।। ಆಟವಾಡದೇ ಇದ್ದರೂ, ಕ್ರೀಡಾ ಮನೋಭಾವ ನಮ್ಮದಾಗಿಸಿ ಕೊಳ್ಳೋಣ ।।
ಇಂದಿನ ದಿನಗಳಲ್ಲಿ ಪಾಠಗಳ ಹಾವಳಿಯಿಂದಾಗಿ ಆಟಗಳ ಸಂಖ್ಯೆ, ಉತ್ಸಾಹ ಎರಡೂ ಕೂಡಾ ಮಕ್ಕಳಲ್ಲಿಯೇ ಕಡಿಮೆಯಾಗಿದೆ. ಆಟಗಳ ಬಗೆಗಿನ ಒಟ್ಟಾರೆ ಕಲ್ಪನೆಯ ಕೊರತೆಯಿಂದಾಗಿ ಕ್ರಿಕೆಟ್ ಒಂದೇ ಆಟವಾಗಿರುವುದು ಕಂಡು ಬರುತ್ತದೆ. ಆದರೂ ಸಹ ಇತ್ತೀಚಿಗೆ ಕಬ್ಬಡ್ಡಿ & ಹಾಕಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ.
![]() |
| ಡಾ||ಹೆಡಗೇವಾರ್ |
ಆಟಗಳು ಗೆಲುವು ಮತ್ತು ಸೋಲಿನ ರುಚಿ ತೋರಿಸಿಕೊಡುತ್ತವೆ. ಸೋತಾಗ ಕಹಿಯಾಗಿರುತ್ತದೆ, ಗೆದ್ದಾಗ ಸಿಹಿಯಾಗಿರುತ್ತದೆ. ಆದರೆ ಸೋತು ಗೆದ್ದಾಗ ಅದು ನವರಸ ಭಾರಿತವಾಗಿರುತ್ತದೆ - ಇದು ಆಟಗಳಿಂದ ಸಿಗುವ ಪಾಠ. ಈ ಸೋಲು-ಗೆಲುವುಗಳನ್ನು ಅರ್ಥೈಸಿಕೊಳ್ಳುವುದೇ "ಕ್ರೀಡಾ ಮನೋಭಾವ". ಆದರೆ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ಆಟವಾಡಲು ಶಾಲೆಗಳಲ್ಲಿ ಸರಿಯಾದ ಮೈದಾನಗಳಿಲ್ಲದಿರುವುದು ಇಂದಿನ ದುರಂತ. ಶಾಲೆಗಳು ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಗಳಂತೆ "ಕ್ರೀಡಾಂಗಣ" ಕೂಡ ಮಕ್ಕಳಿಗೆ ಅತ್ಯವಶ್ಯಕ ಎಂದು ಮನಗಾಣಬೇಕು. ಇನ್ನು ಕೆಲವು ಶಾಲೆಗಳಲ್ಲಿ, ವಸತಿ-ವಿದ್ಯಾಲಯಗಳಲ್ಲಿ ಮೈದಾನಗಳಿದ್ದೂ, ಸಿಲಬಸ್ ಎಂಬ ಸೈತಾನನಿಂದಾಗಿ ಮಕ್ಕಳು ಆಟವಾಡದಂತಾಗಿದೆ. ಪರಿಣಾಮವಾಗಿ ಕ್ರೀಡಾಮನೋಭಾವ ಕಡಿಮೆಯಾಗುತ್ತಿದೆ.
ಸುದ್ದಿ ಮಾಧ್ಯಮಗಳಲ್ಲಿ ನೋಡಿದಂತೆ, ಒಂದು ಅಂಕದಿಂದ ಫೇಲ್ ಅದರಿಂದ ಹಿಡಿದು ಅದೇ ಒಂದು ಅಂಕದಿಂದ ಮೊದಲ ರ‍್ಯಾಂಕ್ ತಪ್ಪಿಸಿಕೊಂಡವರವರೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಸರಿಯಾಗಿ ರೂಪಿಸದ ಪೋಷಕರ, ಅಧ್ಯಾಪಕರ, ಶಾಲಾ-ಕಾಲೇಜುಗಳ, ಒಟ್ಟಾರೆ ಸಮಾಜದ ಬೇಜವಾಬ್ದಾರಿ ನೆಡೆ ಎಂದೆನಿಸುತ್ತದೆ.
ನಾವು ದೊಡ್ಡವರಾಗುತ್ತಾ ಆಟ ಆಡುವುದನ್ನು ಕಡಿಮೆ ಮಾಡುತ್ತೇವೆ - ಮುಂದುವರಿದು ನಿಲ್ಲಿಸಿಯೇ ಬಿಡುತ್ತೇವೆ. ಇನ್ನು ಕೆಲವರಂತೂ, ಆಟವಾಡುವುದು ಮಕ್ಕಳು ಮಾತ್ರವೆಂದು ನಂಬಿ - 'ಆಟವಾಡಲು ನಾವೇನು ಮಕ್ಕಳೇ?!' ಎಂಬ ಉದ್ಗಾರ ತೆಗೆಯುತ್ತಾರೆ. ಇಂದು ದೊಡ್ಡವರಲ್ಲಿ ಕೂಡ ಕ್ರೀಡಾ ಮನೋಭಾವ ಕಡಿಮೆಯಾಗಿರುವುದು ಅನುಭವಕ್ಕೆ ಬರುತ್ತದೆ. ಅನಾವಶ್ಯಕ ಸ್ಪರ್ಧೆ, ಸೋಲಿನ ಸೇಡು, ಗೆಲುವಿಗಾಗಿ ಅಡ್ಡದಾರಿ ಇವೆಲ್ಲವೂ ಬದುಕೆಂಬ ಆಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮಾನಸಿಕ ಸ್ಥಿತಿಗಳಾಗಿವೆ. ಮೈದಾನದಲ್ಲಿ ಆಡುವುದರ ಜೊತೆಗೆ, ಬದುಕೆಂಬ ಆಟವನ್ನು "ಕ್ರೀಡಾ ಸ್ಫೂರ್ತಿ"ಯಿಂದಲೇ ಆಡೋಣ. ಗೆದ್ದರೆ ಖುಷಿ ಪಡೋಣ, ಸೋತರೆ ಇನ್ನೂ ಸಂತೋಷಿಸೋಣ, ಏಕೆಂದರೆ ಸೋಲಿನ ನಂತರದ ಗೆಲುವಿನ ರುಚಿ ಅನುಭವಿಸಿದವರಿಗಷ್ಟೇ ತಿಳಿದ ರಹಸ್ಯ...!!
ಆಶಯ: 30x40 ಕೊಠಡಿಯಲ್ಲಿ ಕಲಿತು, 30x40 ಮನೆಯಲ್ಲಿ ವಾಸಮಾಡಿ, ದೊಡ್ಡ ಕಂಪನಿ ಗಳ ಬೃಹದಾಕಾರದ ಕಟ್ಟಡಗಳಲ್ಲಿ, ಮೊದಲೇ ನಿಗದಿ ಪಡಿಸಿದ 3x4 ಜಾಗದಲ್ಲಿ ಕುಳಿತು ಕೆಲಸ ಮಾಡಿ, ಕೊನೆಯಲ್ಲಿ 3x4 ಗುಂಡಿಯಲ್ಲಿ ಮಲಗುವ ಮೊದಲು ದೊಡ್ಡ ಮೈದಾನಗಳಿಗೆ ಇಳಿದು ಆಟವಾಡೋಣವೇ? - ಕ್ರೀಡಾಮನೋಭಾವವನ್ನು ನಮ್ಮದಾಗಿಸಿಕೊಳ್ಳೋಣವೇ?
ನಿಮ್ಮವ,
ಹ.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ತ್ರಯೋದಶಿ, ಶನಿವಾರ.
೦೨-೦೨-೨೦೧೯
ಬೆಂಗಳೂರು.



Bahala khushi aaythu ninna blog odhi. Olleyadaagali.
ReplyDelete