ವಿಶ್ವ ನಗೆ ದಿನ - ಹಸನ್ಮುಖಿ ಸದಾ ಸುಖಿ.
ಇಂದು ವಿಶ್ವ ನಗೆ ದಿನ. ಮೇ ತಿಂಗಳ ಮೊದಲ ಭಾನುವಾರವನ್ನು ಜಗತ್ತು "ನಗೆ ದಿನ"ವನ್ನಾಗಿ ಆಚರಿಸುತ್ತದೆ. ಇದು ನಗುವಿನ ಮಹತ್ವವನ್ನು ತಿಳಿಸುತ್ತದೆ. 'ನಗು' ಮನಸ್ಸು ಹಗುರವಾಗಿದ್ದಾಗ ತನ್ನಿಂದ ತಾನೇ ಹೊರ ಹೊಮ್ಮುವ ಭಾವ, ಮನಸ್ಸಿನ ಒಳಗಿನ ಸಂತೋಷವನ್ನು ಮುಖದ ಮೇಲೆ ಹೊರ ಜಗತ್ತಿಗೆ ವ್ಯಕ್ತ ಪಡಿಸುವ ಪ್ರಕ್ರಿಯೆಯೇ 'ನಗು'. ಈ ನಗು ದೊಡ್ಡವರನ್ನು ಚಿಕ್ಕ ಮಗುವನ್ನಾಗಿ ಪರಿವರ್ತಿಸಬಲ್ಲದು. ನಿಷ್ಕಳಂಕವಾದ ನಗುವನ್ನು ನಾವು ಚಿಕ್ಕ ಮಕ್ಕಳಲ್ಲಿ ನೋಡುತ್ತೇವೆ. ಕಪಟವಿಲ್ಲದ ಮಕ್ಕಳ ಈ ನಗು ಎಂತಹವರನ್ನಾದರೂ ಮುಗ್ಧರನ್ನಾಗಿಸುತ್ತದೆ. ಇಂತಹ ಮಕ್ಕಳ ನಗುವನ್ನು ನೋಡಿಯೇ ಕವಿ ಡಿಂಡಿಮ "ಕಮಲೇ ಕಾಮಲೋತ್ಪತ್ತಿ:"- ಒಂದು ಕಮಲದಲ್ಲಿ ಇನ್ನೊಂದು ಕಮಲಹುಟ್ಟುತ್ತದೆ ಎಂದು ಮಕ್ಕಳ ಮುಖಾರವಿಂದವನ್ನು ವರ್ಣಿಸಿರುವುದು. ಮನಸ್ಸು ಅತ್ಯಂತ ಸಮಾಧಾನವಾಗಿದ್ದಾಗ ಮಾತ್ರ ವ್ಯಕ್ತವಾಗುವ ಭಾವ - ನಗು. ನಾವೆಷ್ಟು ನಗುತ್ತೇವೆ ಅನ್ನುವುದು ನಮ್ಮ ಮನಸ್ಸಿನ ಲಯವನ್ನು ತಿಳಿಸುತ್ತದೆ.ನಗು ಕೇವಲ ಒಂದು ಬಹಿರ್ಮುಖವಾದ ಕ್ರಿಯೆಯಾಗದೆ ಅಂತರಂಗದ ಅನುಭೂತಿಯಾಗಿದೆ. ಈ ಅನುಭೂತಿಯನ್ನು ಪಡೆಯಲು ನಾವು ನಮ್ಮ ಜೀವನಕ್ರಮ, ಚಿಂತನಾವಿಧಿಗಳನ್ನು 'ಟ್ಯೂನ್' ಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಧಾವಂತ ಜೀವನ ಪದ್ದತಿಯಲ್ಲಿ ನಗುವುದು ಹಾಗೆಯೇ ನಗಿಸುವುದು ಸುಲಭದ ಕೆಲಸಗಳಲ್ಲ. ಅತ್ಯಂತ ಸ್ವಾಭಾವಿಕವಾಗಿ ಹೊರಹೊಮ್ಮಬೇಕಾದ ನಗುವನ್ನು ನಮಗೆ ಪುನಃ ನೆನಪಿಸಲು ತರಬೇತಿಗಳ, ಶಿಬಿರಗಳ ಅವಶ್ಯಕತೆ ಬಂದಿರುವುದು ಒಂದು ವಿಪರ್ಯಾಸವೇ ಸರಿ.
ನಮ್ಮಲ್ಲಿ ಅನೇಕರು ಚಿಂತೆ ಮಾಡುತ್ತಲೇ ಕೊನೆಗೆ ಚಿತೆಯನ್ನೇರುತ್ತೇವೆ. ಚಿಂತೆ ನಮ್ಮನ್ನು 'ಶೂನ್ಯ ಭಾವ'ದೆಡೆಗೆ ದೂಡುತ್ತದೆ. ಮಕ್ಕಳಿಗೆ ಪಠ್ಯ-ಪುಸ್ತಕ, ಪರೀಕ್ಷೆಗಳ ಚಿಂತೆ, ಶಿಕ್ಷಕರಿಗೆ ಶಾಲಾ-ಕಾಲೇಜುಗಳ ಫಲಿತಾಂಶದ್ದೇ ಚಿಂತೆ, ಇನ್ನು ಪೋಷಕರಿಗೆ ಮಕ್ಕಳ ೧೦೦ ವರ್ಷದ ಜೀವನಕ್ಕಿಂತ ಅವರು ೧೦೦% ಪಡೆಯುವುದೇ ದೊಡ್ಡ ಚಿಂತೆ..!!ಉದ್ಯೋಗಿಗಳಿಗೆ ವಾರ್ಷಿಕ ಬಡ್ತಿಯದ್ದೇ ಚಿಂತೆ, ಗಂಡನಿಗೆ ಹೆಂಡತಿಯ ಚಿಂತೆ, ಹೆಂಡತಿಗೆ ಗಂಡನದ್ದೇ ಚಿಂತೆ. ಗಂಡ-ಹೆಂಡತಿ ಇಬ್ಬರಿಗೂ ಮಕ್ಕಳ ಚಿಂತೆ. ಹೀಗೆ ಖಂತೆ ಖಂತೆ ಚಿಂತೆಗಳ ಸಂತೆಯಲ್ಲಿ ನಾವಿದ್ದೇವೆ. ಹಾಗಾಗಿ ಮನಸ್ಸು ಭಾರವಾಗಿ ನಗು ಅನುಭವಕ್ಕೆ ಬಾರದಾಗಿದೆ. ನಾವು ಅನಾವಶ್ಯಕ ಚಿಂತೆಗಳನ್ನು ದೂರ ಮಾಡೋಣ. ದಿನಗಳನ್ನು ಮುಂದೂಡುವ ಬದಲು, ಪ್ರತಿ ಕ್ಷಣವನ್ನು ಅನುಭವಿಸೋಣ. ಆಧುನಿಕ ಸಂಶೋಧನೆಗಳ ಪ್ರಕಾರ 'ನಗು' ಒಂದು ಔಷಧವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಲ ಗರ್ಭದಲ್ಲಿ ಅಡಕವಾಗಿದೆ ಎಂದರಿತು "ಕಾಲಾಯ ತಸ್ಮೈ ನಮಃ" ಎನ್ನೋಣ. ಮನಸ್ಸನ್ನು ತಿಳಿಯಾಗಿಡಲು ಪ್ರಯತ್ನಿಸೋಣ. ತಿಳಿಯಾದ ಮನಸ್ಸಿನ ವ್ಯಕ್ತ ರೂಪವೇ ನಗು. ಮುಖದ ಮೇಲಿನ ಮಂದಹಾಸ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ ಎಂಬುದು ಗಮನೀಯ ಅಂಶ.
ಇನ್ನೂಅನೇಕರಿಗೆ ಹಾಸ್ಯ ಮತ್ತು ಅಪಹಾಸ್ಯಗಳ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಹಾಸ್ಯ ಮಾಡುವ ಭರದಲ್ಲಿ ಅಪಹಾಸ್ಯ ಮಾಡುತ್ತಾರೆ. ಇನ್ನೊಬ್ಬರ ದೌರ್ಬಲ್ಯಗಳನ್ನೇ ವಿಷಯ ಮಾಡಿ ನಗುವುದು ಅಪಹಾಸ್ಯವಾಗುತ್ತದೆ. ಇತರರಿಗೆ ನೋವಾಗುವಂತೆ ನಗುವುದೇ ಲೇವಡಿ-ಕುಹಕವಾಗುತ್ತದೆ. ನಮ್ಮ ನಗು ಇತರರ ಮನಸ್ಸನ್ನು ಅರಳಿಸಬೇಕು, ಕೆರಳಿಸಬಾರದು - ನೋಯಿಸಬಾರದು. ನಗುವುದು - ನಗಿಸುವುದು ಒಂದು ಕಲೆ. ಇದನ್ನು ಕರಗತ ಮಾಡಿಕೊಳ್ಳಬೇಕು. ನವಿರಾದ ಹಾಸ್ಯಪ್ರಜ್ಞೆ ಸ್ನೇಹಿತರನ್ನು ಸಂಪಾದಿಸುತ್ತದೆ, ಸಂಬಂಧಗಳನ್ನು ಗಟ್ಟಿ ಮಾಡುತ್ತದೆ. ಆದರೆ ಅಪಹಾಸ್ಯ ಸಂಬಂಧಗಳನ್ನು ಶಾಶ್ವತವಾಗಿ ದೂರ ಮಾಡುತ್ತದೆ. ಹೀಗೆ ನಗುವಿನ ಲಯವನ್ನು ಅರಿತುಕೊಳ್ಳುವುದೇ 'ಹಾಸ್ಯಪ್ರಜ್ಞೆ'. ಇಂತಹ ತಿಳಿಯಾದ ಹಾಸ್ಯಪ್ರಜ್ಞೆ ನಮ್ಮದಾಗಬೇಕು.
ಕೊನೆಯ ಹನಿ: Smily ಗಳನ್ನು Whatsapp ನಿಂದ ಹೊರತಂದು ನಮ್ಮ ಮುಖದಲ್ಲಿ ವ್ಯಕ್ತಪಡಿಸೋಣ. ನಗೋಣ-ನಗಿಸೋಣ, ಹಸನ್ಮುಖಿಗಳಾಗೋಣ - ಸದಾಸುಖಿಗಳಾಗೋಣ. ಕೊನೆಯಲ್ಲಿ ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಈ ತುಣುಕನ್ನು ಮೆಲುಕು ಹಾಕುತ್ತಾ ನಗುವಿನ ಮರ್ಮವನ್ನು ಅರಿತುಕೊಳ್ಳೋಣ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ ||
ಸದಾ ನಿಮ್ಮವ,
ಹ.ನಾ.ಮಾಧವ ಭಟ್
ವೈಶಾಖ-ಕೃಷ್ಣ-ಪಂಚಮಿ.
೦೫-ಮೇ-೨೦೧೯, ಭಾನುವಾರ
ಬೆಂಗಳೂರು.


No comments:
Post a Comment