ಸಿಧ್ಧಗಂಗಾ ಶ್ರೀ: ಬದಿಕುವುದಲ್ಲ, ಬಾಳುವುದು ಹೇಗೆ ಎಂದು ತೋರಿಸಿದ ಮಹಾತ್ಮ
"ಜಾತಸ್ಯ ಮರಣಂ ಧ್ರುವಂ" ಎನ್ನುತ್ತದೆ ಭಗವದ್ಗೀತೆ. 'ಹುಟ್ಟಿ'ಗೆ 'ಸಾವು' ಖಚಿತ. ಸಾವು ಬೇಡವೆಂದಾದರೆ, ಹುಟ್ಟೇ ಬೇಡವೆನ್ನಬೇಕು - ಇದು ವೇದಾಂತ. ಸಾವಿನ ನಂತರವೂಬದುಕಬಹುದಾದ್ದು - ಸಿಧ್ಧಗಂಗಾ ಶ್ರೀಗಳ ಜೀವನ.
ಹೌದು. ಕೆಲವರ ನಿಧನ, ನಮ್ಮನ್ನು ನಿಧಾನವಾಗಿ ಚಿಂತನೆಯತ್ತ ದೂಡುತ್ತದೆ. ಕೆಲವು ನಿಧನದ ಸುದ್ದಿಗಳು ಹೃದಯಾಂತರಾಳದಲ್ಲಿ ಏನೋ ತಳಮಳ ಸೃಷ್ಟಿಸುತ್ತವೆ. ಅದುಅವರ 'ವ್ಯಕ್ತಿತ್ವ'ದ ಮಹಿಮೆಯೇ ಸರಿ.
ಸಿಧ್ಧಗಂಗಾ ಶ್ರೀಗಳ ದರ್ಶನ ಭಾಗ್ಯ ನನಗೆ ದೊರೆತದ್ದು ೨೦೦೭ನೇ ಇಸವಿ ಸೆಪ್ಟೆಂಬರ್ ನಲ್ಲಿ. ನಾನು ಇಂಜನಿಯರಿಂಗ್ ಓದಲು ಅವರದೇ ಸಂಸ್ಥೆಯಾದ 'ಸಿಧ್ಧಗಂಗಾ ತಾಂತ್ರಿಕಮಹಾ ವಿದ್ಯಾಲಯ'ಕ್ಕೆ ಹೋದಾಗ, ತಮ್ಮ ಆಶೀರ್ವಚನದ ಮೂಲಕ ಅವರು ಸ್ವಾಗತಿಸಿದರು. ಮುಂದೆ ನಾನು ತುಮಕೂರಿನಲ್ಲಿ ಇದ್ದಾಗ ಶ್ರೀಗಳನ್ನು ಅನೇಕ ಬಾರಿನೋಡಿದ್ದೇನೆ, ಮಠಕ್ಕೂ ಅನೇಕ ಬಾರಿ ಹೋಗಿದ್ದೇನೆ. ಅವರ ಕರ್ಮಯೋಗದ ಫಲವನ್ನು ನಾವು ಶ್ರೀಮಠದಲ್ಲಿ ಕಾಣಬಹುದು. ಸಾವಿರಾರು ಮಕ್ಕಳಿಗೆ ನಿತ್ಯವೂ ತ್ರಿವಿಧದಾಸೋಹವೀವ ಪುಣ್ಯ ಕ್ಷೇತ್ರವದು. ಇಂತಹ ಒಂದು ಕಾಯಕ ಕುಠೀರವನ್ನು ಕಟ್ಟಿ ಬೆಳೆಸಿದವರು ಇದೆ ನೆಡೆದಾಡುವ ದೇವರೆಂದು ಪೂಜಿಸಲ್ಪಡುವ ಸಿಧ್ಧಗಂಗೆಯ ಶ್ರೀಗಳು. ಶಿಕ್ಷಣದ ಬಗೆಗಿನ ಅವರ ಕಾಳಜಿ ಅಪಾರ - ಅದರ ಫಲವೇ, ಮಠವು ನೆಡೆಸುತ್ತಿರುವ ಹತ್ತಾರು ಶಾಲಾ-ಕಾಲೇಜುಗಳು. ಸಂಸ್ಕೃತ-ವೇದ ಪಾಠಶಾಲೆಗಳಿಂದ ಹಿಡಿದು,ಇಂಜನಿಯರಿಂಗ್ ವರೆಗೆ, ಪ್ರಾಥಮಿಕ ಹಂತದಿಂದ ಹಿಡಿದು, ಸ್ನಾತಕೋತ್ತರ ಪದವಿಯ ವರೆಗೆ ಇದು ವ್ಯಾಪಿಸಿದೆ. ಹೀಗೆ, ನನಗೂ ಕೂಡ, ಅವರ ಸಂಸ್ಥೆಯಲ್ಲಿ ಪದವಿ ಪಡೆದಬಗ್ಗೆ ಅತೀವ ಹೆಮ್ಮೆ ಇದೆ.
"ಸಿಧ್ಧಗಂಗಾ" ಎಂಬ ನಾಲ್ಕಕ್ಷರದ ಶಬ್ದವನ್ನು ನಾಲ್ಕೂ ದಿಕ್ಕುಗಳಲ್ಲಿ ಪಸರಿಸಿದ ಕೀರ್ತಿ ಶ್ರೀಗಳದ್ದು. ಅದನ್ನೇ, ಮಾಜಿ ಪ್ರಧಾನಿ ಅಟಲ್ ಜೀ ಯವರು "ಉತ್ತರ್ ಮೇ ಗಂಗಾ, ದಕ್ಷಿಣ್ ಮೇ ಸಿಧ್ಧಗಂಗಾ" ಎಂದದ್ದು.
ಎಲ್ಲರೂ ಬದುಕುತ್ತಾರೆ, ಸಾಯುವವರೆಗೂ ಬದುಕುತ್ತಾರೆ. ಆದರೆ, ಸಿಧ್ಧಗಂಗಾ ಶ್ರೀಗಳು ಕೇವಲ ಬದುಕದೇ, ಸಾರ್ಥಕ "ಬಾಳ್ವೆ" ನೆಡೆಸಿದರು. ಅವರ ಜೀವನಾದರ್ಶಗಳು, ನಮಗೆದಾರಿದೀಪವಾಗಬೇಕಿದೆ. "ಪರೋಪಕಾರಾರ್ಥಮಿದಂ ಶರೀರಂ" ಎಂಬ ಮಾತಿನ ಸಾಕಾರ ರೂಪ ಅವರು. ಮಕ್ಕಳಿಗಾಗಿ, ಮಠಕ್ಕಾಗಿ, ಸಮಾಜಕ್ಕಾಗಿ, ರಾಷ್ಟ್ರಕ್ಕಾಗಿ ತಮ್ಮಜೀವನವನ್ನೇ ಮುಡುಪಾಗಿಟ್ಟ ಮಹಾತ್ಮ ಅವರು.
ಶ್ರೀಗಳ ಅಗಲಿಕೆ ಸಮಸ್ತ ನಾಡಿಗೆ ಸೂತಕ ಛಾಯೆಯನ್ನು ತರಿಸಿದೆ. ಅವರ ಆದರ್ಶಗಳನ್ನು ನೆನೆಸಿಕೊಂಡು ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ. ಓಂ ಶಾಂತಿ.
ಕೊನೆಯ ಮಾತು: "ಭಾರತ ರತ್ನ" ಪ್ರಶಸ್ತಿ, ಸಿಧ್ಧಗಂಗಾ ಶ್ರೀಗಳ ಹೆಸರಿನ ಹಿಂದೆ ತನ್ನ ಸ್ಥಾನವನ್ನು ಪಡೆಯಲು ವಿಫಲವಾದದ್ದು, ಅದರ ದುರಾದೃಷ್ಟವೇ ಸರಿ - ಅಲ್ಲವೇ??.
ಹ.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ಪ್ರತಿಪತ್, ೨೨-೦೧-೨೦೧೯.
ಬೆಂಗಳೂರು.
No comments:
Post a Comment