ಮಾತೃ ಭಾಷೆ - ಅದು ಅಂತರಂಗದ ಭಾಷೆ.

ಫೆಬ್ರುವರಿ ೨೧ರ ಈ ದಿನವನ್ನು ಜಗತ್ತು 'ಅಂತಾರಾಷ್ಟ್ರೀಯ ಮಾತೃಭಾಷಾ ದಿನ 'ವನ್ನಾಗಿ ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ, ಮಾತೃಭಾಷೆಯ ಬಗ್ಗೆ ಮೆಲಕು ಹಾಕಲು ಇಚ್ಛಿಸುತ್ತೇನೆ.
ಭಾಷೆ ಮಾನವನಿಗಿರುವ ಒಂದು ಪ್ರಮುಖ ಸಂವಹನಾ ಮಾಧ್ಯಮ. ನಮ್ಮ ಭಾವನೆ, ಅನಿಸಿಕೆಗಳನ್ನು ಇತರರಿಗೆ ತಿಳಿಸಲು ಇರುವ ಸಾಧನವೆನ್ನಬಹುದು. ಹೀಗೆ ಇತರರೊಂದಿಗೆ ಸಂವಹಿಸಲು ಇರುವ ಭಾಷೆಗಳು ಹಲವು. ಆದರೆ, ನಾವು ನಮ್ಮ ಅಂತರಂಗದೊಂದಿಗೆ ಮಾತನಾಡುವ ಭಾಷೆ ಒಂದೇ - ಅದೇ ನಮ್ಮ ಮಾತೃ ಭಾಷೆ. ನಮ್ಮ ಭಾವನೆಗಳೊಂದಿಗೆ ಬೆರೆತು ಅದೂಕೂಡ ಒಂದು ಭಾವನಾತ್ಮಕ ವಿಷಯವಾಗಿದೆ.
ಯಾವುದೇ ಭಾಷೆ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಂಡಿರುತ್ತದೆ. ಹಾಗಾಗಿ ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ಹಿಂದಿರುವ ಸಂಸ್ಕೃತಿಯ ಅನೇಕ ಅಂಶಗಳನ್ನು ಕಲಿಯುತ್ತೇವೆ. ಹಾಗೆಯೇ ಒಂದು ಭಾಷೆಯನ್ನು ದೂರ ಮಾಡಿಕೊಂಡಾಗ ಆ ಸಂಸ್ಕೃತಿಯ ಅನೇಕ ಅಂಶಗಳನ್ನು ದೂರ ಮಾಡಿಕೊಳ್ಳುತ್ತೇವೆ. ಈ ದೃಷ್ಟಿಯಿಂದ ನೋಡಿದಾಗ ನಮಗೆ ನಮ್ಮ ಮಾತೃಭಾಷೆಯ ಮಹತ್ವ ಅರಿವಾಗುತ್ತದೆ. ಒಬ್ಬನ ಮಾತೃಭಾಷೆ ಆತನನ್ನು ಅವನ ಮೂಲದೊಂದಿಗೆ ಜೋಡಿಸುತ್ತದೆ. ಬೇರೆ ಎಲ್ಲ ಭಾಷೆಗಳು ನಮ್ಮನ್ನು ನಮ್ಮ ಮೂಲದಿಂದ ವಿಸ್ತಾರಗೊಳಿಸುತ್ತಾ ಜಾಗತಿಕ ಮಟ್ಟಕ್ಕೆ ಏರಿಸುತ್ತವೆ. ಹಾಗಾಗಿಯೇ ಹಲವು ಭಾಷೆಗಳನ್ನು ಕಲಿಯುವುದು ಅನಿವಾರ್ಯವಷ್ಟೇ ಅಲ್ಲ ಆವಶ್ಯಕವೂ ಹೌದು.
ನಾವು ಮಾತೃ ಭಾಷೆಯ ಉಪಯೋಗ ಕಡಿಮೆ ಮಾಡಿ ಬೇರೆ ಭಾಷೆಗಳಿಗೆ ಒತ್ತು ಕೊಡುತ್ತಿದ್ದೇವೆಂದರೆ ಆ ಮಟ್ಟಿಗೆ ಬೇರೆ ಸಂಸ್ಕೃತಿಯನ್ನು ಒಳಗೆ ಬಿಟ್ಟಿದ್ದೇವೆಂದೇ ಅರ್ಥ. ಇಂದು ಆಂಗ್ಲಭಾಷೆ ಜಗತ್ತನ್ನೆಲ್ಲಾ ಆವರಿಸಿದೆಯೋ ಇಲ್ಲವೋ ಭಾರತವನ್ನಂತೂ ಬಹುವಾಗಿ ಆವರಿಸಿದೆ. ಒಂದು ಜಾಗತಿಕ ಭಾಷೆಯಾಗಿ ಆಂಗ್ಲಭಾಷೆ ನಮಗೆ ಬೇಕೇ ಬೇಕು - ಇದರಲ್ಲಿ ಸಂಶಯವೇ ಇಲ್ಲ. ಆದರೆ ಅದು ಕೇವಲ ವ್ಯಾವಹಾರಿಕ ಭಾಷೆಯಾಗದೆ ನಮ್ಮೊಳಗೆ ಇಳಿಯುತ್ತಿರುವ ವೇಗ, ಪ್ರಮಾಣ, ತೀವ್ರತೆ ಆತಂಕವನ್ನುಂಟು ಮಾಡುತ್ತದೆ.
ವ್ಯಾವಹಾರಿಕ ಭಾಷೆಗೂ, ಮಾತೃಭಾಷೆಗೂ ನಡುವೆ ಇರುವ ವ್ಯತ್ಯಾಸವನ್ನು ಅರಿಯಲು ನಾವು ಭಾರತೀಯರು ವಿಫಲರಾಗಿದ್ದೇವೆ. ಜಪಾನ್, ಚೀನಾ, ಕೊರಿಯಾ, ಜರ್ಮನಿ, ಫ್ರಾನ್ಸ್,... ಹೀಗೆ ಅನೇಕ ದೇಶಗಳಲ್ಲಿ ಆಂಗ್ಲಭಾಷೆ ನಮ್ಮೊಳಗೆ ಹೊಕ್ಕಿರುವಷ್ಟು ಹೊಕ್ಕಿಲ್ಲ. ನಾವು ಆಂಗ್ಲಭಾಷೆಯನ್ನು ಒಂದು ಭಾಷಾ ಮಾಧ್ಯಮವನ್ನಾಗಿ ತೆಗೆದುಕೊಳ್ಳದೆ, ಒಂದು ಕಬ್ಬಿಣದ ಕಡಲೆಯಂತಿರುವ ವಿಷಯವಾಗಿ ತಿಳಿದುಕೊಂಡಿರುವುದೇ ಒಂದು ದುರಂತ.
ಇವೆಲ್ಲದರ ಮಧ್ಯೆ, ಅನೇಕರು, ಆಂಗ್ಲಭಾಷೆಯನ್ನು ಕಲಿಯದವರ ಸ್ಥಿತಿಯನ್ನು ನೋಡಿ ತಾವು ಮಾತೃಭಾಷೆಯನ್ನು ದೂರಮಾಡುತ್ತಿರುವುದು ಮೇಲ್ನೋಟಕ್ಕೆ ವೇದ್ಯವಾಗುತ್ತಿದೆ. ಆಂಗ್ಲಭಾಷೆಯ ಜ್ಞಾನವಿಲ್ಲದಿರುವಾಗ ಜಾಗತಿಕ ಮಟ್ಟದ ವ್ಯವಹಾರ ಕಷ್ಟವಾಗುತ್ತದೆ, ಅನೇಕ ಅವಕಾಶಗಳು ಕಡಿಮೆ ಆಗುತ್ತವೆ. ಇಂತಹ ಸನ್ನಿವೇಶದಲ್ಲಿ ನಾವು ಆಂಗ್ಲಭಾಷೆಯನ್ನು ಚೆನ್ನಾಗಿ ಕಲಿಯಬೇಕೇ ಹೊರತು, ಮಾತೃಭಾಷೆಯ ಸ್ಥಾನದಲ್ಲಿ ಅದನ್ನು ಕುಳ್ಳಿರಿಸುವುವುದು ಸರಿಯಾದ ಆಯ್ಕೆಯಾಗುವುದಿಲ್ಲ. ಅನೇಕರು ಆಂಗ್ಲಭಾಷೆಯನ್ನೇ ತಮ್ಮ ಮನೆಗಳಲ್ಲಿ ನಿತ್ಯದ ಆಡುಭಾಷೆಯನ್ನಾಗಿರಿಸಿಕೊಂಡಿರುವುದು ಖೇದದ ಸಂಗತಿ. ಇದರಿಂದ ಆಗುವ ಅಪಾಯಗಳೇ ಹೆಚ್ಚು. ಬಹುಮುಖ್ಯವಾಗಿ ನಾವು ನಮ್ಮ ಮೂಲದಿಂದ ದೂರವಾಗುತ್ತೇವೆ. ಅಂತೆಯೇ ಸಂಪೂರ್ಣ ಪಾಶ್ಚ್ಯಾತ್ಯರೂ ಆಗದೆ ತ್ರಿಶಂಕು ಸ್ಥಿತಿಯನ್ನು ತಲುಪುತ್ತೇವೆ. ಇದರ ಒಂದು ಪರಿಣಾಮವನ್ನು ನಾವು ನಮ್ಮ ಸಂಬಂಧಗಲ್ಲಿ ಕಾಣಬಹುದು. ಇಂದು ಅನೇಕರಿಗೆ ಪುರುಷರೆಲ್ಲರೂ 'ಅಂಕಲ್'ಗಳಾಗಿ ಮತ್ತು ಮಹಿಳೆಯರೆಲ್ಲರೂ 'ಆಂಟಿ'ಯಾರಾಗಿ ಕಾಣುತ್ತಾರೆ. ಅತ್ತಿಗೆ, ನಾದಿನಿ, ಬಾವ, ಬಾಮೈದ, ಚಿಕ್ಕಪ್ಪ-ದೊಡ್ಡಪ್ಪಂದಿರೆಲ್ಲಾ ಮಾಯವಾಗಿದ್ದರೆ. ಇದು ಅತ್ಯಂತ ಮೇಲಿನ ಹಂತದ ಪರಿಣಾಮ - ಇನ್ನೂ ಒಳಹೊಕ್ಕು ನೋಡಿದಾಗ ಅದರ ಆಳ ಅರಿವಾಗುತ್ತದೆ.
ಉಪಯೋಗಿಸದ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಉದಾಹರಣೆಗೆ, ನಮ್ಮಲ್ಲಿ ಅನೇಕರಿಗೆ ಕನ್ನಡ ಮಾತನಾಡಲು ಬಂದರೂ, ಉಪಯೋಗಿಸದ ಕಾರಣ ಕನ್ನಡದ ಅಂಕೆ-ಸಂಖ್ಯೆಗಳ ಪರಿಚಯವಿರುವುದಿಲ್ಲ. ಅಂದರೆ, ಆಡದ ಭಾಷೆ ಉಳಿಯುವುದು ಕಷ್ಟ. ಇನ್ನು ಮಾತೃಭಾಷಾ ಶಿಕ್ಷಣ, ಸಿನಿಮಾ ಡಬ್ಬಿಂಗ್, ಅಂಗಡಿ ಮುಂಗಟ್ಟುಗಳಲ್ಲಿ ಮಾತೃಭಾಷೆ, ಬಸ್ಸು-ರೈಲು ನಿಲ್ದಾಣಗಳಲ್ಲಿ , ಸರ್ಕಾರಿ ಕಛೇರಿಗಳಲ್ಲಿ ಮಾತೃಭಾಷೆಯ ನುಡಿಗಟ್ಟುಗಳು,...ಇವಲ್ಲ ಚರ್ಚೆಯ ವಿಷಯವಾಗಬಹುದಷ್ಟೆ. ಇಂದಿನ ಸನ್ನಿವೇಶದಲ್ಲಿ ಮಾತೃಭಾಷೆಯನ್ನು ಸಂಪೂರ್ಣ ವ್ಯಾವಹಾರಿಕ ಭಾಷೆಯನ್ನಾಗಿ ಮಾಡುವುದು ಅಪ್ರಾಯೋಗಿಕ. ಆದರೆ ಅದನ್ನು ನಮ್ಮದಾಗಿಸಿಕೊಳ್ಳಬಹುದು - ಮಾತೃಭಾಷೆಯಲ್ಲಿ ಮಾತನಾಡುವ, ಓದುವ-ಬರೆಯುವ ಕೆಲಸವಾಗಬೇಕು. ನಮ್ಮ ಮಾತೃಭಾಷೆಯ ಪ್ರಧಾನ ಪ್ರಾಕಾರಗಳೆನಿಸಿದ ಜಾನಪದ-ದಾಸ ಸಾಹಿತ್ಯಗಳನ್ನು ಅಭ್ಯಸಿಸಬೇಕು. ಇವೆಲ್ಲವೂ ನಮ್ಮ ಸೃಜನಾತ್ಮಕ ಶಕ್ತಿ, ಸಂವೇದನಾ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ನಮ್ಮ ಮಾತೃಭಾಷೆಯನ್ನು ಅಭ್ಯಸಿಸಬೇಕು. ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಮಾತೃಭಾಷೆಯ ಪರಿಚಯವನ್ನು ಪೂರ್ಣವಾಗಿ ಮಾಡಿಕೊಳ್ಳಬೇಕು - ಒಟ್ಟಿನಲ್ಲಿ ಮನೆಗೆದ್ದು ಮಾರು ಗೆಲ್ಲಲು ಹೊರಡಬೇಕು.
ಕೊನೆಯ ಹನಿ: English ನಲ್ಲಿ 'ರಂಗೋಲಿ' ಹಾಕಲೂ ಆಗುವುದಿಲ್ಲ, 'ಮಡಿಬಟ್ಟೆ' ಉಡಲೂ ಆಗುವುದಿಲ್ಲ. ಎಷ್ಟೇ ಆದರೂ, 'Ragi Ball' ಗಿಂತ 'ರಾಗಿ ಮುದ್ದೆ'ಯೇ ಗಟ್ಟಿ. 'ಅನ್ನ'ಕ್ಕಿರುವ ಅಂದ 'Rice'ನಲ್ಲಿಲ್ಲ. 'ಬಾಳೆಎಲೆ ಊಟ'ದ ಗಮ್ಮತ್ತು 'Banana leaf'ನಲ್ಲಿ ಮಾಡುವ 'Meal'ನಲ್ಲಿಲ್ಲ. ಅನೇಕರು ಮಾತೃಭಾಷೆಯಲ್ಲಿ ಸರಿಯಾಗಿ ವ್ಯವಹರಿಸಲು ಬಾರದೇ English ಗೆ ಜೋತು ಬಿದ್ದಿರುವುದನ್ನು ನಾವು ಒಂದು 'ಹೆಗ್ಗಳಿಕೆ' ಅಂದುಕೊಂಡರೆ ಅದು ಮೂರ್ಖತನವೇ ಸರಿ.
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಹ.ನಾ.ಮಾಧವ ಭಟ್
ಮಾಘ-ಕೃಷ್ಣ-ದ್ವಿತೀಯಾ, ಗುರುವಾರ.
೨೧-೦೨-೨೦೧೯
ಬೆಂಗಳೂರು.
ದಿನ ವಿಶೇಷ: ಅಂತಾರಾಷ್ಟ್ರೀಯ ಮಾತೃಭಾಷಾ ದಿನ.

No comments:
Post a Comment