ನು ನಮ್ಮದಾಗಿಸಿಕೊಳ್ಳೋಣವೇ?

ನಿಮ್ಮವ,
ಹ.ನಾ.ಮಾಧವ ಭಟ್ 
ಪುಷ್ಯ-ಕೃಷ್ಣ-ತ್ರಯೋದಶಿ, ಶನಿವಾರ.
೦೨-೦೨-೨೦೧೯
ಬೆಂಗಳೂರು.