Thursday, 12 September 2019

ಜೋಗ ಜಲಪಾತ

ಜೋಗದ ಸಿರಿ 


ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ|
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ ||
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ |
ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ ||
ಡಾ. ರಾಜ್ ಹಾಡಿದ ಈ ಹಾಡನ್ನು ಕೇಳುತ್ತಾ ನನಗೆ ಜೋಗ ನೋಡಬೇಕೆನಿಸಿತು. ಹಾಗೆಯೇ ಮೊನ್ನೆ ಜೋಗ ಜಲಪಾತವನ್ನು ನೋಡಲು ಹೋಗಿದ್ದೆ. ಧುಮ್ಮಿಕ್ಕುವ ಈ ಜಲಪಾತವನ್ನು ನೋಡಿ ನನಗನಿಸಿದ್ದು :
ಓ ಜೋಗ!
ನಾನೊಬ್ಬ ಪ್ರವಾಸಿಗ.
ನಾನೀಗ ನಿನ್ನ ನೋಡುಗ.
ಹೇಳತೀರದು ನಿನ್ನ ಸೊಬಗ!!

ಪ್ರಕೃತಿಯ ಮಡಿಲು ತಾಯಿಯ ಮಡಿಲಿನಷ್ಟೇ ಸಂತೋಷವನ್ನುಂಟು ಮಾಡುತ್ತದೆ. ಅದು ವರ್ಣಿಸಲು ಅಸಾಧ್ಯ - ಅದನ್ನು ಅನುಭವಿಸಿಯೇ ತಿಳಿಯಬೇಕು. ಹರಿಯುವ ನದಿ, ಧುಮ್ಮಿಕ್ಕುವ ಜಲಪಾತ, ಉದಯಿಸುವ ಸೂರ್ಯ, ಸಮುದ್ರ ತೀರದ ಸೂರ್ಯಾಸ್ತ, ಪರ್ವತ-ಶಿಖರ - ಅದರ ಮೇಲಣ ಮಂಜು - ಹೀಗೆ ಪ್ರಕೃತಿ ಅನೇಕ ವಿಭಿನ್ನ- ವಿಸ್ಮಯ-ವಿಚಿತ್ರ ಸಂತೋಷದ ಸ್ರೋತಗಳನ್ನು ಮಾನವನಿಗೆ ನೀಡಿದೆ. ಹೀಗಾಗಿ ನಾವು ಈ ಪ್ರಕೃತಿ ದೇವಿಗೆ ಆಭಾರಿಯಾಗಲೇ ಬೇಕು.

ಸಹ್ಯಾದ್ರಿ ಶ್ರೇಣಿ ಇಂತಹ ಅದೆಷ್ಟೋ ಕೌತುಕ ಗಳನ್ನು ತನ್ನ ಸೆರಗಿನಲ್ಲಿ ಇರಿಸಿಕೊಂಡಿದೆ. ಶಿವಮೊಗ್ಗೆಯ ಜೋಗ ಜಲಪಾತ ಅದರಲ್ಲಿ ಒಂದಷ್ಟೆ. ಜೋಗದ ಭೋರ್ಗರೆಯುವ ಜಲಪಾತ ನೋಡಿದಾಗ ನಾವು ನಮ್ಮನ್ನು ಮರತೇ ಬಿಡುತ್ತೇವೆ. ಅಂತಹ ರೋಮಾಂಚಕತೆ ಅಲ್ಲಿದೆ. ಮಳೆಗಾಲದಲ್ಲಿ ಶರಾವತಿ ಮಾಡುವ ರೌದ್ರ ನರ್ತನವದು. ಈ ನೈಜ ನರ್ತನವನ್ನು ನೋಡಲು ಬರುವ ಪ್ರವಾಸಿಗರೆಷ್ಟೋ! ಎಲ್ಲರ ಕಣ್ಮನ ತಣಿಸುತ್ತದೆ ಈ ಜಲಧಾರೆ. ಇದನ್ನು ನೋಡಿಯೇ ಅಲ್ಲವೇ ಹೇಳಿದ್ದು "ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ" ಎಂದು..!

ನದಿಯ ರೂಪದಲ್ಲಿ ಶಾಂತವಾಗಿ ಹರಿಯುವ ಶರಾವತಿಯ ನೀರು ೮೩೦ ಅಡಿ ಎತ್ತರದಿಂದ ಬೀಳುವಾಗ ರೂಪುಗೊಳ್ಳುವುದೇ ಈ ಜಗತ್ಪ್ರಸಿದ್ಧ ಜಲಪಾತ. ಇಂತಹ ಜಲಧಾರೆಯನ್ನು ಮಂಜಿನ ಮೋಡ ತನ್ನ ಸೆರಗಿನಿಂದ ಮುಚ್ಚುತ್ತದೆ. ಅತ್ತ ಗಾಳಿ ಅದನ್ನು ಸರಿಸಿ ನಮಗೆ ತೋರಿಸುತ್ತದೆ. ಇದರ ಮಧ್ಯೆ ಮಳೆರಾಯ ಮೇಲಿನಿಂದ ಇಣುಕುವ ಪ್ರಯತ್ನ ಮಾಡುತ್ತಾನೆ. ಹೀಗೆ ನೀರು, ಮೋಡ, ಗಾಳಿ, ಮಳೆಗಳ ಆಟವನ್ನು ನೋಡಿದಾಗ ಹೃದಯ ಅರಳುತ್ತದೆ, ಮನಸ್ಸು ಹಗುರ ವಾಗುತ್ತದೆ.

ಸದಾ ನಿಮ್ಮವ,
ಹ. ನಾ. ಮಾಧವ ಭಟ್
ಭಾದ್ರಪದ-ಶುಕ್ಲ-ಚತುರ್ದಶೀ
೨೦: ಸೆಪ್ಟೆಂಬರ್ : ೨೦೧೯, ಗುರುವಾರ.
ಸಾಗರ.

Thursday, 15 August 2019

ಹೂವು ಮತ್ತು ನಾವು

ಹೂವು ಮತ್ತು ನಾವು 

ಮೊನ್ನೆ ಹೀಗೆ ಸುಮ್ಮನೆ ಲಾಲ್ ಬಾಗ್ ಗೆ ಹೋಗಿದ್ದೆ. ಮೈಸೂರಿನ ಒಡೆಯರ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಅರಳಿದ ಹೂವುಗಳಿಂದ ಅರಮನೆ ನಿರ್ಮಿಸುವ ಪ್ರಯತ್ನ ಅಲ್ಲಿತ್ತು. ಲಕ್ಷ - ಲಕ್ಷ ಹೂವುಗಳನ್ನು ಸೇರಿಸಿ ನಿರ್ಮಿಸಿದ ಆ 'ಪುಷ್ಪಜಾತ' ಕಲಾಕೃತಿಗಳು ಮನಸ್ಸನ್ನೇ ತೇಲುವಂತೆ ಮಾಡಿತು. ಹೂವಿಗಿರುವ ಶಕ್ತಿ ಅದು. ಹೂವು, ಕಾಣದ ಮನಸ್ಸನ್ನು ಸೆರೆಹಿಡಿದು ಕೊನೆಗೆ ನಮ್ಮನ್ನೇ ಮಾಯೆಗೊಳಪಡಿಸುತ್ತದೆ. ಲಾಲ್ ಬಾಗ್ ನ ಆ ಪುಷ್ಪರಾಶಿಯು  ಹೂವಿನ ಬಗ್ಗೆ, ಹೂವಿನ ಸಾಮರ್ಥ್ಯದ ಬಗ್ಗೆ, ಹೂವು ನಮ್ಮ ಜೀವನದಲ್ಲಿ ಹಾಸುಹೊಕ್ಕಿರುವುದರ ಬಗ್ಗೆ ಚಿಂತನೆ ನೆಡೆಸುವಂತೆ ಪ್ರೇರೇಪಿಸಿತು. ಕಣ್ಣಿನಿಂದ ಸೆರೆಹಿಡಿಯಬೇಕಾದ ಹೂವಿನ ಸೌಂದರ್ಯವನ್ನು ಲೇಖನಿಯಿಂದ ಸೆರೆಹಿಡಿಯುವ ಒಂದು ಪ್ರಯತ್ನ ಇದು.
ಪ್ರಕೃತಿಯ ಸೊಬಗನ್ನು ಇಮ್ಮಡಿಗೊಳಿಸುವ ಅನೇಕ ಸಂಗತಿಗಳಲ್ಲಿ 'ಹೂವು' ಒಂದು. ಹೂವು ಸೌಂದರ್ಯದ ಸಾಕಾರ ರೂಪ. ಹೂವು ತಾನೂ ಅರಳಿ ನೋಡುಗರ ಕಣ್ಣನ್ನೂ ಅರಳಿಸುವ ಸಾಮರ್ಥ್ಯ ಹೊಂದಿದೆ. ಪ್ರತಿನಿತ್ಯ ಸೂರ್ಯನೊಂದಿಗೇ ಅರಳಿ ಸೂರ್ಯನೊಂದಿಗೇ ಅಳಿಯುವ ಈ ಹೂವುಗಳು ಪ್ರಕೃತಿಯ ವಿಸ್ಮಯಗಳಲ್ಲೊಂದಾಗಿವೆ.
ಬ್ರಹ್ಮಕಮಲ & ನೀಲ ಕುರಿಂಜಿ
ಹೂವುಗಳೂ ಅನೇಕ ಅವುಗಳ ಪ್ರಾಕಾರಗಳೂ ಅನೇಕ. ಗಾತ್ರದಲ್ಲಿ ಚಿಕ್ಕದಾದ ಮಲ್ಲಿಗೆ, ದೊಡ್ಡದಾದ ದಾಸವಾಳ, ರಾತ್ರಿ ಮಾತ್ರ ಅರಳುವ ಬ್ರಹ್ಮಕಮಲ, ೧೨ ವರ್ಷಗಳಿಗೊಮ್ಮೆ ಮಾತ್ರ ಅರಳುವ ನೀಲ ಕುರಿಂಜಿ, ಪರಿಮಳ ಸೂಸುವ ಸಂಪಿಗೆ, ಪರಿಮಳವೇ ಇಲ್ಲದ ಜಿನಿಯಾ, ಸೂರ್ಯನೊಂದಿಗೇ ಸಂಚರಿಸುವ ಸೂರ್ಯಕಾಂತಿ - ಹೀಗೆ ಹೂವುಗಳ ಲೋಕ ಅದ್ಭುತವೇ ಸರಿ. ಹೂವು ಹೇಗಿದ್ದರೂ ಎಲ್ಲಿದ್ದರೂ ಮನುಷ್ಯನ ಮನಸ್ಸನ್ನು ಮುದಗೊಳಿಸುವ ಸಾಮರ್ಥ್ಯ ಹೊಂದಿದೆ.

ಹೀಗೆ ಸೌಂದರ್ಯದ ಸಾಕಾರವಾಗಿರುವ ಹೂವುಗಳು ಮನಸ್ಸನ್ನು ವಿಕಸಿತಗೊಳಿಸುವುದರ ಜೊತೆಗೆ ಜೀವನ ಸಂದೇಶ ಸಾರುವ ಗುರುವೂ ಆಗಿವೆ. ಗುಲಾಬಿಯಂಬ ಒಂದು ಹೂವನ್ನು ಉದಾಹರಿಸಿ ಡಿ.ವಿ.ಜಿ. ಹೀಗೆ ಹೇಳುತ್ತಾರೆ.
ಹೂವ ತಳೆದ ಗುಲಾಬಿಯಿಂದ ಮನಕಹುದೇನು? |
ನೋವೋ? ಸಂತಸವೋ? ನೋಡಾಮುಳ್ಳು ಬಾಳ್ಗೆ ||
ಹೂವೆ ದಿವ್ಯಕೀರೀಟವದುವೆ ಕಾಲಕಟಾಕ್ಷ |
ಜೀವನದ ತಿರುಳಷ್ಟೆ - ಮಂಕುತಿಮ್ಮ ||
ಅಂದರೆ - ಹೂವನ್ನು ಹೊಂದಿರುವ ಗುಲಾಬಿ ಗಿಡವನ್ನು ನೋಡಿದಾಗ ನಮಗೆ ಏನನಿಸುತ್ತದೆ? ನೋವೋ? ಅಥವಾ ಸಂತೋಷವೋ? ಮುಳ್ಳುಗಳೇ ತುಂಬಿರುವ ಗಿಡಕ್ಕೆ ಹೂವೆ ಕಿರೀಟ! ಹಾಗೆ ನಾವು ಕಷ್ಟಗಳೆಂಬ ಮುಳ್ಳುಗಳನ್ನು ಸಹಿಸಿ ಜೀವನ ನೆಡೆಸಿದರೆ ಮುಂದೆ ಸುಖವೆಂಬ ಗುಲಾಬಿ ಹೂವು ದೊರಕುತ್ತದೆ - ಇದುವೇ ಗುಲಾಬಿ ನಮಗೆ ಸಾದರಪಡಿಸುವ ಜೀವನ ಸ್ವಾರಸ್ಯವಾಗಿದೆ.


ನಮ್ಮಲ್ಲಿ ಹೂವಿನಿಂದ ಹೊರತಾದ ಜೀವನವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಹುಟ್ಟಿನಿಂದ ಸಾಯುವವರೆಗೂ ಹೂವು ಬೇಕೇ ಬೇಕು. ಪೂಜೆ-ಪುನಸ್ಕಾರಗಳು ಹೂವುಗಳಿಲ್ಲದೆ ಅಪೂರ್ಣ. ಗೌರವ ಸಮರ್ಪಣೆಗೂ ಇದೇ ಹೂವುಗಳು ಬೇಕು. ಪ್ರೇಮಿಗಳಿಗೆ ಹೂವು ಪ್ರೇಮ ನಿವೇದನೆಯ ಮಾಧ್ಯಮ. ನಾವು ಮೊದಲರಾತ್ರಿಗೂ ಹೂವು ಉಪಯೋಗಿಸುತ್ತೇವೆ ಹಾಗೆ ಅಂತಿಮ ಯಾತ್ರೆಗೂ ಹೂವು ಬಳಸುತ್ತೇವೆ. ಹೂವು ನಮ್ಮಲ್ಲನೇಕರಿಗೆ ಜೀವನವನ್ನು ಕಟ್ಟಿಕೊಟ್ಟಿದೆ. ಪುಷ್ಪಕೃಷಿ ಇವತ್ತಿನ ಲಾಭದಾಯಕ ಕೃಷಿಗಳಲ್ಲೊಂದು. ಹೇಗೆ ಹೂವನ್ನು ಅನೇಕರು ಅನೇಕ ಕಾರಣಗಳಿಗಾಗಿ ಅಪ್ಪಿಕೊಳ್ಳುತ್ತಾರೆ.
ಅವರವರ ಭಾವಕ್ಕೆ - ಅವರವರ ಭಕುತಿಗೆ !
ಡಿ.ವಿ.ಜಿ.ಯವರು ಇನ್ನೊಂದು ಕಗ್ಗದಲ್ಲಿ ಹೀಗೆ ಹೇಳುತ್ತಾರೆ.
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |
ಮಡದಿ ಮುಡಿದಿರುವ ಹೂ ಯುವಕನಿಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ  |
ಬಿಡಿಗಾಸು ಹೂವಳಿಗೆ - ಮಂಕುತಿಮ್ಮ ||
ತಾತ್ಪರ್ಯ - ಪ್ರಕೃತಿಯನ್ನು ಪ್ರೀತಿಸುವವನು ಹೂವನ್ನು ಗಿಡದಲ್ಲಿ ನೋಡಿ ಸಂತೋಷಿಸುತ್ತಾನೆ, ಅದೇ ಹೊಸತಾಗಿ ಮದುವೆಯಾದವ ಹೂವನ್ನು ತನ್ನ ಹೊಂಡತಿಯ ಜಡೆಯಲ್ಲಿ ನೋಡಿ ಖುಷಿಪಡುತ್ತಾನೆ. ಹಾಗೆ, ದೈವಭಕ್ತನು ದೇವಸ್ಥಾನದಲ್ಲಿ ಸಿಗುವ ಹೂವನ್ನು ಪ್ರಸಾದವೆಂದು ಪಡೆದು ಧನ್ಯನಾಗುತ್ತಾನೆ. ಆದರೆ, ಅದೇ ಹೂವನ್ನು ಮಾರುವ ಹೂವಾಡಗಿತ್ತಿಗೆ ಹೂವು ಒಂದು ಬಿಡಿಗಾಸು ಮಾತ್ರ - ಅದೇ ಅವಳ ಜೀವನಾಧಾರ. 

At Keukenhof
ಹೂ ಗಿಡಗಳನ್ನು ಪ್ರೀತಿಸೋಣ, ಬೆಳೆಸೋಣ - ಪ್ರಕೃತಿಯನ್ನು ಆರಾಧಿಸೋಣ. ಮನೆ ಮನೆಗಳಲ್ಲಿ ಹೂವಿನ ಗಿಡಗಳು ಕ್ಷೀಣಿಸುತ್ತಿರುವ ಈ ಕಾಲಘಟ್ಟದಲ್ಲಿ ಲಾಲ್ ಬಾಗ್ ನಂತಹ ಹೂದೋಟಗಳು ಪುಷ್ಪಪ್ರಿಯರಿಗೆ ಮುದ ನೀಡುತ್ತವೆ. ನಾನು ಕಳೆದ ವರ್ಷ ಯುರೋಪ್ ನ ನೆದರ್ಲ್ಯಾಂಡ್ ನಲ್ಲಿರುವ ಜಗತ್ತಿನ ಅತಿ ದೊಡ್ಡ ಹೂದೋಟ - ಕೊಕೇನ್ ಹಾಫ್ (Keukenhof)ಗೆ ಭೇಟಿ ನೀಡಿದ್ದೆ. ಸುಮಾರು ೮೦ ಎಕರೆ ಇರುವ ಸ್ವರ್ಗ ಅದು, ಒಮ್ಮೆ ಒಳಹೊಕ್ಕರೆ ಹೊರಬರುವ ಮನಸ್ಸೇ ಆಗುವುದಿಲ್ಲ! ಹೂವುಗಳ ಆಕರ್ಷಣೆಯೇ ಹಾಗೆ. ನಮ್ಮ ಲಾಲ್ ಬಾಗ್ ಕೂಡ ಅನೇಕ ರೀತಿಯ ಹೂವುಗಳಿಂದ ಕಂಗೊಳಿಸುತ್ತಿದೆ - ಸಮಯ ಮಾಡಿಕೊಂಡು ಭೇಟಿ ನೀಡುವುದು ಉತ್ತಮ. ಲಾಲ್ ಬಾಗ್ ನ ಪುಷ್ಪಜಾತ ಕಲಾಕೃತಿಗಳ ಹಿಂದಿರುವ ಕೈಗಳಿಗೆ ಮೆಚ್ಚುಗೆ ಸಲ್ಲಿಸುತ್ತಾ ಇಲ್ಲಿಗೆ ವಿರಮಿಸುತ್ತೇನೆ.

ಕೊನೆಯ ಹನಿ - ಗುಲಾಬಿ ಗಿಡದಲ್ಲಿ ಹೂವಿದ್ದಾಗ ಯಾರೂ ಮುಳ್ಳನ್ನು ನೋಡುವುದಿಲ್ಲ, ಹೀಗೆ ಒಂದು ಗುಲಾಬಿ ತನ್ನ ಗಿಡದ ಎಲ್ಲ ಮುಳ್ಳುಗಳನ್ನು ಮುಚ್ಚಿಡುತ್ತದೆ. ಸೃಷ್ಟಿಯ ಈ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳೋಣ - ಭಾರತಮಾತೆಯ ಪದತಲದಲ್ಲಿ ನಾವೊಂದು ಗುಲಾಬಿಯಾಗೋಣ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಶ್ರಾವಣ - ಪೂರ್ಣಿಮಾ.
೧೫-ಆಗಸ್ಟ್-೨೦೧೯, ಗುರುವಾರ.
ಬೆಂಗಳೂರು.

Tuesday, 16 July 2019

ಕಾಲನ ಕರೆಗೆ ಕೊನೆಗೂ ಓಗೊಟ್ಟ ನಮ್ಮ ಶ್ರೀನಿವಾಸ ಆಚಾರ್ಯ

ಕಾಲನ ಕರೆಗೆ ಕೊನೆಗೂ ಓಗೊಟ್ಟ ನಮ್ಮ ಶ್ರೀನಿವಾಸ ಆಚಾರ್ಯ 

ಭಾರತೀಯ ಇತಿಹಾಸ ಸಂಕಲನಾ ಸಮಿತಿಯ ರಾಜ್ಯ ಸಂಚಾಲಕರಾಗಿದ್ದ ಶ್ರೀಯುತ ಶ್ರೀನಿವಾಸ ರಾವ್ (ನಮ್ಮ ನೆಚ್ಚಿನ ಶ್ರೀನಿವಾಸ ಆಚಾರ್ಯ) ನಿನ್ನೆ ಇತಿಹಾಸ ಸೇರಿದ್ದಾರೆ. ಇತಿಹಾಸದ ಬಗ್ಗೆ ಅತೀವ ಆಸಕ್ತಿ ಹೊಂದಿ ನನ್ನಂತಹ ಅನೇಕರಿಗೆ ಭಾರತೀಯ ಇತಿಹಾಸದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿ ಕೊನೆಗೆ ಇತಿಹಾಸ ಸೇರಿದ ವ್ಯಕ್ತಿ ಅವರು. ನಮಗೆ ಗುರುಕುಲದಲ್ಲಿ ಅವರು ಹೇಳುತ್ತಿದ್ದ ಇತಿಹಾಸ ಪಾಠ ಇಂದೂ ನೆನಪಿದೆ. ಶಿವಾಜಿ, ಚಾಣಕ್ಯ, ಆಜಾದ್ ಇತ್ಯಾದಿ ಕಥೆಗಳನ್ನು ಧಾರಾವಾಹಿಯಂತೆ ಕಣ್ಣಿಗೆ ಕಟ್ಟುವ ಹಾಗೆ ಅನೇಕ ದಿನಗಳವರೆಗೆ ಹೇಳುತ್ತಿದ್ದರು. ನಿನ್ನೆ ಬಂದೆರಗಿದ ಅವರ ಅಕಾಲಿಕ ನಿಧನ ವಾರ್ತೆ ನನ್ನಂತಹ ಅನೇಕ ಶಿಷ್ಯಂದಿರಿಗೆ ಆಘಾತವನ್ನುಂಟುಮಾಡಿದೆ.

ಶ್ರೀನಿವಾಸ ಆಚಾರ್ಯರದ್ದು ಬಹುಮುಖ ವ್ಯಕ್ತಿತ್ವ. ಇತಿಹಾಸವಲ್ಲದೆ ಕುಸ್ತಿ, ಮಲ್ಲಯುದ್ಧ ಹೀಗೆ ಅನೇಕ ಶಾರೀರಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ತುಂಗೆಯ ತಟದಲ್ಲಿ ಮರಳು ರಾಶಿಯ ಮೇಲೆ ಹನುಮಾನ್ ಚಡ್ಡಿ ಹಾಕಿ ಅವರು ನಮಗೆ ಹೇಳಿಕೊಡುತ್ತಿದ್ದ ಕುಸ್ತಿ ಇನ್ನೂ ನೆನಪಿದೆ. ನನಗೆ ನೆನಪಿರುವಂತೆ ಅವರ ಮಾರ್ಗದರ್ಶನದಲ್ಲಿ ನಾನು ಮತ್ತು ನನ್ನ ಸ್ನೇಹಿತ ಕೇಶವ ಇಬ್ಬರೂ ಹರಿಹರಪುರದಲ್ಲಿ ಕುಸ್ತಿ ಪ್ರದರ್ಶನ ಕೂಡಾ ಮಾಡಿದ್ದೇವೆ. ಅಷ್ಟೇ ಅಲ್ಲದೆ ನನ್ನ ಮೊದಲನೇ ಪ್ರಾಜೆಕ್ಟ್ ವರ್ಕ್ "ಗ್ರಾಮೀಣ ಭಾರತದ ಅಧ್ಯಯನ" ಅವರ ಮಾರ್ಗದರ್ಶನದಲ್ಲಿಯೇ ಆಗಿದೆ. ನನ್ನ ಜೊತೆಗೆ ನನ್ನ ಸಹಾಧ್ಯಾಯಿಗಳಿಗೆ ವನವಾಸಿ ಹಾಗೂ ನಗರ ಭಾರತದ ಅಧ್ಯಯನದ ಪ್ರಾಜೆಕ್ಟ್ ವರ್ಕ್  ಮಾಡಿಸಿದ್ದರು. ಪ್ರಜ್ಞಾ, ಪ್ರತಿಭಾ ಗಣದಲ್ಲಿರುವಾಗಲೇ (ಗುರುಕುಲದಲ್ಲಿ ೭, ೮ ನೇ ತರಗತಿ) ಇತಿಹಾಸದ M.A ಪುಸ್ತಕಗಳನ್ನು ಓದುತ್ತಿದ್ದೆವು ಅಂದರೆ ಅದರಲ್ಲಿ ಶ್ರೀನಿವಾಸ ಆಚಾರ್ಯರ ಪಾತ್ರ ಬಹಳಷ್ಟಿದೆ. ನಾನು ಅವರ ಮಾರ್ಗ ದರ್ಶನದಲ್ಲಿ ಧೃತಿ ಗಣದಲ್ಲಿದ್ದಾಗ (೯ ನೇ ತರಗತಿ) ಸ್ಥಳೀಯ ಪತ್ರಿಕೆಯ ವಿಶೇಷ ಸಂಚಿಕೆಗೆ "ಪ್ರಾಚೀನ ಭಾರತೀಯರ ಸಾಧನೆಗಳು" ಎಂಬ ಶೀರ್ಷಿಕೆಯಡಿ ಲೇಖನವನ್ನು ಕೂಡಾ ಬರೆದಿದ್ದೇನೆ. ಪ್ರಕಟಿತವಾದ ನನ್ನ ಮೊದಲ ಲೇಖನ ಅದು. ಇಂದೂ ಅಭ್ಯಸಿಸುತ್ತಿರುವ ನಿರಂತರ ಬರವಣಿಗೆಗೆ ಅವರೂ ಸ್ಫೂರ್ತಿಯಾಗಿದ್ದಾರೆ. ಶ್ರೀ ವಿದ್ಯಾನಂದ ಶೆಣೈ ಅವರಂತೆ 'ಭಾರತ ದರ್ಶನ' ಕಾರ್ಯಕ್ರಮವನ್ನು ಸಂಸ್ಕೃತದಲ್ಲಿ ಮಾಡಿಸಬೇಕೆಂದು ಅವರೂ ಇಚ್ಚಿಸಿದ್ದರು - ಅದು ಇನ್ನೂ ಸಾಧ್ಯವಾಗಿಲ್ಲದ್ದಕ್ಕೆ ಬೇಸರವಿದೆ.

ಕೇವಲ ಪಠ್ಯ ವಿಷಯಗಳಲ್ಲದೇ ಗುರುಕುಲದಲ್ಲಿ ಮಕ್ಕಳೊಂದಿಗೆ ಇಡ್ಲಿ ತಿನ್ನುವ, ಪಾಯಸ ಸುರಿಯುವ ಸ್ಪರ್ಧೆಗಳಲ್ಲಿ ಅವರೂ 'ಸಾಥ್' ಕೊಡುತ್ತಿದ್ದರು. ಅವರ ಜೊತೆ ಗೆಲ್ಲುವುದು ಕಷ್ಟವಾಗಿತ್ತಾದರೂ ಗೆದ್ದ ಅನುಭವವಿದೆ ನನಗೆ..! ಅನೌಪಚಾರಿಕವಾಗಿ ನಮ್ಮ ಹರಟೆಗಳು ಗಂಟೆಗಟ್ಟಲೆ ನೆಡೆಯುತ್ತಿದ್ದವು. ಸಂಪರ್ಕ, ಪ್ರವಾಸ ಪ್ರಿಯರಾಗಿದ್ದ ಅವರು ನನ್ನನ್ನು ಒಮ್ಮೆ ಕೊಪ್ಪದಲ್ಲಿರುವ ಕ್ರೈಸ್ತ ಪಾದ್ರಿಯವರ ಮನೆಗೆ ಸಂಪರ್ಕಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನೆಡೆದ ಕ್ರೈಸ್ತ-ಹಿಂದೂ ಧರ್ಮದ ಬಗೆಗಿನ ಚರ್ಚೆ ಇಂದೂ ನನಗೆ ನೆನಪಿದೆ.

ಒಟ್ಟಿನಲ್ಲಿ ನಾವಿದ್ದ ಆರೂ ವರ್ಷ ಅವರು ಗುರುಕುಲದಲ್ಲಿ ಆಚಾರ್ಯರಾಗಿಯೇ ಇದ್ದರು. ನಂತರದಲ್ಲಿ ಭಾರತೀಯ ಇತಿಹಾಸ ಸಂಕಲನಾ ಸಮಿತಿಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು. ಗುರುಕುಲ ಬಿಟ್ಟ ನಂತರ ನನ್ನ ಮತ್ತು ಶ್ರೀನಿವಾಸ ಆಚಾರ್ಯರ ಸಂಪರ್ಕ ಕಡಿಮೆಯಾಗಿತ್ತಾದರೂ, ಪೂರ್ವ ಛತ್ರ ಸಭೆಗಳಲ್ಲಿ (Alumni meet) ಭೇಟಿಯಾದಾಗ ನಮ್ಮನ್ನು ಬಹಳ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನಮ್ಮ ನೆಚ್ಚಿನ ಆಚಾರ್ಯರ ಅಕಾಲಿಕ ನಿಧನ ಬಹಳ ದುಃಖ ತಂದಿದೆ. ಅವರ ಕುಟುಂಬಕ್ಕೆ, ಅಭಿಮಾನಿ ಬಳಗಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ. ಆಚಾರ್ಯರ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲಿ ಎಂದು ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ಆಷಾಢ-ಪೂರ್ಣಿಮೆ.
೧೬-೦೭-೨೦೧೯, ಬೆಂಗಳೂರು. 

Sunday, 5 May 2019

Words Laugh Day - 2019

ವಿಶ್ವ ನಗೆ ದಿನ - ಹಸನ್ಮುಖಿ ಸದಾ ಸುಖಿ.

ಇಂದು ವಿಶ್ವ ನಗೆ ದಿನ. ಮೇ ತಿಂಗಳ ಮೊದಲ ಭಾನುವಾರವನ್ನು ಜಗತ್ತು "ನಗೆ ದಿನ"ವನ್ನಾಗಿ ಆಚರಿಸುತ್ತದೆ. ಇದು ನಗುವಿನ ಮಹತ್ವವನ್ನು ತಿಳಿಸುತ್ತದೆ. 'ನಗು' ಮನಸ್ಸು ಹಗುರವಾಗಿದ್ದಾಗ ತನ್ನಿಂದ ತಾನೇ ಹೊರ ಹೊಮ್ಮುವ ಭಾವ, ಮನಸ್ಸಿನ ಒಳಗಿನ ಸಂತೋಷವನ್ನು ಮುಖದ ಮೇಲೆ ಹೊರ ಜಗತ್ತಿಗೆ ವ್ಯಕ್ತ ಪಡಿಸುವ ಪ್ರಕ್ರಿಯೆಯೇ 'ನಗು'. ಈ ನಗು ದೊಡ್ಡವರನ್ನು ಚಿಕ್ಕ ಮಗುವನ್ನಾಗಿ ಪರಿವರ್ತಿಸಬಲ್ಲದು. ನಿಷ್ಕಳಂಕವಾದ ನಗುವನ್ನು ನಾವು ಚಿಕ್ಕ ಮಕ್ಕಳಲ್ಲಿ ನೋಡುತ್ತೇವೆ. ಕಪಟವಿಲ್ಲದ ಮಕ್ಕಳ ಈ ನಗು ಎಂತಹವರನ್ನಾದರೂ ಮುಗ್ಧರನ್ನಾಗಿಸುತ್ತದೆ. ಇಂತಹ ಮಕ್ಕಳ ನಗುವನ್ನು ನೋಡಿಯೇ ಕವಿ ಡಿಂಡಿಮ "ಕಮಲೇ ಕಾಮಲೋತ್ಪತ್ತಿ:"- ಒಂದು ಕಮಲದಲ್ಲಿ ಇನ್ನೊಂದು ಕಮಲಹುಟ್ಟುತ್ತದೆ ಎಂದು ಮಕ್ಕಳ ಮುಖಾರವಿಂದವನ್ನು ವರ್ಣಿಸಿರುವುದು. ಮನಸ್ಸು ಅತ್ಯಂತ ಸಮಾಧಾನವಾಗಿದ್ದಾಗ ಮಾತ್ರ ವ್ಯಕ್ತವಾಗುವ ಭಾವ - ನಗು. ನಾವೆಷ್ಟು ನಗುತ್ತೇವೆ ಅನ್ನುವುದು ನಮ್ಮ ಮನಸ್ಸಿನ ಲಯವನ್ನು ತಿಳಿಸುತ್ತದೆ.

ನಗು ಕೇವಲ ಒಂದು ಬಹಿರ್ಮುಖವಾದ ಕ್ರಿಯೆಯಾಗದೆ ಅಂತರಂಗದ ಅನುಭೂತಿಯಾಗಿದೆ. ಈ ಅನುಭೂತಿಯನ್ನು ಪಡೆಯಲು ನಾವು ನಮ್ಮ ಜೀವನಕ್ರಮ, ಚಿಂತನಾವಿಧಿಗಳನ್ನು 'ಟ್ಯೂನ್' ಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಧಾವಂತ ಜೀವನ ಪದ್ದತಿಯಲ್ಲಿ ನಗುವುದು ಹಾಗೆಯೇ ನಗಿಸುವುದು ಸುಲಭದ ಕೆಲಸಗಳಲ್ಲ. ಅತ್ಯಂತ ಸ್ವಾಭಾವಿಕವಾಗಿ ಹೊರಹೊಮ್ಮಬೇಕಾದ ನಗುವನ್ನು ನಮಗೆ ಪುನಃ ನೆನಪಿಸಲು ತರಬೇತಿಗಳ, ಶಿಬಿರಗಳ ಅವಶ್ಯಕತೆ ಬಂದಿರುವುದು ಒಂದು ವಿಪರ್ಯಾಸವೇ ಸರಿ.

ನಮ್ಮಲ್ಲಿ ಅನೇಕರು ಚಿಂತೆ ಮಾಡುತ್ತಲೇ ಕೊನೆಗೆ ಚಿತೆಯನ್ನೇರುತ್ತೇವೆ. ಚಿಂತೆ ನಮ್ಮನ್ನು 'ಶೂನ್ಯ ಭಾವ'ದೆಡೆಗೆ ದೂಡುತ್ತದೆ. ಮಕ್ಕಳಿಗೆ ಪಠ್ಯ-ಪುಸ್ತಕ, ಪರೀಕ್ಷೆಗಳ ಚಿಂತೆ, ಶಿಕ್ಷಕರಿಗೆ ಶಾಲಾ-ಕಾಲೇಜುಗಳ ಫಲಿತಾಂಶದ್ದೇ ಚಿಂತೆ, ಇನ್ನು ಪೋಷಕರಿಗೆ ಮಕ್ಕಳ ೧೦೦ ವರ್ಷದ ಜೀವನಕ್ಕಿಂತ ಅವರು ೧೦೦% ಪಡೆಯುವುದೇ ದೊಡ್ಡ ಚಿಂತೆ..!!ಉದ್ಯೋಗಿಗಳಿಗೆ ವಾರ್ಷಿಕ ಬಡ್ತಿಯದ್ದೇ ಚಿಂತೆ, ಗಂಡನಿಗೆ ಹೆಂಡತಿಯ ಚಿಂತೆ, ಹೆಂಡತಿಗೆ ಗಂಡನದ್ದೇ ಚಿಂತೆ. ಗಂಡ-ಹೆಂಡತಿ ಇಬ್ಬರಿಗೂ ಮಕ್ಕಳ ಚಿಂತೆ. ಹೀಗೆ ಖಂತೆ ಖಂತೆ ಚಿಂತೆಗಳ ಸಂತೆಯಲ್ಲಿ ನಾವಿದ್ದೇವೆ. ಹಾಗಾಗಿ ಮನಸ್ಸು ಭಾರವಾಗಿ ನಗು ಅನುಭವಕ್ಕೆ ಬಾರದಾಗಿದೆ. ನಾವು ಅನಾವಶ್ಯಕ ಚಿಂತೆಗಳನ್ನು ದೂರ ಮಾಡೋಣ. ದಿನಗಳನ್ನು ಮುಂದೂಡುವ ಬದಲು, ಪ್ರತಿ ಕ್ಷಣವನ್ನು ಅನುಭವಿಸೋಣ. ಆಧುನಿಕ ಸಂಶೋಧನೆಗಳ ಪ್ರಕಾರ 'ನಗು' ಒಂದು ಔಷಧವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಲ ಗರ್ಭದಲ್ಲಿ ಅಡಕವಾಗಿದೆ ಎಂದರಿತು "ಕಾಲಾಯ ತಸ್ಮೈ ನಮಃ" ಎನ್ನೋಣ. ಮನಸ್ಸನ್ನು ತಿಳಿಯಾಗಿಡಲು ಪ್ರಯತ್ನಿಸೋಣ. ತಿಳಿಯಾದ ಮನಸ್ಸಿನ ವ್ಯಕ್ತ ರೂಪವೇ ನಗು. ಮುಖದ ಮೇಲಿನ ಮಂದಹಾಸ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ ಎಂಬುದು ಗಮನೀಯ ಅಂಶ.

ಇನ್ನೂಅನೇಕರಿಗೆ ಹಾಸ್ಯ ಮತ್ತು ಅಪಹಾಸ್ಯಗಳ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಹಾಸ್ಯ ಮಾಡುವ ಭರದಲ್ಲಿ ಅಪಹಾಸ್ಯ ಮಾಡುತ್ತಾರೆ. ಇನ್ನೊಬ್ಬರ ದೌರ್ಬಲ್ಯಗಳನ್ನೇ ವಿಷಯ ಮಾಡಿ ನಗುವುದು ಅಪಹಾಸ್ಯವಾಗುತ್ತದೆ. ಇತರರಿಗೆ ನೋವಾಗುವಂತೆ ನಗುವುದೇ ಲೇವಡಿ-ಕುಹಕವಾಗುತ್ತದೆ. ನಮ್ಮ ನಗು ಇತರರ ಮನಸ್ಸನ್ನು ಅರಳಿಸಬೇಕು, ಕೆರಳಿಸಬಾರದು - ನೋಯಿಸಬಾರದು. ನಗುವುದು - ನಗಿಸುವುದು ಒಂದು ಕಲೆ. ಇದನ್ನು ಕರಗತ ಮಾಡಿಕೊಳ್ಳಬೇಕು. ನವಿರಾದ ಹಾಸ್ಯಪ್ರಜ್ಞೆ ಸ್ನೇಹಿತರನ್ನು ಸಂಪಾದಿಸುತ್ತದೆ, ಸಂಬಂಧಗಳನ್ನು ಗಟ್ಟಿ ಮಾಡುತ್ತದೆ. ಆದರೆ ಅಪಹಾಸ್ಯ ಸಂಬಂಧಗಳನ್ನು ಶಾಶ್ವತವಾಗಿ ದೂರ ಮಾಡುತ್ತದೆ. ಹೀಗೆ ನಗುವಿನ ಲಯವನ್ನು ಅರಿತುಕೊಳ್ಳುವುದೇ 'ಹಾಸ್ಯಪ್ರಜ್ಞೆ'. ಇಂತಹ ತಿಳಿಯಾದ ಹಾಸ್ಯಪ್ರಜ್ಞೆ ನಮ್ಮದಾಗಬೇಕು.


ಕೊನೆಯ ಹನಿ: Smily ಗಳನ್ನು Whatsapp ನಿಂದ ಹೊರತಂದು ನಮ್ಮ ಮುಖದಲ್ಲಿ ವ್ಯಕ್ತಪಡಿಸೋಣ. ನಗೋಣ-ನಗಿಸೋಣ, ಹಸನ್ಮುಖಿಗಳಾಗೋಣ - ಸದಾಸುಖಿಗಳಾಗೋಣ. ಕೊನೆಯಲ್ಲಿ ಡಿವಿಜಿ ಯವರ ಮಂಕುತಿಮ್ಮನ ಕಗ್ಗದ ಈ ತುಣುಕನ್ನು ಮೆಲುಕು ಹಾಕುತ್ತಾ ನಗುವಿನ ಮರ್ಮವನ್ನು ಅರಿತುಕೊಳ್ಳೋಣ.


ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ  - ಮಂಕುತಿಮ್ಮ ||

ಸದಾ ನಿಮ್ಮವ,
ಹ.ನಾ.ಮಾಧವ ಭಟ್
ವೈಶಾಖ-ಕೃಷ್ಣ-ಪಂಚಮಿ.
೦೫-ಮೇ-೨೦೧೯, ಭಾನುವಾರ
ಬೆಂಗಳೂರು.

Sunday, 3 March 2019

Nation and National Commitment

ದೇಶದ ಬಗೆಗಿನ ಬಧ್ಧತೆ ಮರೆತ ಎಡಬಿಡಂಗಿಗಳಿಗೆ ಏನೆನ್ನಬೇಕು?

ಳೆದ ೧೫ ದಿನಗಳಿಂದ ಮನಸ್ಸು ಬಹಳ ಘಾಸಿಗೊಂಡಿದೆಫೆ.೧೪ ಭಾರತದ ಮಟ್ಟಿಗೆ ಕರಾಳ ದಿನ.
ನಮ್ಮ ದೇಶದ ೪೪ ಸೈನಿಕರನ್ನು ದುಷ್ಟಶಕ್ತಿಗಳು  ಹತ್ಯೆಗೈದಿದ್ದು ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತುಭಯೋತ್ಪಾದನೆ - ಅದು ಕೇವಲ ಭಾರತಕ್ಕಲ್ಲಮಾನವ ಜಗತ್ತಿಗೆ ಅಂಟಿದಶಾಪ೨೨ ವರ್ಷದ ಯುವಕನೊಬ್ಬ ಸ್ಫೋಟಕಗಳನ್ನು ಬಳಸಿ ೪೪ ಜನರನ್ನು ಹತ್ಯೆಗಯ್ಯುತ್ತಾನೆಂದರೆ  ವಿಕೃತ ಮನಸ್ಸು ಹಾಗೂ ಅದರ ಹಿಂದಿರುವ ಸಂಘಟನೆಗಳ ಕ್ರೌರ್ಯ ಎಂಥಾದ್ದಿರಬಹುದುಇಂತಹ ಶಕ್ತಿಗಳನ್ನು ನಿಶ್ಶಕ್ತಿಗೊಳಿಸುವುದು  ಮಾನವ ಸಮಾಜಕ್ಕೆ ಅನಿವಾರ್ಯ.

ಫುಲ್ವಾಮಾದಲ್ಲಿ ನೆಡೆದ ಭೀಕರ ಸ್ಫೋಟ 
ಸರಣಿಯನ್ನೊಮ್ಮೆ ನೆನಪಿಸಿಕೊಳ್ಳೋಣಫೆ೧೪ ಫುಲ್ವಾಮಾದಲ್ಲಿ ಭಯೋತ್ಪಾದಕನ ದಾಳಿಅದಾದ ನಂತರ ಪಾಕಿಸ್ತಾನದ ಮೇಲೆ ನಿಯಂತ್ರಣ ಹೇರಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳುನಂತರ ಭಾರತೀಯ ವಾಯುಸೇನೆಯಿಂದ ವಿಷ ಜಂತುಗಳ ಹುತ್ತಕ್ಕೆ ಬಾಂಬ್ ದಾಳಿಇದರಿಂದ ಸಿಟ್ಟುಗೊಂಡ ಪಾಕ್ನಿಂದ ಭಾರತದ ಮೇಲೆ ದಾಳಿಯ ಯತ್ನಭಾರತದಿಂದ ಅದನ್ನು ಹಿಮ್ಮೆಟ್ಟಿಸಲು ಪ್ರತಿ ದಾಳಿ ಹಂತದಲ್ಲಿ ಭಾರತದ ವಾಯುಸೇನಾಧಿಕಾರಿಯನ್ನು ಪಾಕಿಸ್ತಾನ ಸೇನೆ ಸೆರೆಹಿಡಿಯುವುದು ಮತ್ತು ಕೊನೆಯಲ್ಲಿ ಅವರನ್ನು ಜಿನೇವಾ ಒಪ್ಪಂದದಂತೆ ಭಾರತಕ್ಕೆ ಪುನಃ ಕಳುಹಿಸಿಕೊಡುವುದು - ಇಷ್ಟೆಲ್ಲಾ ಘಟನೆಗಳು  ೧೫ ದಿನಗಳಲ್ಲಿ ಘಟಿಸಿದವು.

ಪಾಕಿಸ್ತಾನ ಬಂಧಿಸಿದ್ದ ಭಾರತೀಯ
ವಾಯುಸೇನಾಧಿಕಾರಿ - ಅಭಿನಂದನ್ ವರ್ತಮಾನ್
ನಮ್ಮ ದೇಶಿಗರು ಇಂತಹ ಸನ್ನಿವೇಶಗಳಿಗೆ ಸ್ಪಂದಿಸುವಷ್ಟು
ಬೆಳೆದಿದ್ದಾರೆಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ವಾಟ್ಸಾಪ್ಟ್ವಿಟರ್ ಇತ್ಯಾದಿಗಳು  ಸ್ಪಂದನೆಗಳಿಗೆ ಪರಿಣಾಮಕಾರಿಯಾದ ಮಾಧ್ಯಮಗಳಾಗಿವೆಅನೇಕರು ಭಯೋತ್ಪಾದನೆಯನ್ನು ಕಿತ್ತೊಗೆಯಬೇಕೆಂದೂಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದೂ ಅಭಿಪ್ರಾಯಪಟ್ಟರೆಇನ್ನೂ ಅನೇಕರು ಬಂಧಿಯಾಗಿರುವ ಭಾರತೀಯ ಯೋಧ ಸುರಕ್ಷಿತವಾಗಿ ಹಿಂತಿರುಗಳೆಂದೂ ಹಾರೈಸಿದ್ದಾರೆಅತ್ತ ಪಾಕಿಸ್ತಾನದ ಟ್ವೀಟಿಗರು ಭಾರತದ ಸೇನೆ
ಉಧ್ಧಟತನ ತೋರಿದೆ ಎಂದು ಅವಲತ್ತುಕೊಂಡಿದ್ದಾರೆಹಾಗೆಯೇ ಕೆಲವರು ಭಾರತೀಯ ಯೋಧನನ್ನು ಗೌರವಯುತವಾಗಿ ನೆಡೆಸಿಕೊಂಡು ಹಿಂದಿರುಗಿಸಬೇಕೆಂದೂಇನ್ನೂ ಕೆಲವರು ಹಿಂದಿರುಗಿಸಬಾರದೆಂದೂ ಪಾಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇನ್ನು ಜಿನೇವಾ ಒಪ್ಪಂದದಂತೆ ನಮ್ಮ ಯೋಧನನ್ನುಹಿಂದಿರುಗಿಸಿದ ಮೇಲೆ ಭಾರತೀಯರು ಹರ್ಷವನ್ನು ವ್ಯಕ್ತಪಡಿಸಿದ್ದಾರೆಹೀಗೆ ಅನೇಕ ರೀತಿಯ ಅಭಿಪ್ರಾಯಗಳಿಗೆ  ಸಾಮಾಜಿಕ ಮಾಧ್ಯಮಗಳು ಸಾಕ್ಷಿಯಾದವು.

ನಮ್ಮ ದೇಶದ ಮೇಲೆ ಹೊರಗಿನವರ ಆಕ್ರಮಣ ಒಂದುಕಡೆಯಾದರೆಒಳಗಿನವರ ಅತಿರೇಕಗಳು ನಮ್ಮನ್ನು ಇನ್ನೂ ಚಿಂತೆಗೀಡುಮಾಡಿದೆ ಒಟ್ಟಾರೆ ಸನ್ನಿವೇಶ ಅನೇಕ ವ್ಯಕ್ತಿಗಳರಾಜಕಾರಣಿಗಳರಾಜಕೀಯ ಪಕ್ಷಗಳಸಾಮಾಜಿಕ ಕಾರ್ಯಕರ್ತರೆನಿಸಿಕೊಂಡವರಸಾಹಿತಿಗಳಪತ್ರಕರ್ತರ ಹೀಗೆ ಅನೇಕರ "ರಾಷ್ಟ್ರೀಯ ಬಧ್ಧತೆ"ಯನ್ನು ತೋರಿಸಿಕೊಟ್ಟಿದೆಇದು ಇವರುಗಳ ಬಣ್ಣವನ್ನು ಬಯಲು ಮಾಡಿ ಇವರನ್ನು ಬೆತ್ತಲು ಮಾಡಿದೆಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಇವರುಗಳು
ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತಂತಿದೆಇದು ಕೇವಲ ಚುನಾವಣಾ ತಂತ್ರವೆಂದು ಕೆಲವು ರಾಜಕೀಯ ಪಕ್ಷಗಳುರಾಜಕಾರಣಿಗಳುಪತ್ರಕರ್ತರು ಭಯೋತ್ಪಾದನೆಯ ವಿರುಧ್ಧ ನೆಡೆದ ದಾಳಿಯ ಮೇಲೆ ತಣ್ಣೀರೆರೆಚಿದ್ದಾರೆಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ದಾಳಿಯ ಕುರಿತಾದ ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕೆಂದು  ತಮ್ಮ ಬೇಜವಾಬ್ದಾರಿಯುತವಾಗಿ ಒತ್ತಾಯಿಸಿದ್ದಾರೆಇತ್ತ ಸುದ್ದಿ ಮಾಧ್ಯಮಗಳು ವೀರ ಯೋಧನ ವ್ಯಯಕ್ತಿಕ ಮಾಹಿತಿಯನ್ನು ಫೋಟೋ ಸಹಿತ ಬಟಾ ಬಯಲು ಮಾಡಿರುವುದು - ಪಾಕಿಸ್ತಾನದವರೂ ಕೂಡಾ ನಮ್ಮತ್ತ ನೋಡಿ ನಗುವಂತೆ ಮಾಡಿದೆ.

ಹಾಗೆ ನೋಡಿದರೆ ಪಾಕಿಸ್ತಾನಕ್ಕೆ ನಮ್ಮ ಯೋಧನನ್ನು ಬಿಡುಗಡೆಗೊಳಿಸುವ ಹೊರತು ಬೇರೆ ಆಯ್ಕೆಗಳೇ ಇರಲಿಲ್ಲಹಾಗಾಗಿ  ದೇಶದ  ನೆಡೆಯನ್ನು ನಾವು ಶಾಂತಿ ಸ್ಥಾಪನೆಯ ಬೀಜವೆಂದೇನೂ ಪರಿಗಣಿಸಬೇಕಿಲ್ಲಇದರ ಪ್ರಾಥಮಿಕ ಅರಿವೂ ಇಲ್ಲದೇಮೋದಿಯವರನ್ನು ವಿರೋಧಿಸುವ ಸಲುವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಹೊಗಳಿರುವುದುಆತನ ನೆಡೆಯನ್ನು ಶಾಂತಿಮಾರ್ಗವೆಂದು ನಮ್ಮ ಕೆಲವು ಬುದ್ದಿಜೀವಿ(??)ಗಳುಪತ್ರಕರ್ತರು ಹೇಳಿರುವುದು ನಮ್ಮ ದೇಶದ ದುರ್ಧೈವವೇ ಸರಿನಮ್ಮ ಕೆಲವು ಎಡ ಬಿಡಂಗಿ ರಾಜಕಾರಣಿಗಳು ಇದೇ ಸನ್ನಿವೇಶವನ್ನು ರಾಜಕೀಯದ ತಕ್ಕಡಿಯಲ್ಲಿ ಹಾಕಿ ತೂಗಿರುವುದು ಅತ್ಯಂತ ಕೆಳಮಟ್ಟದ ಬೆಳವಣಿಗೆಯಾಗಿದೆ೩೦೦ ಲೋಕಸಭಾ ಸ್ಥಾನಗಳಿಗಾಗಿ  ದಾಳಿ ನೆಡೆದಿದೆ ಎಂಬ ಪ್ರಜ್ಞಾ ರಹಿತ ದೆಹಲಿ ಮುಖ್ಯಮಂತ್ರಿಯ ಹೇಳಿಕೆ ಪಾಕ್ ಸಂಸತ್ತಿನಲ್ಲೂ ಚರ್ಚೆಯ ವಿಷಯವಾಗುತ್ತದೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೇನಿರಲು ಸಾಧ್ಯ?

ಇಡೀ ಪ್ರಕರಣದಲ್ಲಿ ಭಾರತ ರಾಜತಾಂತ್ರಿಕವಾಗಿ ಗೆದ್ದಿದೆಅಂತರಾಷ್ಟ್ರೀಯ ಗಡಿರೇಖೆಯನ್ನು ದಾಟಿ ದಾಳಿ ಮಾಡಿರುವುದು ನಮ್ಮ ಭಾರತ ಸರ್ಕಾರದ ಗಟ್ಟಿ ನಿರ್ಧಾರವೇ ಸರಿ ನಿರ್ಧಾರಕ್ಕಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆಒಟ್ಟಾರೆ  ಘಟನಾವಳಿಗಳ ಧನಾತ್ಮಕ ಪರಿಣಾಮವನ್ನು ಮೋದಿಯವರಿಗೆ ಕೊಡಬಾರದೆಂಬುದೇ ಮೋದಿ ವಿರೋಧಿಗಳ ಏಕಮೇವ ಧ್ಯೇಯವಾಗಿದೆಆದರೆ ಮನೆಯೇ ಹೊತ್ತಿ ಉರಿಯುತ್ತಿರುವಾಗ ಮನೆಯ ಯಜಮಾನನಿಗೆ ಹೆಗಲು ಕೊಟ್ಟು ನಿಲ್ಲುವುದು ನಮ್ಮ ಜವಾಬ್ದಾರಿಆಢಳಿತ ಪಕ್ಷವನ್ನು ವಿರೋಧಿಸುವುದುಮೋದಿಯವರನ್ನು ಹೊಗಳುವುದು - ತೆಗಳುವುದುಪುಷ್ಟೀಕರಿಸುವುದು - ವಿರೋಧಿಸುವುದು ಅವರವರ ಆಯ್ಕೆಆದರೆ ಇಂತಹ ಸನ್ನಿವೇಶಗಳನ್ನು ರಾಜಕೀಯದ ವಕ್ರದೃಷ್ಟಿಯಿಂದ ನೋಡಿ, "ಬಧ್ಧತೆ"ಯನ್ನು ಮರೆಯುವುದು - ರಾಷ್ಟ್ರೀಯ ಭದ್ರತೆಗೆ ಮಾರಕವೇ ಸರಿ.

ಕೊನೆಯ ಹನಿದೇಶದ ಬಗ್ಗೆ ಬಧ್ಧತೆಯೇ ಇಲ್ಲದ  ಜನರು ಮೋದಿಯವರನ್ನು ವಿರೋಧಿಸುವ ರೀತಿ ಮತ್ತು ತಾರಾತುರಿಯನ್ನು ನೋಡಿದರೆಮೋದಿ ಇಂತಹ ಎಡ ಬಿಡಂಗಿಗಳಿಗೆ ತೊಡಕಾಗುವ ಏನೋ ಕೆಲಸ ಮಾಡುತ್ತಿದ್ದಾರೆಂದೆನಿಸುತ್ತದೆಮೋದಿಯೇ ಮುಂದುವರಿದರೆ  ನಿರ್ಲಜ್ಜರುಗಳಿಗೆ  ದಿನನಿತ್ಯದ ಗಂಜಿಗೇ ಗತಿ ಇಲ್ಲದ ಸ್ಥಿತಿ ಬರಬಹುದೆನಿಸುತ್ತದೆ ಒಂದೇ ಒಂದು ಕಾರಣಕ್ಕಾಗಿ ನಾನು ಮೋದಿಯವರ ಕೈ ಬಲಪಡಿಸುವ ಎಲ್ಲ ಪ್ರಯತ್ನ ಮಾಡುತ್ತೇನೆ.

ಸದಾ ನಿಮ್ಮವ,
.ನಾ.ಮಾಧವ ಭಟ್
ಮಾಘ-ಕೃಷ್ಣ-ತ್ರಯೋದಶೀ,
ಸೋಮವಾರ - ಮಹಾ ಶಿವರಾತ್ರಿ.
೦೪-೦೩-೨೦೧೯ಬೆಂಗಳೂರು.


Wednesday, 20 February 2019

International Mother Language Day

ಮಾತೃ ಭಾಷೆ - ಅದು ಅಂತರಂಗದ ಭಾಷೆ.



ಫೆಬ್ರುವರಿ ೨೧ರ ಈ ದಿನವನ್ನು ಜಗತ್ತು 'ಅಂತಾರಾಷ್ಟ್ರೀಯ ಮಾತೃಭಾಷಾ ದಿನ 'ವನ್ನಾಗಿ ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ, ಮಾತೃಭಾಷೆಯ ಬಗ್ಗೆ ಮೆಲಕು ಹಾಕಲು ಇಚ್ಛಿಸುತ್ತೇನೆ.

ಭಾಷೆ ಮಾನವನಿಗಿರುವ ಒಂದು ಪ್ರಮುಖ ಸಂವಹನಾ ಮಾಧ್ಯಮ. ನಮ್ಮ ಭಾವನೆ, ಅನಿಸಿಕೆಗಳನ್ನು ಇತರರಿಗೆ ತಿಳಿಸಲು ಇರುವ ಸಾಧನವೆನ್ನಬಹುದು. ಹೀಗೆ ಇತರರೊಂದಿಗೆ ಸಂವಹಿಸಲು ಇರುವ ಭಾಷೆಗಳು ಹಲವು. ಆದರೆ, ನಾವು ನಮ್ಮ ಅಂತರಂಗದೊಂದಿಗೆ ಮಾತನಾಡುವ ಭಾಷೆ ಒಂದೇ - ಅದೇ ನಮ್ಮ ಮಾತೃ ಭಾಷೆ. ನಮ್ಮ ಭಾವನೆಗಳೊಂದಿಗೆ ಬೆರೆತು ಅದೂಕೂಡ ಒಂದು ಭಾವನಾತ್ಮಕ ವಿಷಯವಾಗಿದೆ. 

ಯಾವುದೇ ಭಾಷೆ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತುಕೊಂಡಿರುತ್ತದೆ. ಹಾಗಾಗಿ ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ಹಿಂದಿರುವ ಸಂಸ್ಕೃತಿಯ ಅನೇಕ ಅಂಶಗಳನ್ನು ಕಲಿಯುತ್ತೇವೆ. ಹಾಗೆಯೇ ಒಂದು ಭಾಷೆಯನ್ನು ದೂರ ಮಾಡಿಕೊಂಡಾಗ ಆ ಸಂಸ್ಕೃತಿಯ ಅನೇಕ ಅಂಶಗಳನ್ನು ದೂರ ಮಾಡಿಕೊಳ್ಳುತ್ತೇವೆ. ಈ ದೃಷ್ಟಿಯಿಂದ ನೋಡಿದಾಗ ನಮಗೆ ನಮ್ಮ ಮಾತೃಭಾಷೆಯ ಮಹತ್ವ ಅರಿವಾಗುತ್ತದೆ. ಒಬ್ಬನ ಮಾತೃಭಾಷೆ ಆತನನ್ನು ಅವನ ಮೂಲದೊಂದಿಗೆ ಜೋಡಿಸುತ್ತದೆ. ಬೇರೆ ಎಲ್ಲ ಭಾಷೆಗಳು ನಮ್ಮನ್ನು ನಮ್ಮ ಮೂಲದಿಂದ ವಿಸ್ತಾರಗೊಳಿಸುತ್ತಾ ಜಾಗತಿಕ ಮಟ್ಟಕ್ಕೆ ಏರಿಸುತ್ತವೆ. ಹಾಗಾಗಿಯೇ ಹಲವು ಭಾಷೆಗಳನ್ನು ಕಲಿಯುವುದು ಅನಿವಾರ್ಯವಷ್ಟೇ ಅಲ್ಲ ಆವಶ್ಯಕವೂ ಹೌದು.

ನಾವು ಮಾತೃ ಭಾಷೆಯ ಉಪಯೋಗ ಕಡಿಮೆ ಮಾಡಿ ಬೇರೆ ಭಾಷೆಗಳಿಗೆ ಒತ್ತು ಕೊಡುತ್ತಿದ್ದೇವೆಂದರೆ ಆ ಮಟ್ಟಿಗೆ ಬೇರೆ ಸಂಸ್ಕೃತಿಯನ್ನು ಒಳಗೆ ಬಿಟ್ಟಿದ್ದೇವೆಂದೇ ಅರ್ಥ. ಇಂದು ಆಂಗ್ಲಭಾಷೆ ಜಗತ್ತನ್ನೆಲ್ಲಾ ಆವರಿಸಿದೆಯೋ ಇಲ್ಲವೋ ಭಾರತವನ್ನಂತೂ ಬಹುವಾಗಿ ಆವರಿಸಿದೆ. ಒಂದು ಜಾಗತಿಕ ಭಾಷೆಯಾಗಿ ಆಂಗ್ಲಭಾಷೆ ನಮಗೆ ಬೇಕೇ ಬೇಕು - ಇದರಲ್ಲಿ ಸಂಶಯವೇ ಇಲ್ಲ. ಆದರೆ ಅದು ಕೇವಲ ವ್ಯಾವಹಾರಿಕ ಭಾಷೆಯಾಗದೆ ನಮ್ಮೊಳಗೆ ಇಳಿಯುತ್ತಿರುವ ವೇಗ, ಪ್ರಮಾಣ, ತೀವ್ರತೆ ಆತಂಕವನ್ನುಂಟು ಮಾಡುತ್ತದೆ. 

ವ್ಯಾವಹಾರಿಕ ಭಾಷೆಗೂ, ಮಾತೃಭಾಷೆಗೂ ನಡುವೆ ಇರುವ ವ್ಯತ್ಯಾಸವನ್ನು ಅರಿಯಲು ನಾವು ಭಾರತೀಯರು ವಿಫಲರಾಗಿದ್ದೇವೆ. ಜಪಾನ್, ಚೀನಾ, ಕೊರಿಯಾ, ಜರ್ಮನಿ, ಫ್ರಾನ್ಸ್,... ಹೀಗೆ ಅನೇಕ ದೇಶಗಳಲ್ಲಿ ಆಂಗ್ಲಭಾಷೆ ನಮ್ಮೊಳಗೆ ಹೊಕ್ಕಿರುವಷ್ಟು ಹೊಕ್ಕಿಲ್ಲ. ನಾವು ಆಂಗ್ಲಭಾಷೆಯನ್ನು ಒಂದು ಭಾಷಾ ಮಾಧ್ಯಮವನ್ನಾಗಿ ತೆಗೆದುಕೊಳ್ಳದೆ, ಒಂದು ಕಬ್ಬಿಣದ ಕಡಲೆಯಂತಿರುವ ವಿಷಯವಾಗಿ ತಿಳಿದುಕೊಂಡಿರುವುದೇ ಒಂದು ದುರಂತ. 

ಇವೆಲ್ಲದರ ಮಧ್ಯೆ, ಅನೇಕರು, ಆಂಗ್ಲಭಾಷೆಯನ್ನು ಕಲಿಯದವರ ಸ್ಥಿತಿಯನ್ನು ನೋಡಿ ತಾವು ಮಾತೃಭಾಷೆಯನ್ನು ದೂರಮಾಡುತ್ತಿರುವುದು ಮೇಲ್ನೋಟಕ್ಕೆ ವೇದ್ಯವಾಗುತ್ತಿದೆ. ಆಂಗ್ಲಭಾಷೆಯ ಜ್ಞಾನವಿಲ್ಲದಿರುವಾಗ ಜಾಗತಿಕ ಮಟ್ಟದ ವ್ಯವಹಾರ ಕಷ್ಟವಾಗುತ್ತದೆ, ಅನೇಕ ಅವಕಾಶಗಳು ಕಡಿಮೆ ಆಗುತ್ತವೆ. ಇಂತಹ ಸನ್ನಿವೇಶದಲ್ಲಿ ನಾವು ಆಂಗ್ಲಭಾಷೆಯನ್ನು ಚೆನ್ನಾಗಿ ಕಲಿಯಬೇಕೇ ಹೊರತು, ಮಾತೃಭಾಷೆಯ ಸ್ಥಾನದಲ್ಲಿ ಅದನ್ನು ಕುಳ್ಳಿರಿಸುವುವುದು ಸರಿಯಾದ ಆಯ್ಕೆಯಾಗುವುದಿಲ್ಲ. ಅನೇಕರು ಆಂಗ್ಲಭಾಷೆಯನ್ನೇ ತಮ್ಮ ಮನೆಗಳಲ್ಲಿ ನಿತ್ಯದ ಆಡುಭಾಷೆಯನ್ನಾಗಿರಿಸಿಕೊಂಡಿರುವುದು ಖೇದದ ಸಂಗತಿ.  ಇದರಿಂದ ಆಗುವ ಅಪಾಯಗಳೇ ಹೆಚ್ಚು. ಬಹುಮುಖ್ಯವಾಗಿ ನಾವು ನಮ್ಮ ಮೂಲದಿಂದ ದೂರವಾಗುತ್ತೇವೆ. ಅಂತೆಯೇ ಸಂಪೂರ್ಣ ಪಾಶ್ಚ್ಯಾತ್ಯರೂ ಆಗದೆ ತ್ರಿಶಂಕು ಸ್ಥಿತಿಯನ್ನು ತಲುಪುತ್ತೇವೆ. ಇದರ ಒಂದು ಪರಿಣಾಮವನ್ನು ನಾವು ನಮ್ಮ ಸಂಬಂಧಗಲ್ಲಿ ಕಾಣಬಹುದು. ಇಂದು ಅನೇಕರಿಗೆ ಪುರುಷರೆಲ್ಲರೂ 'ಅಂಕಲ್'ಗಳಾಗಿ ಮತ್ತು ಮಹಿಳೆಯರೆಲ್ಲರೂ 'ಆಂಟಿ'ಯಾರಾಗಿ ಕಾಣುತ್ತಾರೆ. ಅತ್ತಿಗೆ, ನಾದಿನಿ, ಬಾವ, ಬಾಮೈದ, ಚಿಕ್ಕಪ್ಪ-ದೊಡ್ಡಪ್ಪಂದಿರೆಲ್ಲಾ ಮಾಯವಾಗಿದ್ದರೆ. ಇದು ಅತ್ಯಂತ ಮೇಲಿನ ಹಂತದ ಪರಿಣಾಮ - ಇನ್ನೂ ಒಳಹೊಕ್ಕು ನೋಡಿದಾಗ ಅದರ ಆಳ ಅರಿವಾಗುತ್ತದೆ.

ಉಪಯೋಗಿಸದ ಭಾಷೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.  ಉದಾಹರಣೆಗೆ, ನಮ್ಮಲ್ಲಿ ಅನೇಕರಿಗೆ ಕನ್ನಡ ಮಾತನಾಡಲು ಬಂದರೂ, ಉಪಯೋಗಿಸದ ಕಾರಣ ಕನ್ನಡದ ಅಂಕೆ-ಸಂಖ್ಯೆಗಳ ಪರಿಚಯವಿರುವುದಿಲ್ಲ. ಅಂದರೆ, ಆಡದ ಭಾಷೆ ಉಳಿಯುವುದು ಕಷ್ಟ. ಇನ್ನು ಮಾತೃಭಾಷಾ ಶಿಕ್ಷಣ, ಸಿನಿಮಾ ಡಬ್ಬಿಂಗ್, ಅಂಗಡಿ ಮುಂಗಟ್ಟುಗಳಲ್ಲಿ ಮಾತೃಭಾಷೆ, ಬಸ್ಸು-ರೈಲು ನಿಲ್ದಾಣಗಳಲ್ಲಿ , ಸರ್ಕಾರಿ ಕಛೇರಿಗಳಲ್ಲಿ ಮಾತೃಭಾಷೆಯ ನುಡಿಗಟ್ಟುಗಳು,...ಇವಲ್ಲ ಚರ್ಚೆಯ ವಿಷಯವಾಗಬಹುದಷ್ಟೆ. ಇಂದಿನ ಸನ್ನಿವೇಶದಲ್ಲಿ ಮಾತೃಭಾಷೆಯನ್ನು ಸಂಪೂರ್ಣ ವ್ಯಾವಹಾರಿಕ ಭಾಷೆಯನ್ನಾಗಿ ಮಾಡುವುದು ಅಪ್ರಾಯೋಗಿಕ. ಆದರೆ ಅದನ್ನು ನಮ್ಮದಾಗಿಸಿಕೊಳ್ಳಬಹುದು - ಮಾತೃಭಾಷೆಯಲ್ಲಿ ಮಾತನಾಡುವ, ಓದುವ-ಬರೆಯುವ ಕೆಲಸವಾಗಬೇಕು. ನಮ್ಮ ಮಾತೃಭಾಷೆಯ ಪ್ರಧಾನ ಪ್ರಾಕಾರಗಳೆನಿಸಿದ ಜಾನಪದ-ದಾಸ ಸಾಹಿತ್ಯಗಳನ್ನು ಅಭ್ಯಸಿಸಬೇಕು. ಇವೆಲ್ಲವೂ ನಮ್ಮ ಸೃಜನಾತ್ಮಕ ಶಕ್ತಿ, ಸಂವೇದನಾ ಶಕ್ತಿಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ. ನಮ್ಮ ಮಾತೃಭಾಷೆಯನ್ನು ಅಭ್ಯಸಿಸಬೇಕು. ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಮಾತೃಭಾಷೆಯ ಪರಿಚಯವನ್ನು ಪೂರ್ಣವಾಗಿ ಮಾಡಿಕೊಳ್ಳಬೇಕು - ಒಟ್ಟಿನಲ್ಲಿ ಮನೆಗೆದ್ದು ಮಾರು ಗೆಲ್ಲಲು ಹೊರಡಬೇಕು.

ಕೊನೆಯ ಹನಿ: English ನಲ್ಲಿ 'ರಂಗೋಲಿ' ಹಾಕಲೂ ಆಗುವುದಿಲ್ಲ, 'ಮಡಿಬಟ್ಟೆ' ಉಡಲೂ ಆಗುವುದಿಲ್ಲ. ಎಷ್ಟೇ ಆದರೂ, 'Ragi Ball' ಗಿಂತ 'ರಾಗಿ ಮುದ್ದೆ'ಯೇ ಗಟ್ಟಿ. 'ಅನ್ನ'ಕ್ಕಿರುವ ಅಂದ 'Rice'ನಲ್ಲಿಲ್ಲ. 'ಬಾಳೆಎಲೆ ಊಟ'ದ  ಗಮ್ಮತ್ತು 'Banana leaf'ನಲ್ಲಿ ಮಾಡುವ 'Meal'ನಲ್ಲಿಲ್ಲ. ಅನೇಕರು ಮಾತೃಭಾಷೆಯಲ್ಲಿ ಸರಿಯಾಗಿ ವ್ಯವಹರಿಸಲು ಬಾರದೇ English ಗೆ ಜೋತು ಬಿದ್ದಿರುವುದನ್ನು ನಾವು ಒಂದು 'ಹೆಗ್ಗಳಿಕೆ' ಅಂದುಕೊಂಡರೆ ಅದು ಮೂರ್ಖತನವೇ ಸರಿ.


ಸದಾ ನಿಮ್ಮವ, 
ಹ.ನಾ.ಮಾಧವ ಭಟ್
ಮಾಘ-ಕೃಷ್ಣ-ದ್ವಿತೀಯಾ, ಗುರುವಾರ.
೨೧-೦೨-೨೦೧೯
ಬೆಂಗಳೂರು.
ದಿನ ವಿಶೇಷ: ಅಂತಾರಾಷ್ಟ್ರೀಯ ಮಾತೃಭಾಷಾ ದಿನ. 


Saturday, 2 February 2019

Life: Sports and Sportiveness

।। ಆಟವಾಡದೇ ಇದ್ದರೂ, ಕ್ರೀಡಾ ಮನೋಭಾವ ನಮ್ಮದಾಗಿಸಿ ಕೊಳ್ಳೋಣ ।।

ತ್ತೀಚಿಗೆ ಕೆಲ ತಿಂಗಳುಗಳಿಂದ ವಾರಕ್ಕೆರಡು ಬಾರಿಯಂತೆ ಫುಟ್ಬಾಲ್ ಆಡಲು ಹೋಗುತ್ತಿದ್ದೇನೆ. ಆರಂಭದಲ್ಲಿ ಸ್ನೇಹಿತರ ಒತ್ತಾಯಕ್ಕೆ ಹೋಗಲು ಶುರು ಮಾಡಿದರೂ, ಇದುವರೆಗೂ ಒಂದೂ ಗೋಲ್ ಹೊಡೆಯದೆ ಇದ್ದರೂ, ಫುಟ್ಬಾಲ್ ಶೂ ಹಾಕಿ ರೊನಾಲ್ಡೊ ರೇಂಜ್ ಗೆ ಮೈದಾನಕ್ಕೆ ಇಳಿಯುತ್ತೇನೆ. ನನ್ನಂತೆ ಇನ್ನೂ ಕೆಲ ರೊನಾಲ್ಡೊಗಳು ಜೊತೆಗಿದ್ದಾರೆಂಬುದೇ ನನ್ನ ಧೈರ್ಯ. ಆದರೆ  ಅದೇನೋ ಗೊತ್ತಿಲ್ಲ, ಎರಡು ಗಂಟೆಗಳ ಆಟದ ನಂತರ ಮೈ-ಮನಸ್ಸುಗಳೆರಡೂ ಹಗುರವಾಗುವುದಂತೂ ನಿಶ್ಚಿತ....! ಆ ಎರಡು ಗಂಟೆಗಳ ಆಟ ಇಡೀ ದಿನದ, ಇಡೀ ವಾರದ ಚಿಂತೆಗಳನ್ನೆಲ್ಲಾ ದೂರ ಮಾಡುತ್ತದೆ. ನಾವು ಕ್ರೀಡಾಸ್ಫೋರ್ತಿಯನ್ನು ತೆಗೆದುಕೊಳ್ಳಲು ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಯ್ಲಿ ಯ ದರ್ಶನ ಮಾಡಬೇಕಿಲ್ಲ, ರೊನಾಲ್ಡೊ, ಸೆರೆನಾ ವಿಲಿಯಮ್ಸ್ ಆಟೋಗ್ರಾಫ್ ಪಡೆಯಬೇಕಿಲ್ಲ. ನಾವು ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತ ಮುತ್ತಲೇ ಒಬ್ಬ ಕ್ರಿಕೆಟಿಗನೋ, ಫುಟ್ಬಾಲ್ ಆಟಗಾರನೋ, ಚೆಸ್ ಚಾಂಪಿಯನ್ನೋ, ಕಬ್ಬಡ್ಡಿ ವೀರನೋ ಸಿಗುತ್ತಾನೆ..! ನಮ್ಮ ಜೊತೆ ಕೆಲಸ ಮಾಡುವ ಇಂತಹ ಕೆಲ ರೊನಾಲ್ಡೊಗಳೇ ನಮ್ಮ ಫುಟ್ಬಾಲ್ ಆಟಕ್ಕೆ ಪ್ರೇರಣೆ...!!

ಇಂದಿನ ದಿನಗಳಲ್ಲಿ ಪಾಠಗಳ ಹಾವಳಿಯಿಂದಾಗಿ ಆಟಗಳ ಸಂಖ್ಯೆ, ಉತ್ಸಾಹ ಎರಡೂ ಕೂಡಾ ಮಕ್ಕಳಲ್ಲಿಯೇ ಕಡಿಮೆಯಾಗಿದೆ. ಆಟಗಳ ಬಗೆಗಿನ ಒಟ್ಟಾರೆ ಕಲ್ಪನೆಯ ಕೊರತೆಯಿಂದಾಗಿ ಕ್ರಿಕೆಟ್ ಒಂದೇ ಆಟವಾಗಿರುವುದು ಕಂಡು ಬರುತ್ತದೆ. ಆದರೂ ಸಹ ಇತ್ತೀಚಿಗೆ ಕಬ್ಬಡ್ಡಿ & ಹಾಕಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿವೆ.

ಡಾ||ಹೆಡಗೇವಾರ್ 
ಆಟಗಳಿಂದ ನಾವು ಕಲಿಯುವ ಪಾಠ ಅನೇಕ. ಒಂದು ತಂಡ (ಟೀಮ್)ದ ಭಾಗವಾಗುವುದು ಹೇಗೆ ಎಂದು ಆಟಗಳು ಸುಲಭವಾಗಿ ಕಲಿಸಿಕೊಡುತ್ತವೆ. ಅದು ನಮ್ಮಲ್ಲಿರುವ ಒಂಟಿತನವನ್ನು ಹೋಗಲಾಡಿಸಿ, ಇತರರೊಂದಿಗೆ ಬೆರೆಯುವುದು ಹೇಗೆಂದು ಕಲಿಸುತ್ತದೆ. ಹೌದು, ಇನ್ನೂಚಿಕ್ಕವಳಾದ ನನ್ನ ಮಗಳು ಇಷ್ಟು ದಿನ ಒಬ್ಬಳೇ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿದ್ದಳು, ಆದರೆ ಈಗ ದೊಡ್ಡವಳಾಗುತ್ತಾ ಆಟವಾಡಲು ಯಾರಾದರೂ ಬೇಕು ಎಂದು ಆಶಿಸುವುದನ್ನು ಗಮನಿಸುತ್ತಿದ್ದೇನೆ. ಆಟಗಳ ಆಕರ್ಷಣೆ ವ್ಯಕ್ತಿಗಳನ್ನು ಪರಸ್ಪರ ಹತ್ತಿರ ತರುತ್ತದೆ. ಹೀಗೆ ಕ್ರೀಡೆಗಳು ಕೇವಲ ಶಾರೀರಿಕ ವ್ಯಾಯಾಮವಾಗದೇ, ವ್ಯಕ್ತಿತ್ವ ನಿರ್ಮಾಣಕ್ಕೇ ಬುನಾದಿಯಾಗಬಹುದು. ಛತ್ರಪತಿ ಶಿವಾಜಿ ಮಹಾರಾಜರು ಸಾಮಾನ್ಯರಾದ  ವನವಾಸಿ ಮಾವಳಿ ಹುಡುಗರನ್ನು ಉತ್ಕೃಷ್ಟ ಸೈನಿಕರನ್ನಾಗಿ ಪರಿವರ್ತಿಸಿದ್ದು ಇದೆ ಆಟಗಳಿಂದ. ಡಾ||ಹೆಡಗೇವಾರ್ ಕೂಡ ಸಂಘಟನೆಯನ್ನು ಬೆಳೆಸಲು ಕ್ರೀಡೆಗಳನ್ನೇ ಸಾಧನವನ್ನಾಗಿ ಬಳಸಿದರು. ಹೀಗೆ ಆಟಗಳ ಶಕ್ತಿ ಅಪಾರ.

ಆಟಗಳು ಗೆಲುವು ಮತ್ತು ಸೋಲಿನ ರುಚಿ ತೋರಿಸಿಕೊಡುತ್ತವೆ. ಸೋತಾಗ ಕಹಿಯಾಗಿರುತ್ತದೆ, ಗೆದ್ದಾಗ ಸಿಹಿಯಾಗಿರುತ್ತದೆ. ಆದರೆ ಸೋತು ಗೆದ್ದಾಗ ಅದು ನವರಸ ಭಾರಿತವಾಗಿರುತ್ತದೆ - ಇದು ಆಟಗಳಿಂದ ಸಿಗುವ ಪಾಠ. ಈ ಸೋಲು-ಗೆಲುವುಗಳನ್ನು ಅರ್ಥೈಸಿಕೊಳ್ಳುವುದೇ "ಕ್ರೀಡಾ ಮನೋಭಾವ".  ಆದರೆ, ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬೆಳೆಯುವ ಮಕ್ಕಳಿಗೆ ಆಟವಾಡಲು ಶಾಲೆಗಳಲ್ಲಿ ಸರಿಯಾದ ಮೈದಾನಗಳಿಲ್ಲದಿರುವುದು ಇಂದಿನ ದುರಂತ. ಶಾಲೆಗಳು ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಗಳಂತೆ "ಕ್ರೀಡಾಂಗಣ" ಕೂಡ ಮಕ್ಕಳಿಗೆ ಅತ್ಯವಶ್ಯಕ ಎಂದು ಮನಗಾಣಬೇಕು. ಇನ್ನು ಕೆಲವು ಶಾಲೆಗಳಲ್ಲಿ, ವಸತಿ-ವಿದ್ಯಾಲಯಗಳಲ್ಲಿ ಮೈದಾನಗಳಿದ್ದೂ, ಸಿಲಬಸ್ ಎಂಬ ಸೈತಾನನಿಂದಾಗಿ ಮಕ್ಕಳು ಆಟವಾಡದಂತಾಗಿದೆ. ಪರಿಣಾಮವಾಗಿ ಕ್ರೀಡಾಮನೋಭಾವ ಕಡಿಮೆಯಾಗುತ್ತಿದೆ.

ಸುದ್ದಿ ಮಾಧ್ಯಮಗಳಲ್ಲಿ ನೋಡಿದಂತೆ, ಒಂದು ಅಂಕದಿಂದ ಫೇಲ್ ಅದರಿಂದ ಹಿಡಿದು ಅದೇ ಒಂದು ಅಂಕದಿಂದ ಮೊದಲ ರ‍್ಯಾಂಕ್‌ ತಪ್ಪಿಸಿಕೊಂಡವರವರೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಸರಿಯಾಗಿ ರೂಪಿಸದ ಪೋಷಕರ, ಅಧ್ಯಾಪಕರ, ಶಾಲಾ-ಕಾಲೇಜುಗಳ, ಒಟ್ಟಾರೆ ಸಮಾಜದ ಬೇಜವಾಬ್ದಾರಿ ನೆಡೆ ಎಂದೆನಿಸುತ್ತದೆ.

ನಾವು ದೊಡ್ಡವರಾಗುತ್ತಾ ಆಟ ಆಡುವುದನ್ನು ಕಡಿಮೆ ಮಾಡುತ್ತೇವೆ - ಮುಂದುವರಿದು ನಿಲ್ಲಿಸಿಯೇ ಬಿಡುತ್ತೇವೆ. ಇನ್ನು ಕೆಲವರಂತೂ, ಆಟವಾಡುವುದು ಮಕ್ಕಳು ಮಾತ್ರವೆಂದು ನಂಬಿ - 'ಆಟವಾಡಲು ನಾವೇನು ಮಕ್ಕಳೇ?!' ಎಂಬ ಉದ್ಗಾರ ತೆಗೆಯುತ್ತಾರೆ. ಇಂದು ದೊಡ್ಡವರಲ್ಲಿ ಕೂಡ ಕ್ರೀಡಾ ಮನೋಭಾವ ಕಡಿಮೆಯಾಗಿರುವುದು ಅನುಭವಕ್ಕೆ ಬರುತ್ತದೆ. ಅನಾವಶ್ಯಕ ಸ್ಪರ್ಧೆ, ಸೋಲಿನ ಸೇಡು, ಗೆಲುವಿಗಾಗಿ ಅಡ್ಡದಾರಿ ಇವೆಲ್ಲವೂ ಬದುಕೆಂಬ ಆಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮಾನಸಿಕ ಸ್ಥಿತಿಗಳಾಗಿವೆ. ಮೈದಾನದಲ್ಲಿ ಆಡುವುದರ ಜೊತೆಗೆ, ಬದುಕೆಂಬ ಆಟವನ್ನು "ಕ್ರೀಡಾ ಸ್ಫೂರ್ತಿ"ಯಿಂದಲೇ ಆಡೋಣ. ಗೆದ್ದರೆ ಖುಷಿ ಪಡೋಣ, ಸೋತರೆ ಇನ್ನೂ ಸಂತೋಷಿಸೋಣ, ಏಕೆಂದರೆ ಸೋಲಿನ ನಂತರದ ಗೆಲುವಿನ ರುಚಿ ಅನುಭವಿಸಿದವರಿಗಷ್ಟೇ ತಿಳಿದ ರಹಸ್ಯ...!!

ಆಶಯ: 30x40  ಕೊಠಡಿಯಲ್ಲಿ ಕಲಿತು, 30x40  ಮನೆಯಲ್ಲಿ ವಾಸಮಾಡಿ, ದೊಡ್ಡ ಕಂಪನಿ ಗಳ ಬೃಹದಾಕಾರದ ಕಟ್ಟಡಗಳಲ್ಲಿ, ಮೊದಲೇ ನಿಗದಿ ಪಡಿಸಿದ 3x4 ಜಾಗದಲ್ಲಿ ಕುಳಿತು ಕೆಲಸ ಮಾಡಿ, ಕೊನೆಯಲ್ಲಿ 3x4 ಗುಂಡಿಯಲ್ಲಿ ಮಲಗುವ ಮೊದಲು ದೊಡ್ಡ ಮೈದಾನಗಳಿಗೆ ಇಳಿದು ಆಟವಾಡೋಣವೇ? - ಕ್ರೀಡಾಮನೋಭಾವವನ್ನು ನಮ್ಮದಾಗಿಸಿಕೊಳ್ಳೋಣವೇ?

ನಿಮ್ಮವ,
ಹ.ನಾ.ಮಾಧವ ಭಟ್ 
ಪುಷ್ಯ-ಕೃಷ್ಣ-ತ್ರಯೋದಶಿ, ಶನಿವಾರ.
೦೨-೦೨-೨೦೧೯
ಬೆಂಗಳೂರು.


Friday, 25 January 2019

National Voter's Day


ರಾಷ್ಟ್ರೀಯ ಮತದಾರರ ದಿನ : ೨೫ನೇ ಜನವರಿ ೨೦೧೯

ಮೊದಲಿಗೆ "ಮತದಾನ" ಎನ್ನುವ ಶಬ್ದದ ಮೇಲೆಯೇ ನನ್ನ ಆಕ್ಷೇಪ...! ಮತ ಹಾಕುವುದು ಅಥವಾ ಮತ ಚಲಾಯಿಸುವುದನ್ನು 'ದಾನ' ಎನ್ನುವ ಅರ್ಥದಲ್ಲಿ ಕರೆಯುವುದೇಕೆ ಎಂದು ತಿಳಿಯುತ್ತಿಲ್ಲ. 'ದಾನ' ಎನ್ನುವ ಶಬ್ದ ಒಂದು ರೀತಿಯ ಇಚ್ಛಾಕ್ರಿಯೆ. ಅದು ಕಡ್ಡಾಯವಾಗಬೇಕಿಲ್ಲ. ಆದರೆ ಮತ ಚಲಾವಣೆ ಒಂದು ಇಚ್ಛಾಕ್ರಿಯೆಯ - ಅಸಡ್ಡೆಯ ಕಾರ್ಯಕ್ರಮವಾಗಬಾರದು. ಹಾಗಾಗಿ ನಾನು "ಮತದಾನ" ಎನ್ನುವುದಕ್ಕಿಂತ "ಮತ ಚಲಾವಣೆ" ಎಂದೇ ಹೇಳಬಯಸುತ್ತೇನೆ.

ಎಲ್ಲೋ ಓದಿದ ನೆನಪು - ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿಲ್ಲ, ಇಲ್ಲಿರುವುದು ಪ್ರಜಾಪ್ರಭುತ್ವದ ಅಣಕವಷ್ಟೇ. ಈಗಿನ ಸನ್ನಿವೇಶಗಳನ್ನು ನೋಡಿದಾಗ ಅದು ಹೌದೆನಿಸುತ್ತದೆ. ನಮ್ಮ ದೇಶದಲ್ಲಿ "ಮೂಲಭೂತ ಹಕ್ಕು"ಗಳಿಗೆ ಕೊಟ್ಟಿರುವಷ್ಟು ಸ್ಥಾನವನ್ನು  ನಾವು "ಮೂಲಭೂತ ಕರ್ತವ್ಯ"ಗಳಿಗೆ ಕೊಟ್ಟಿಲ್ಲ. ನಮ್ಮ ಪ್ರಜೆಗಳು 'ಕರ್ತವ್ಯ'ವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ನಮ್ಮ ನಾಯಕರಿಗೆ 'ಕರ್ತವ್ಯ' ಪಾಲಿಸುವುದು ಅಗತ್ಯ ಎಂದೇ ಅನಿಸುವುದಿಲ್ಲ. ಮತ ಚಲಾವಣೆ, ಸರ್ಕಾರ, ಆಢಳಿತ ವ್ಯವಸ್ಥೆ......ಇವೆಲ್ಲವುಗಳನ್ನು ಸಮಗ್ರವಾಗಿ "ರಾಜಕೀಯ" ಎಂಬ ಅಚ್ಚಿನೊಳಗೆ ಎರಕ ಹೊಯ್ಯಲಾಗಿದೆ. ಇನ್ನು ಜಾತಿ ಸಮೀಕರಣವನ್ನು ಅರ್ಥ ಮಾಡಿಕೊಂಡು ಸರ್ಕಾರ ರಚಿಸುವುದೇ  ರಾಜಕೀಯದ ಗುರಿಯಾಗಿದೆ.

ನಮ್ಮದು ದೇಶ, ೨೯ ರಾಜ್ಯಗಳು, ಕೇಂದ್ರಢಳಿತ ಪ್ರದೇಶಗಳು - ನಮಗೆ ೧೮೦೦ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ನೂರಾರು ಬಟ್ಟೆ ಅಂಗಡಿಗಳಿರುವ ಚಿಕ್ಕಪೇಟೆಗೆ ಹೋದಾಗಲೇ  ಯಾವ ಬಟ್ಟೆ ಅಂಗಡಿಗೆ ಹೋಗಬೇಕೆಂದು 'ಕನ್ಫ್ಯೂಸ್' ಆಗುವಾಗ, ೧೮೦೦ ಪಕ್ಷಗಳಿರುವಾಗ ಯಾವ ಪಕ್ಷಕ್ಕೆ ಮತ ಹಾಕಬೇಕೆಂದು 'ಕನ್ಫ್ಯೂಸ್' ಆಗುವುದು ಅತ್ಯಂತ ವಾಸ್ತವ....! ಆದ್ದರಿಂದಲೇ, ನಾವು "ಯಾರು ಹಿತವರು ನಮಗೆ ಇಲ್ಲಿರುವವರೊಳಗೆ" ಎಂದು ಒಮ್ಮೆ ಇಡೀ ಪಟ್ಟಿಯನ್ನು ನೋಡಿ ಕೊನೆಯಲ್ಲಿ ಒಂದು ಬಟನ್ ಒತ್ತುತ್ತೇವೆ..!

ಮೊದಲನೇ ಸಾರ್ವಜನಿಕ ಚುನಾವಣೆಯಿಂದ ಹಿಡಿದು ಕಳೆದ ಬಾರಿ ನೆಡೆದ ೧೬ನೇ ಚುನಾವಣೆಯಲ್ಲೂ ನೀರು ಕೊಡುವುದು, ಕರೆಂಟ್ ಕೊಡುವುದು, ರಸ್ತೆ ನಿರ್ಮಿಸುವುದು..... ಅಂಶಗಳೇ ಪ್ರಣಾಳಿಕೆಗಳ ಭಾಗವಾಗಿರುವುದು ನಮ್ಮ ಪ್ರಜೆಗಳು ತಮ್ಮ 'ಮತ ಚಲಾವಣೆ'ಎಂಬ ಅಸ್ತ್ರವನ್ನು ಸರಿಯಾಗಿ ಬಳಸದಿರುವುದಕ್ಕೆ ಸಾಕ್ಷಿ. ಇಂದಿನ 'ಬಿಸಿನೆಸ್ ಸ್ಕೂಲ್'ಗಳು "ಕಸ್ಟಮರ್ ಡಿಮ್ಯಾಂಡ್" ಎನ್ನುವ ಶಬ್ದವನ್ನು ಬಹಳವಾಗಿ ಬಳಸುತ್ತವೆ. ಬಿಗ್ ಬಜಾರ್ ನಲ್ಲಿ '೨೦% ರಿಯಾಯಿತಿ' ಎಂದು ತೂಗಿ ಹಾಕಿರುವ ವಸ್ತುವಿಗೆ, ಕ್ಯಾಶ್ ಕೌಂಟರ್ನಲ್ಲಿ ೨೦% ರಿಯಾಯಿತಿ ದೊರೆಯದೇ ಇದ್ದಲ್ಲಿ, ರಣ ಪರಾಕ್ರಮ ತೋರಿಸುವ ನಾವು, ಮೂಗಿಗೆ ತುಪ್ಪ ಸವರುವಂತಹ ಪ್ರಣಾಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ...! ಭಾರತ ೮೦ ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿದೆ. ನಮಗೆ ನಾವು ಬೇಕಾದ ಸರ್ಕಾರ ಆರಿಸುವ ಅವಕಾಶವೂ ಇದೆ. ಅನೇಕತೆಯಲ್ಲಿ ಏಕತೆ ಕಾಣಬಯಸುವ ನಮ್ಮ ದೇಶದಲ್ಲಿ - ಪಕ್ಷಗಳೂ ಅನೇಕ. ಇನ್ನು ಒಂದೇ ಪಕ್ಷದಲ್ಲಿ 'ಏಕತೆ'  ಇಲ್ಲದಿರುವಾಗ, ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿ, ಏಕತೆಯನ್ನು ಸಾಧಿಸುವುದು ಕಷ್ಟದ ಕೆಲಸ. ಹಾಗಾಗಿ, ಅಸಡ್ಡೆಯ, ಅಜಾಗರೂಕತೆಯ ನಿದ್ದೆಯಿಂದ ಭಾರತೀಯ ಮತದಾರ ಏಳಬೇಕು. ಹಳ್ಳಿಗಾಡಿನಲ್ಲಿ ಆಗುವಷ್ಟು ಮತ ಚಲಾವಣೆ ನಗರ ಪ್ರದೇಶಗಳಲ್ಲಿ ಆಗುವುದಿಲ್ಲ. ೫೦% ರಿಯಾಯಿತಿ ಎಂದು ಬೋರ್ಡ್ ನೇತು ಹಾಕಿದರೆ ಕಿಲೋಮೀಟರ್ ಉದ್ದ ಸರತಿಯಲ್ಲಿ ನಿಲ್ಲುವುದನ್ನು ಖುದ್ದು ನೋಡಿದ್ದೇನೆ. ಹೀಗಿರುವಾಗ, ನಗರವಾಸಿಗಳು ತಮ್ಮ ಹುಸಿ ಜಂಬವನ್ನು ಬದಿಗಿರಿಸಿ ಸರತಿಯಲ್ಲಿ ನಿಂತು ಮತ ಚಲಾಯಿಸಲೇ ಬೇಕು.

ಎಲ್ಲರ ಬಳಿಯೂ 'ನೋಟು' ತೆಗೆದುಕೊಂಡು ಕೊನೆಗೆ "NOTA" ಚಲಾಯಿಸುವ ಬದಲು, ಒಮ್ಮೆ ದೇಶದ ಭವಿಷ್ಯದ 'ನೋಟ'ವನ್ನು ಚಿಂತಿಸಿ ಮತ ಚಲಾಯಿಸಬೇಕು. ಬಾಯಿಗೆ 'ಬೆಣ್ಣೆ' - ಹೊಟ್ಟೆಗೆ 'ಎಣ್ಣೆ' ಕೊಟ್ಟು ಮತ ಕೇಳುವವರ ಮುಖಕ್ಕೆ 'ಸುಣ್ಣ' ಹಚ್ಚಬೇಕು. ಇನ್ನು 'ಬಟ್ಟೆ' ಕೊಟ್ಟು ಮತ ಕೇಳುವವರ 'ಹೊಟ್ಟೆ' ಮೇಲೆ ಹೊಡೆಯಬೇಕು. ಜಾತಿ ಮೇಲೆ ಮತ ಕೇಳುವವರಿಗೆ ಚಾಟಿ ಬೀಸಬೇಕು. ಒಟ್ಟಿನಲ್ಲಿ 'ಆಮಿಷ'ಕ್ಕೊಳಗಾಗದೇ, 'ಆಂಬಿಷನ್' ನೋಡಿ ಮತ ಚಲಾಯಿಸಬೇಕು. ಮತ ಚಲಾವಣೆ 'ದಾನ'ವಲ್ಲ, ಅದೊಂದು ಮೂಲಭೂತ 'ಕರ್ತವ್ಯ'ವೆಂದು ಮನಗಾಣಬೇಕು.



ನಿಮ್ಮವ,
.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ಪಂಚಮಿ, ೨೫-೦೧-೨೦೧೯
ಬೆಂಗಳೂರು.