Saturday, 2 February 2019

Life: Sports and Sportiveness

।। ಆಟವಾಡದೇ ಇದ್ದರೂ, ಕ್ರೀಡಾ ಮನೋಭಾವ ನಮ್ಮದಾಗಿಸಿ ಕೊಳ್ಳೋಣ ।।

ಇತ್ತೀಚಿಗೆ ಕೆಲ ತಿಂಗಳುಗಳಿಂದ ವಾರಕ್ಕೆರಡು ಬಾರಿಯಂತೆ ಫುಟ್ಬಾಲ್ ಆಡಲು ಹೋಗುತ್ತಿದ್ದೇನೆ. ಆರಂಭದಲ್ಲಿ ಸ್ನೇಹಿತರ ಒತ್ತಾಯಕ್ಕೆ ಹೋಗಲು ಶುರು ಮಾಡಿದರೂ, ಇದುವರೆಗೂ ಒಂದೂ ಗೋಲ್ ಹೊಡೆಯದೆ ಇದ್ದರೂ, ಫುಟ್ಬಾಲ್ ಶೂ ಹಾಕಿ ರೊನಾಲ್ಡೊ ರೇಂಜ್ ಗೆ ಮೈದಾನಕ್ಕೆ ಇಳಿಯುತ್ತೇನೆ. ನನ್ನಂತೆ ಇನ್ನೂ ಕೆಲ ರೊನಾಲ್ಡೊಗಳು ಜೊತೆಗಿದ್ದಾರೆಂಬುದೇ ನನ್ನ ಧೈರ್ಯ. ಆದರೆ  ಅದೇನೋ ಗೊತ್ತಿಲ್ಲ, ಎರಡು ಗಂಟೆಗಳ ಆಟದ ನಂತರ ಮೈ-ಮನಸ್ಸುಗಳೆರಡೂ ಹಗುರವಾಗುವುದಂತೂ ನಿಶ್ಚಿತ....! ಆ ಎರಡು ಗಂಟೆಗಳ ಆಟ ಇಡೀ ದಿನದ, ಇಡೀ ವಾರದ ಚಿಂತೆಗಳನ್ನೆಲ್ಲಾ ದೂರ ಮಾಡುತ್ತದೆ. ನಾವು ಕ್ರೀಡಾಸ್ಫೋರ್ತಿಯನ್ನು ತೆಗೆದುಕೊಳ್ಳಲು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಯ್ಲಿ ಯ ದರ್ಶನ ಮಾಡಬೇಕಿಲ್ಲ, ರೊನಾಲ್ಡೊ, ಸೆರೆನಾ ವಿಲಿಯಮ್ಸ್ ಆಟೋಗ್ರಾಫ್ ಪಡೆಯಬೇಕಿಲ್ಲ. ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತ ಮುತ್ತಲೇ ಒಬ್ಬ ಕ್ರಿಕೆಟಿಗನೋ, ಫುಟ್ಬಾಲ್ ಆಟಗಾರನೋ, ಚೆಸ್ ಚಾಂಪಿಯನ್ನೋ, ಕಬ್ಬಡ್ಡಿ ವೀರನೋ ಸಿಗುತ್ತಾನೆ..! ನಮ್ಮ ಜೊತೆ ಕೆಲಸ ಮಾಡುವ ಇಂತಹ ಕೆಲ ರೊನಾಲ್ಡೊಗಳೇ ನಮ್ಮ ಫುಟ್ಬಾಲ್ ಆಟಕ್ಕೆ ಪ್ರೇರಣೆ...!!

ಇಂದಿನ ದಿನಗಳಲ್ಲಿ ಪಾಠಗಳ ಹಾವಳಿಯಿಂದಾಗಿ ಆಟಗಳ ಸಂಖ್ಯೆ, ಉತ್ಸಾಹ ಎರಡೂ ಕೂಡಾ ಮಕ್ಕಳಲ್ಲಿಯೇ ಕಡಿಮೆಯಾಗಿದೆ. ಆಟಗಳ ಬಗೆಗಿನ ಒಟ್ಟಾರೆ ಕಲ್ಪನೆಯ ಕೊರತೆಯಿಂದಾಗಿ ಕ್ರಿಕೆಟ್ ಒಂದೇ ಆಟವಾಗಿರುವುದು ಕಂಡು ಬರುತ್ತದೆ. ಆದರೂ ಸಹ ಇತ್ತೀಚಿಗೆ ಕಬ್ಬಡ್ಡಿ & ಹಾಕಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ.

ಡಾ||ಹೆಡಗೇವಾರ್ 
ಆಟಗಳಿಂದ ನಾವು ಕಲಿಯುವ ಪಾಠ ಅನೇಕ. ಒಂದು ತಂಡ (ಟೀಮ್)ದ ಭಾಗವಾಗುವುದು ಹೇಗೆ ಎಂದು ಆಟಗಳು ಸುಲಭವಾಗಿ ಕಲಿಸಿಕೊಡುತ್ತವೆ. ಅದು ನಮ್ಮಲ್ಲಿರುವ ಒಂಟಿತನವನ್ನು ಹೋಗಲಾಡಿಸಿ, ಇತರರೊಂದಿಗೆ ಬೆರೆಯುವುದು ಹೇಗೆಂದು ಕಲಿಸುತ್ತದೆ. ಹೌದು, ಇನ್ನೂಚಿಕ್ಕವಳಾದ ನನ್ನ ಮಗಳು ಇಷ್ಟು ದಿನ ಒಬ್ಬಳೇ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿದ್ದಳು, ಆದರೆ ಈಗ ದೊಡ್ಡವಳಾಗುತ್ತಾ ಆಟವಾಡಲು ಯಾರಾದರೂ ಬೇಕು ಎಂದು ಆಶಿಸುವುದನ್ನು ಗಮನಿಸುತ್ತಿದ್ದೇನೆ. ಆಟಗಳ ಆಕರ್ಷಣೆ ವ್ಯಕ್ತಿಗಳನ್ನು ಪರಸ್ಪರ ಹತ್ತಿರ ತರುತ್ತದೆ. ಹೀಗೆ ಕ್ರೀಡೆಗಳು ಕೇವಲ ಶಾರೀರಿಕ ವ್ಯಾಯಾಮವಾಗದೇ, ವ್ಯಕ್ತಿತ್ವ ನಿರ್ಮಾಣಕ್ಕೇ ಬುನಾದಿಯಾಗಬಹುದು. ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯರಾದ  ವನವಾಸಿ ಮಾವಳಿ ಹುಡುಗರನ್ನು ಉತ್ಕೃಷ್ಟ ಸೈನಿಕರನ್ನಾಗಿ ಪರಿವರ್ತಿಸಿದ್ದು ಇದೆ ಆಟಗಳಿಂದ. ಡಾ||ಹೆಡಗೇವಾರ್ ಕೂಡ ಸಂಘಟನೆಯನ್ನು ಬೆಳೆಸಲು ಕ್ರೀಡೆಗಳನ್ನೇ ಸಾಧನವನ್ನಾಗಿ ಬಳಸಿದರು. ಹೀಗೆ ಆಟಗಳ ಶಕ್ತಿ ಅಪಾರ.

ಆಟಗಳು ಗೆಲುವು ಮತ್ತು ಸೋಲಿನ ರುಚಿ ತೋರಿಸಿಕೊಡುತ್ತವೆ. ಸೋತಾಗ ಕಹಿಯಾಗಿರುತ್ತದೆ, ಗೆದ್ದಾಗ ಸಿಹಿಯಾಗಿರುತ್ತದೆ. ಆದರೆ ಸೋತು ಗೆದ್ದಾಗ ಅದು ನವರಸ ಭಾರಿತವಾಗಿರುತ್ತದೆ - ಇದು ಆಟಗಳಿಂದ ಸಿಗುವ ಪಾಠ. ಈ ಸೋಲು-ಗೆಲುವುಗಳನ್ನು ಅರ್ಥೈಸಿಕೊಳ್ಳುವುದೇ "ಕ್ರೀಡಾ ಮನೋಭಾವ".  ಆದರೆ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ಆಟವಾಡಲು ಶಾಲೆಗಳಲ್ಲಿ ಸರಿಯಾದ ಮೈದಾನಗಳಿಲ್ಲದಿರುವುದು ಇಂದಿನ ದುರಂತ. ಶಾಲೆಗಳು ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಗಳಂತೆ "ಕ್ರೀಡಾಂಗಣ" ಕೂಡ ಮಕ್ಕಳಿಗೆ ಅತ್ಯವಶ್ಯಕ ಎಂದು ಮನಗಾಣಬೇಕು. ಇನ್ನು ಕೆಲವು ಶಾಲೆಗಳಲ್ಲಿ, ವಸತಿ-ವಿದ್ಯಾಲಯಗಳಲ್ಲಿ ಮೈದಾನಗಳಿದ್ದೂ, ಸಿಲಬಸ್ ಎಂಬ ಸೈತಾನನಿಂದಾಗಿ ಮಕ್ಕಳು ಆಟವಾಡದಂತಾಗಿದೆ. ಪರಿಣಾಮವಾಗಿ ಕ್ರೀಡಾಮನೋಭಾವ ಕಡಿಮೆಯಾಗುತ್ತಿದೆ.

ಸುದ್ದಿ ಮಾಧ್ಯಮಗಳಲ್ಲಿ ನೋಡಿದಂತೆ, ಒಂದು ಅಂಕದಿಂದ ಫೇಲ್ ಅದರಿಂದ ಹಿಡಿದು ಅದೇ ಒಂದು ಅಂಕದಿಂದ ಮೊದಲ ರ‍್ಯಾಂಕ್‌ ತಪ್ಪಿಸಿಕೊಂಡವರವರೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಸರಿಯಾಗಿ ರೂಪಿಸದ ಪೋಷಕರ, ಅಧ್ಯಾಪಕರ, ಶಾಲಾ-ಕಾಲೇಜುಗಳ, ಒಟ್ಟಾರೆ ಸಮಾಜದ ಬೇಜವಾಬ್ದಾರಿ ನೆಡೆ ಎಂದೆನಿಸುತ್ತದೆ.

ನಾವು ದೊಡ್ಡವರಾಗುತ್ತಾ ಆಟ ಆಡುವುದನ್ನು ಕಡಿಮೆ ಮಾಡುತ್ತೇವೆ - ಮುಂದುವರಿದು ನಿಲ್ಲಿಸಿಯೇ ಬಿಡುತ್ತೇವೆ. ಇನ್ನು ಕೆಲವರಂತೂ, ಆಟವಾಡುವುದು ಮಕ್ಕಳು ಮಾತ್ರವೆಂದು ನಂಬಿ - 'ಆಟವಾಡಲು ನಾವೇನು ಮಕ್ಕಳೇ?!' ಎಂಬ ಉದ್ಗಾರ ತೆಗೆಯುತ್ತಾರೆ. ಇಂದು ದೊಡ್ಡವರಲ್ಲಿ ಕೂಡ ಕ್ರೀಡಾ ಮನೋಭಾವ ಕಡಿಮೆಯಾಗಿರುವುದು ಅನುಭವಕ್ಕೆ ಬರುತ್ತದೆ. ಅನಾವಶ್ಯಕ ಸ್ಪರ್ಧೆ, ಸೋಲಿನ ಸೇಡು, ಗೆಲುವಿಗಾಗಿ ಅಡ್ಡದಾರಿ ಇವೆಲ್ಲವೂ ಬದುಕೆಂಬ ಆಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮಾನಸಿಕ ಸ್ಥಿತಿಗಳಾಗಿವೆ. ಮೈದಾನದಲ್ಲಿ ಆಡುವುದರ ಜೊತೆಗೆ, ಬದುಕೆಂಬ ಆಟವನ್ನು "ಕ್ರೀಡಾ ಸ್ಫೂರ್ತಿ"ಯಿಂದಲೇ ಆಡೋಣ. ಗೆದ್ದರೆ ಖುಷಿ ಪಡೋಣ, ಸೋತರೆ ಇನ್ನೂ ಸಂತೋಷಿಸೋಣ, ಏಕೆಂದರೆ ಸೋಲಿನ ನಂತರದ ಗೆಲುವಿನ ರುಚಿ ಅನುಭವಿಸಿದವರಿಗಷ್ಟೇ ತಿಳಿದ ರಹಸ್ಯ...!!

ಆಶಯ: 30x40  ಕೊಠಡಿಯಲ್ಲಿ ಕಲಿತು, 30x40  ಮನೆಯಲ್ಲಿ ವಾಸಮಾಡಿ, ದೊಡ್ಡ ಕಂಪನಿ ಗಳ ಬೃಹದಾಕಾರದ ಕಟ್ಟಡಗಳಲ್ಲಿ, ಮೊದಲೇ ನಿಗದಿ ಪಡಿಸಿದ 3x4 ಜಾಗದಲ್ಲಿ ಕುಳಿತು ಕೆಲಸ ಮಾಡಿ, ಕೊನೆಯಲ್ಲಿ 3x4 ಗುಂಡಿಯಲ್ಲಿ ಮಲಗುವ ಮೊದಲು ದೊಡ್ಡ ಮೈದಾನಗಳಿಗೆ ಇಳಿದು ಆಟವಾಡೋಣವೇ? - ಕ್ರೀಡಾಮನೋಭಾವವನ್ನು ನಮ್ಮದಾಗಿಸಿಕೊಳ್ಳೋಣವೇ?

ನಿಮ್ಮವ,
ಹ.ನಾ.ಮಾಧವ ಭಟ್ 
ಪುಷ್ಯ-ಕೃಷ್ಣ-ತ್ರಯೋದಶಿ, ಶನಿವಾರ.
೦೨-೦೨-೨೦೧೯
ಬೆಂಗಳೂರು.


Friday, 25 January 2019

National Voter's Day


ರಾಷ್ಟ್ರೀಯ ಮತದಾರರ ದಿನ : ೨೫ನೇ ಜನವರಿ ೨೦೧೯

ಮೊದಲಿಗೆ "ಮತದಾನ" ಎನ್ನುವ ಶಬ್ದದ ಮೇಲೆಯೇ ನನ್ನ ಆಕ್ಷೇಪ...! ಮತ ಹಾಕುವುದು ಅಥವಾ ಮತ ಚಲಾಯಿಸುವುದನ್ನು 'ದಾನ' ಎನ್ನುವ ಅರ್ಥದಲ್ಲಿ ಕರೆಯುವುದೇಕೆ ಎಂದು ತಿಳಿಯುತ್ತಿಲ್ಲ. 'ದಾನ' ಎನ್ನುವ ಶಬ್ದ ಒಂದು ರೀತಿಯ ಇಚ್ಛಾಕ್ರಿಯೆ. ಅದು ಕಡ್ಡಾಯವಾಗಬೇಕಿಲ್ಲ. ಆದರೆ ಮತ ಚಲಾವಣೆ ಒಂದು ಇಚ್ಛಾಕ್ರಿಯೆಯ - ಅಸಡ್ಡೆಯ ಕಾರ್ಯಕ್ರಮವಾಗಬಾರದು. ಹಾಗಾಗಿ ನಾನು "ಮತದಾನ" ಎನ್ನುವುದಕ್ಕಿಂತ "ಮತ ಚಲಾವಣೆ" ಎಂದೇ ಹೇಳಬಯಸುತ್ತೇನೆ.

ಎಲ್ಲೋ ಓದಿದ ನೆನಪು - ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿಲ್ಲ, ಇಲ್ಲಿರುವುದು ಪ್ರಜಾಪ್ರಭುತ್ವದ ಅಣಕವಷ್ಟೇ. ಈಗಿನ ಸನ್ನಿವೇಶಗಳನ್ನು ನೋಡಿದಾಗ ಅದು ಹೌದೆನಿಸುತ್ತದೆ. ನಮ್ಮ ದೇಶದಲ್ಲಿ "ಮೂಲಭೂತ ಹಕ್ಕು"ಗಳಿಗೆ ಕೊಟ್ಟಿರುವಷ್ಟು ಸ್ಥಾನವನ್ನು  ನಾವು "ಮೂಲಭೂತ ಕರ್ತವ್ಯ"ಗಳಿಗೆ ಕೊಟ್ಟಿಲ್ಲ. ನಮ್ಮ ಪ್ರಜೆಗಳು 'ಕರ್ತವ್ಯ'ವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ನಮ್ಮ ನಾಯಕರಿಗೆ 'ಕರ್ತವ್ಯ' ಪಾಲಿಸುವುದು ಅಗತ್ಯ ಎಂದೇ ಅನಿಸುವುದಿಲ್ಲ. ಮತ ಚಲಾವಣೆ, ಸರ್ಕಾರ, ಆಢಳಿತ ವ್ಯವಸ್ಥೆ......ಇವೆಲ್ಲವುಗಳನ್ನು ಸಮಗ್ರವಾಗಿ "ರಾಜಕೀಯ" ಎಂಬ ಅಚ್ಚಿನೊಳಗೆ ಎರಕ ಹೊಯ್ಯಲಾಗಿದೆ. ಇನ್ನು ಜಾತಿ ಸಮೀಕರಣವನ್ನು ಅರ್ಥ ಮಾಡಿಕೊಂಡು ಸರ್ಕಾರ ರಚಿಸುವುದೇ  ರಾಜಕೀಯದ ಗುರಿಯಾಗಿದೆ.

ನಮ್ಮದು ೧ ದೇಶ, ೨೯ ರಾಜ್ಯಗಳು, ೭ ಕೇಂದ್ರಢಳಿತ ಪ್ರದೇಶಗಳು - ನಮಗೆ ೧೮೦೦ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ನೂರಾರು ಬಟ್ಟೆ ಅಂಗಡಿಗಳಿರುವ ಚಿಕ್ಕಪೇಟೆಗೆ ಹೋದಾಗಲೇ  ಯಾವ ಬಟ್ಟೆ ಅಂಗಡಿಗೆ ಹೋಗಬೇಕೆಂದು 'ಕನ್ಫ್ಯೂಸ್' ಆಗುವಾಗ, ೧೮೦೦ ಪಕ್ಷಗಳಿರುವಾಗ ಯಾವ ಪಕ್ಷಕ್ಕೆ ಮತ ಹಾಕಬೇಕೆಂದು 'ಕನ್ಫ್ಯೂಸ್' ಆಗುವುದು ಅತ್ಯಂತ ವಾಸ್ತವ....! ಆದ್ದರಿಂದಲೇ, ನಾವು "ಯಾರು ಹಿತವರು ನಮಗೆ ಇಲ್ಲಿರುವವರೊಳಗೆ" ಎಂದು ಒಮ್ಮೆ ಇಡೀ ಪಟ್ಟಿಯನ್ನು ನೋಡಿ ಕೊನೆಯಲ್ಲಿ ಒಂದು ಬಟನ್ ಒತ್ತುತ್ತೇವೆ..!

ಮೊದಲನೇ ಸಾರ್ವಜನಿಕ ಚುನಾವಣೆಯಿಂದ ಹಿಡಿದು ಕಳೆದ ಬಾರಿ ನೆಡೆದ ೧೬ನೇ ಚುನಾವಣೆಯಲ್ಲೂ ನೀರು ಕೊಡುವುದು, ಕರೆಂಟ್ ಕೊಡುವುದು, ರಸ್ತೆ ನಿರ್ಮಿಸುವುದು.....ಈ ಅಂಶಗಳೇ ಪ್ರಣಾಳಿಕೆಗಳ ಭಾಗವಾಗಿರುವುದು ನಮ್ಮ ಪ್ರಜೆಗಳು ತಮ್ಮ 'ಮತ ಚಲಾವಣೆ'ಎಂಬ ಅಸ್ತ್ರವನ್ನು ಸರಿಯಾಗಿ ಬಳಸದಿರುವುದಕ್ಕೆ ಸಾಕ್ಷಿ. ಇಂದಿನ 'ಬಿಸಿನೆಸ್ ಸ್ಕೂಲ್'ಗಳು "ಕಸ್ಟಮರ್ ಡಿಮ್ಯಾಂಡ್" ಎನ್ನುವ ಶಬ್ದವನ್ನು ಬಹಳವಾಗಿ ಬಳಸುತ್ತವೆ. ಬಿಗ್ ಬಜಾರ್ ನಲ್ಲಿ '೨೦% ರಿಯಾಯಿತಿ' ಎಂದು ತೂಗಿ ಹಾಕಿರುವ ವಸ್ತುವಿಗೆ, ಕ್ಯಾಶ್ ಕೌಂಟರ್ನಲ್ಲಿ ೨೦% ರಿಯಾಯಿತಿ ದೊರೆಯದೇ ಇದ್ದಲ್ಲಿ, ರಣ ಪರಾಕ್ರಮ ತೋರಿಸುವ ನಾವು, ಮೂಗಿಗೆ ತುಪ್ಪ ಸವರುವಂತಹ ಪ್ರಣಾಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ...! ಭಾರತ ೮೦ ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿದೆ. ನಮಗೆ ನಾವು ಬೇಕಾದ ಸರ್ಕಾರ ಆರಿಸುವ ಅವಕಾಶವೂ ಇದೆ. ಅನೇಕತೆಯಲ್ಲಿ ಏಕತೆ ಕಾಣಬಯಸುವ ನಮ್ಮ ದೇಶದಲ್ಲಿ - ಪಕ್ಷಗಳೂ ಅನೇಕ. ಇನ್ನು ಒಂದೇ ಪಕ್ಷದಲ್ಲಿ 'ಏಕತೆ'  ಇಲ್ಲದಿರುವಾಗ, ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿ, ಏಕತೆಯನ್ನು ಸಾಧಿಸುವುದು ಕಷ್ಟದ ಕೆಲಸ. ಹಾಗಾಗಿ, ಅಸಡ್ಡೆಯ, ಅಜಾಗರೂಕತೆಯ ನಿದ್ದೆಯಿಂದ ಭಾರತೀಯ ಮತದಾರ ಏಳಬೇಕು. ಹಳ್ಳಿಗಾಡಿನಲ್ಲಿ ಆಗುವಷ್ಟು ಮತ ಚಲಾವಣೆ ನಗರ ಪ್ರದೇಶಗಳಲ್ಲಿ ಆಗುವುದಿಲ್ಲ. ೫೦% ರಿಯಾಯಿತಿ ಎಂದು ಬೋರ್ಡ್ ನೇತು ಹಾಕಿದರೆ ಕಿಲೋಮೀಟರ್ ಉದ್ದ ಸರತಿಯಲ್ಲಿ ನಿಲ್ಲುವುದನ್ನು ಖುದ್ದು ನೋಡಿದ್ದೇನೆ. ಹೀಗಿರುವಾಗ, ನಗರವಾಸಿಗಳು ತಮ್ಮ ಹುಸಿ ಜಂಬವನ್ನು ಬದಿಗಿರಿಸಿ ಸರತಿಯಲ್ಲಿ ನಿಂತು ಮತ ಚಲಾಯಿಸಲೇ ಬೇಕು.

ಎಲ್ಲರ ಬಳಿಯೂ 'ನೋಟು' ತೆಗೆದುಕೊಂಡು ಕೊನೆಗೆ "NOTA" ಚಲಾಯಿಸುವ ಬದಲು, ಒಮ್ಮೆ ದೇಶದ ಭವಿಷ್ಯದ 'ನೋಟ'ವನ್ನು ಚಿಂತಿಸಿ ಮತ ಚಲಾಯಿಸಬೇಕು. ಬಾಯಿಗೆ 'ಬೆಣ್ಣೆ' - ಹೊಟ್ಟೆಗೆ 'ಎಣ್ಣೆ' ಕೊಟ್ಟು ಮತ ಕೇಳುವವರ ಮುಖಕ್ಕೆ 'ಸುಣ್ಣ' ಹಚ್ಚಬೇಕು. ಇನ್ನು 'ಬಟ್ಟೆ' ಕೊಟ್ಟು ಮತ ಕೇಳುವವರ 'ಹೊಟ್ಟೆ'ಯ ಮೇಲೆ ಹೊಡೆಯಬೇಕು. ಜಾತಿ ಮೇಲೆ ಮತ ಕೇಳುವವರಿಗೆ ಚಾಟಿ ಬೀಸಬೇಕು. ಒಟ್ಟಿನಲ್ಲಿ 'ಆಮಿಷ'ಕ್ಕೊಳಗಾಗದೇ, 'ಆಂಬಿಷನ್' ನೋಡಿ ಮತ ಚಲಾಯಿಸಬೇಕು. ಮತ ಚಲಾವಣೆ 'ದಾನ'ವಲ್ಲ, ಅದೊಂದು ಮೂಲಭೂತ 'ಕರ್ತವ್ಯ'ವೆಂದು ಮನಗಾಣಬೇಕು.



ನಿಮ್ಮವ,
ಹ.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ಪಂಚಮಿ, ೨೫-೦೧-೨೦೧೯
ಬೆಂಗಳೂರು.

SiddagangaShree

ಸಿಧ್ಧಗಂಗಾ ಶ್ರೀ: ಬದಿಕುವುದಲ್ಲ, ಬಾಳುವುದು ಹೇಗೆ ಎಂದು ತೋರಿಸಿದ ಮಹಾತ್ಮ
 "ಜಾತಸ್ಯ ಮರಣಂ ಧ್ರುವಂ" ಎನ್ನುತ್ತದೆ ಭಗವದ್ಗೀತೆ. 'ಹುಟ್ಟಿ'ಗೆ 'ಸಾವು' ಖಚಿತ. ಸಾವು ಬೇಡವೆಂದಾದರೆ, ಹುಟ್ಟೇ ಬೇಡವೆನ್ನಬೇಕು - ಇದು ವೇದಾಂತ. ಸಾವಿನ ನಂತರವೂಬದುಕಬಹುದಾದ್ದು - ಸಿಧ್ಧಗಂಗಾ ಶ್ರೀಗಳ ಜೀವನ.
ಹೌದು. ಕೆಲವರ ನಿಧನ, ನಮ್ಮನ್ನು ನಿಧಾನವಾಗಿ ಚಿಂತನೆಯತ್ತ ದೂಡುತ್ತದೆ. ಕೆಲವು ನಿಧನದ ಸುದ್ದಿಗಳು ಹೃದಯಾಂತರಾಳದಲ್ಲಿ ಏನೋ ತಳಮಳ ಸೃಷ್ಟಿಸುತ್ತವೆ. ಅದುಅವರ 'ವ್ಯಕ್ತಿತ್ವ'ದ ಮಹಿಮೆಯೇ ಸರಿ.
ಸಿಧ್ಧಗಂಗಾ ಶ್ರೀಗಳ ದರ್ಶನ ಭಾಗ್ಯ ನನಗೆ ದೊರೆತದ್ದು ೨೦೦೭ನೇ ಇಸವಿ ಸೆಪ್ಟೆಂಬರ್ ನಲ್ಲಿ. ನಾನು ಇಂಜನಿಯರಿಂಗ್ ಓದಲು ಅವರದೇ ಸಂಸ್ಥೆಯಾದ 'ಸಿಧ್ಧಗಂಗಾ ತಾಂತ್ರಿಕಮಹಾ ವಿದ್ಯಾಲಯ'ಕ್ಕೆ ಹೋದಾಗ, ತಮ್ಮ ಆಶೀರ್ವಚನದ ಮೂಲಕ ಅವರು ಸ್ವಾಗತಿಸಿದರು. ಮುಂದೆ ನಾನು ತುಮಕೂರಿನಲ್ಲಿ ಇದ್ದಾಗ ಶ್ರೀಗಳನ್ನು ಅನೇಕ ಬಾರಿನೋಡಿದ್ದೇನೆ, ಮಠಕ್ಕೂ ಅನೇಕ ಬಾರಿ ಹೋಗಿದ್ದೇನೆ. ಅವರ ಕರ್ಮಯೋಗದ ಫಲವನ್ನು ನಾವು ಶ್ರೀಮಠದಲ್ಲಿ ಕಾಣಬಹುದು. ಸಾವಿರಾರು ಮಕ್ಕಳಿಗೆ ನಿತ್ಯವೂ ತ್ರಿವಿಧದಾಸೋಹವೀವ ಪುಣ್ಯ ಕ್ಷೇತ್ರವದು. ಇಂತಹ ಒಂದು ಕಾಯಕ ಕುಠೀರವನ್ನು ಕಟ್ಟಿ ಬೆಳೆಸಿದವರು ಇದೆ ನೆಡೆದಾಡುವ ದೇವರೆಂದು ಪೂಜಿಸಲ್ಪಡುವ ಸಿಧ್ಧಗಂಗೆಯ ಶ್ರೀಗಳು. ಶಿಕ್ಷಣದ ಬಗೆಗಿನ ಅವರ ಕಾಳಜಿ ಅಪಾರ - ಅದರ ಫಲವೇ, ಮಠವು ನೆಡೆಸುತ್ತಿರುವ ಹತ್ತಾರು ಶಾಲಾ-ಕಾಲೇಜುಗಳು. ಸಂಸ್ಕೃತ-ವೇದ ಪಾಠಶಾಲೆಗಳಿಂದ ಹಿಡಿದು,ಇಂಜನಿಯರಿಂಗ್ ವರೆಗೆ, ಪ್ರಾಥಮಿಕ ಹಂತದಿಂದ ಹಿಡಿದು, ಸ್ನಾತಕೋತ್ತರ ಪದವಿಯ ವರೆಗೆ ಇದು ವ್ಯಾಪಿಸಿದೆ. ಹೀಗೆ, ನನಗೂ ಕೂಡ,  ಅವರ ಸಂಸ್ಥೆಯಲ್ಲಿ ಪದವಿ ಪಡೆದಬಗ್ಗೆ ಅತೀವ ಹೆಮ್ಮೆ ಇದೆ.
"ಸಿಧ್ಧಗಂಗಾ" ಎಂಬ ನಾಲ್ಕಕ್ಷರದ ಶಬ್ದವನ್ನು ನಾಲ್ಕೂ ದಿಕ್ಕುಗಳಲ್ಲಿ ಪಸರಿಸಿದ ಕೀರ್ತಿ ಶ್ರೀಗಳದ್ದು. ಅದನ್ನೇ, ಮಾಜಿ ಪ್ರಧಾನಿ ಅಟಲ್ ಜೀ ಯವರು "ಉತ್ತರ್ ಮೇ ಗಂಗಾ, ದಕ್ಷಿಣ್ ಮೇ ಸಿಧ್ಧಗಂಗಾ" ಎಂದದ್ದು.
ಎಲ್ಲರೂ ಬದುಕುತ್ತಾರೆ, ಸಾಯುವವರೆಗೂ ಬದುಕುತ್ತಾರೆ. ಆದರೆ, ಸಿಧ್ಧಗಂಗಾ ಶ್ರೀಗಳು ಕೇವಲ ಬದುಕದೇ, ಸಾರ್ಥಕ "ಬಾಳ್ವೆ" ನೆಡೆಸಿದರು. ಅವರ ಜೀವನಾದರ್ಶಗಳು, ನಮಗೆದಾರಿದೀಪವಾಗಬೇಕಿದೆ. "ಪರೋಪಕಾರಾರ್ಥಮಿದಂ ಶರೀರಂ" ಎಂಬ ಮಾತಿನ ಸಾಕಾರ ರೂಪ ಅವರು. ಮಕ್ಕಳಿಗಾಗಿ, ಮಠಕ್ಕಾಗಿ, ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ತಮ್ಮಜೀವನವನ್ನೇ ಮುಡುಪಾಗಿಟ್ಟ ಮಹಾತ್ಮ ಅವರು.
ಶ್ರೀಗಳ ಅಗಲಿಕೆ ಸಮಸ್ತ ನಾಡಿಗೆ ಸೂತಕ ಛಾಯೆಯನ್ನು ತರಿಸಿದೆ. ಅವರ ಆದರ್ಶಗಳನ್ನು ನೆನೆಸಿಕೊಂಡು ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಓಂ ಶಾಂತಿ.
ಕೊನೆಯ ಮಾತು: "ಭಾರತ ರತ್ನ" ಪ್ರಶಸ್ತಿ, ಸಿಧ್ಧಗಂಗಾ ಶ್ರೀಗಳ ಹೆಸರಿನ ಹಿಂದೆ ತನ್ನ ಸ್ಥಾನವನ್ನು ಪಡೆಯಲು ವಿಫಲವಾದದ್ದು, ಅದರ ದುರಾದೃಷ್ಟವೇ ಸರಿ - ಅಲ್ಲವೇ??.

ಹ.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ಪ್ರತಿಪತ್, ೨೨-೦೧-೨೦೧೯.
ಬೆಂಗಳೂರು.

Learnings from my daughter

ನನ್ನ ಆರು ತಿಂಗಳ ಮಗಳಿಂದ ನಾನು ಕಲಿತ ಆರು ಅಂಶಗಳು.

ನನ್ನ ಮಗಳು 'ವಿದಿತಾ' ಇಂದಿಗೆ ಆರು ತಿಂಗಳು ಪೂರೈಸಿದ್ದಾಳೆ....!! ಚಿಕ್ಕ ಮಕ್ಕಳೇ ಚೆಂದ. ಅವು ನಮ್ಮ ಜೊತೆಗಿದ್ದರೂ ಅವುಗಳದೇ ಲೋಕದಲ್ಲಿ ಇರುತ್ತವೆ. 'ಮಕ್ಕಳ ಲೋಕ' ನಾವು ಈಗ ಮರಳಿ ಹೋಗಲಾಗದ ಒಂದು ಲೋಕ. ಮಕ್ಕಳನ್ನು ಬೆಳೆಸುವುದು ಒಂದು ಜವಾಬ್ದಾರಿಯಾದರೂ, ಅವುಗಳ ಬೆಳವಣಿಗೆಯನ್ನು ಗಮನಿಸುವುದೇ ಒಂದು ಆನಂದ. ಮಕ್ಕಳು ದಿನದಿಂದ ದಿನಕ್ಕೆ ಹೊಸತನ್ನು ಕಲಿಯುತ್ತವೆ ಮತ್ತು ಬೆಳೆಯುತ್ತವೆ. ನನ್ನ ಮಗಳೂ ಬೆಳೆಯುತ್ತಿದ್ದಾಳೆ - ಈಗ ಆರು ತಿಂಗಳು ಪೂರೈಸಿದ್ದಾಳೆ...! ನಾವು ಅವಳಬೆಳವಣಿಗೆಯನ್ನು ಸಂತೋಷಿಸುತ್ತಿದ್ದೇವೆ. ಮಗಳಿಗೆ ಆರು ತಿಂಗಳು ತುಂಬಿದ ಈ ಸಂದರ್ಭದಲ್ಲಿ ನಾನು ಗಮನಿಸಿದ ಆರು ಅಂಶಗಳನ್ನು ಹಂಚಿಕೊಳ್ಳುತ್ತೇನೆ.
೧. ನಗು:- 'ಸಂತೋಷ' ಮಾನವನಿಗಾಗುವ ಒಂದು ಅನುಭವ - 'ನಗು' ಅದರ ಅಭಿವ್ಯಕ್ತಿ. ಮಕ್ಕಳಲ್ಲಿ ನಗು ಅತ್ಯಂತ ಸಹಜವಾಗಿರುತ್ತದೆ. ದೊಡ್ಡವರಲ್ಲಿ ನಗು ಯಾವಾಗಲು'ಸಹಜ' ಎಂದೆನಿಸುವುದಿಲ್ಲ. ನಾವು ಹಲವು ಬಾರಿ ನಗುವನ್ನು ಹಿಡಿದಿಟ್ಟುಕೊಳ್ಳುತ್ತೇವೆ ಅಥವಾ ಸುಮ್ಮನೆ ಒಂದು 'ಸ್ಮೈಲ್' ಕೊಡುತ್ತೇವೆ. ದೊಡ್ಡವರ ನಗು ಅವರಿಗಾದಅನುಭವವಾಗಿರದೆ ಎದುರು ನಿಂತಿರುವ ವ್ಯಕ್ತಿಗೆ ಕೊಡುವ ಪ್ರತಿಕ್ರಿಯೆಯಾಗಿರುವ ಸಂದರ್ಭವೇ ಹೆಚ್ಚು.
 ೨. ಅಳು:- 'ಅಳು' ಕೂಡ ಒಂದು ಅಭಿವ್ಯಕ್ತಿ. ಮಕ್ಕಳು ಅಳುವನ್ನು ಒಂದು ಸಂಪರ್ಕ ಸಾಧನವನ್ನಾಗಿ ಬಳಸುತ್ತವೆ. ಹಾಲು ಬೇಕಾದರೂ ಅಳುತ್ತವೆ, ನಿದ್ದೆ ಬಂದರೂ ಅಳುತ್ತವೆ, ಹೆದರಿಕೆಯಾದರೂ ಅಳುತ್ತವೆ. ಆ ಅಳುವಿನ ಮರ್ಮವನ್ನು ಅರಿಯಬೇಕಾದ್ದು ಪೋಷಕರ ಕರ್ತವ್ಯ..! ಇಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬಹುದು. ಮಕ್ಕಳುಜೋರಾಗಿ ನಗುವುದಿಲ್ಲ, ಆದರೆ ಜೋರಾಗಿ ಅಳುತ್ತವೆ. ಇದು ಮನುಷ್ಯನ ಸಹಜ ಸ್ವಭಾವವೆನಿಸುತ್ತದೆ - ಮನುಷ್ಯ ತನ್ನ ಸಂತೋಷಕ್ಕಿಂತ ದುಖ್ಖದ 'ವ್ಯಾಖ್ಯಾನ' ಮಾಡುವುದೇಹೆಚ್ಚು. ...! ಅಲ್ಲವೇ?!
 ೩. ನಿದ್ದೆ:- ನಿದ್ದೆ ಮಾನವನ ದೇಹದ ಆವಶ್ಯಕತೆ. ಹಾಗಾಗಿ ಅವಶ್ಯವಿರುವಷ್ಟೇ ನಿದ್ದೆ ಮಾಡಬೇಕು. ಬೇರೆ ಏನೂ ಕೆಲಸವಿಲ್ಲದ ಮಕ್ಕಳು ಹೆಚ್ಚು ನಿದ್ದೆ ಮಾಡಿದರೂ ಕೂಡ, ನಿದ್ದೆ ಬಾರದೇ ಇದ್ದಾಗ ಹಾಸಿಗೆಯಲ್ಲಿ ಇರಲು ಇಷ್ಟಪಡುವುದಿಲ್ಲ. ನಿದ್ದೆ ಬಾರದೆ ಇದ್ದಾಗ - ಹಾಸಿಗೆಯಲ್ಲೇ ನಗುತ್ತವೆ, ಅಳುತ್ತವೆ, ಆಟವಾಡುತ್ತವೆ, ಆದರೆ ದೊಡ್ಡವರ ಹಾಗೆನಿದ್ದೆಯ 'ನಾಟಕ'ವಾಡುವುದಿಲ್ಲ...!
 ೪. ವಸ್ತುಗಳ ಮೌಲ್ಯ:- ವಸ್ತುಗಳ 'ಮೌಲ್ಯ'ವನ್ನು ಅವುಗಳ ದುಡ್ಡಿನ 'ಬೆಲೆ'ಯಿಂದ ಅಳೆಯುವ ಸ್ವಭಾವ ದೊಡ್ಡವರದು. ಮಕ್ಕಳು ಹಾಗಲ್ಲ, ಅವು ಆ ವಸ್ತುತನಗೆಷ್ಟರಮಟ್ಟಿಗೆ ಪ್ರಯೋಜನವೆಂದು ನೋಡುತ್ತವೆ. ಹತ್ತು ರೂಪಾಯಿಯ ಆಟದ ಸಾಮಾನು ಸಾವಿರ ರೂಪಾಯಿಯ ಆಟದ ಸಾಮನಿಗಿಂತ ಹೆಚ್ಚು ಹಿಡಿಸಬಹುದು.
 ೫. ಗ್ರಹಣಶೀಲತೆ:- ಮಕ್ಕಳು ನಿತ್ಯವೂ ಬೆಳೆಯುತ್ತವೆ ಏಕೆಂದರೆ ಅವು ಹೊಸತನ್ನು ಗಮನಿಸುತ್ತವೆ ಮತ್ತು ಗ್ರಹಿಸುತ್ತವೆ. ನಾವು ದೊಡ್ಡವರು - ಅನೇಕ ಸಂಗತಿಗಳನ್ನುನೋಡುತ್ತೇವೆ, ಆದರೆ ಗ್ರಹಿಸುವುದಿಲ್ಲ. ಹಾಗಾಗಿಯೇ ದೊಡ್ಡವರ ಬೆಳವಣಿಗೆ ಅನೇಕರಲ್ಲಿ 'ವಯಸ್ಸಿನ' ಬೆಳವಣಿಗೆಗಷ್ಟೇ ಸೀಮಿತ...! 
೬. ಹಸಿವಾದರಷ್ಟೇ ಆಹಾರ:- ಮಕ್ಕಳು ತಮಗೆ ಹಸಿವಾದರಷ್ಟೇ ಹಾಲು ಕುಡಿಯುತ್ತವೆ. ಹಸಿವಿಲ್ಲವಾದರೆ ಸುತಾರಾಂ ಮುಟ್ಟುವುದಿಲ್ಲ. ಆದರೆ ದೊಡ್ಡವರಿಗೆ ಆಹಾರಸೇವಿಸಲು ಹಸಿವೇ ಆಗಬೇಕೆಂದಿಲ್ಲ..! ಅನೇಕ ಬಾರಿ ಸ್ನೇಹಿತರು, ಸಹೋದ್ಯೋಗಿಗಳು ಕರೆದರೆಂದು ಹೋಟೆಲ್ಲಿಗೆ ಹೋಗಿ ಗಡದ್ದಾಗಿ ತಿನ್ನುತ್ತೇವೆ. ಊಟದಸಮಯವಾಯಿತೆಂದರೆ ಊಟದ ಶಾಸ್ತ್ರ ಮುಗಿಸಿಬಿಡುತ್ತೇವೆ..! ನಮ್ಮ ನಿತ್ಯದ ಊಟದ ಸಮಯದಲ್ಲಿ 'ಮೀಟಿಂಗ್' ಇದೆಯಾದರೆ ಒಂದು ಘಂಟೆ ಮೊದಲೇ ಊಟಮುಗಿಸುತ್ತೇವೆ..! ಒಟ್ಟಿನಲ್ಲಿ ಊಟ ಮಾಡುತ್ತೇವೆ...!!
 ಮುಗಿಸುವ ಮುನ್ನ: ನಾವು ಕೂಡ ಮಗುವಾಗಿದ್ದಾಗ 'ಸಹಜ ಧರ್ಮ'ವನ್ನು ಪಾಲಿಸುತ್ತಿದ್ದೆವು. ದೊಡ್ಡವರಾಗುತ್ತಾ 'ಅಸಹಜತೆ' ಕಡೆಗೆ ಹೋಗುತ್ತೇವೆ. ಅಥವಾ ಅಸಹಜತೆ ಕಡೆಗೆಹೋಗುವುದನ್ನೇ 'ದೊಡ್ಡವರಾಗುವುದು' ಎನ್ನುತ್ತೇವೆ. ಒಟ್ಟಿನಲ್ಲಿ ಸಹಜ ಜೀವನ ಮಕ್ಕಳಿಂದ ಕಲಿಯಬೇಕಾದ ಪಾಠ. ಪುನಃ ಮಗುವಾಗಿ ಮಕ್ಕಳ ಲೋಕಕ್ಕೆ ಹೋಗಲುಆಗದಿದ್ದರೂ, ಸಹಜತೆಯ ಕಡೆಗೆ ಹೋಗಲು ಪ್ರಯತ್ನಿಸಬೇಕಾಗಿದೆ.
 ಹ.ನಾ.ಮಾಧವ ಭಟ್
ಪುಷ್ಯ-ಶುಕ್ಲ-ಏಕಾದಶೀ, ಗುರುವಾರ.
೧೭-೦೧-೨೦೧೯.