ರಾಷ್ಟ್ರೀಯ
ಮತದಾರರ ದಿನ : ೨೫ನೇ ಜನವರಿ ೨೦೧೯
ಮೊದಲಿಗೆ
"ಮತದಾನ" ಎನ್ನುವ ಶಬ್ದದ ಮೇಲೆಯೇ ನನ್ನ ಆಕ್ಷೇಪ...! ಮತ
ಹಾಕುವುದು ಅಥವಾ ಮತ ಚಲಾಯಿಸುವುದನ್ನು
'ದಾನ' ಎನ್ನುವ ಅರ್ಥದಲ್ಲಿ ಕರೆಯುವುದೇಕೆ ಎಂದು ತಿಳಿಯುತ್ತಿಲ್ಲ. 'ದಾನ'
ಎನ್ನುವ ಶಬ್ದ ಒಂದು ರೀತಿಯ
ಇಚ್ಛಾಕ್ರಿಯೆ. ಅದು ಕಡ್ಡಾಯವಾಗಬೇಕಿಲ್ಲ. ಆದರೆ ಮತ
ಚಲಾವಣೆ ಒಂದು ಇಚ್ಛಾಕ್ರಿಯೆಯ - ಅಸಡ್ಡೆಯ
ಕಾರ್ಯಕ್ರಮವಾಗಬಾರದು. ಹಾಗಾಗಿ ನಾನು "ಮತದಾನ" ಎನ್ನುವುದಕ್ಕಿಂತ "ಮತ ಚಲಾವಣೆ" ಎಂದೇ
ಹೇಳಬಯಸುತ್ತೇನೆ.
ಎಲ್ಲೋ
ಓದಿದ ನೆನಪು - ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬಂದಿಲ್ಲ, ಇಲ್ಲಿರುವುದು ಪ್ರಜಾಪ್ರಭುತ್ವದ ಅಣಕವಷ್ಟೇ. ಈಗಿನ ಸನ್ನಿವೇಶಗಳನ್ನು ನೋಡಿದಾಗ
ಅದು ಹೌದೆನಿಸುತ್ತದೆ. ನಮ್ಮ ದೇಶದಲ್ಲಿ "ಮೂಲಭೂತ
ಹಕ್ಕು"ಗಳಿಗೆ ಕೊಟ್ಟಿರುವಷ್ಟು ಸ್ಥಾನವನ್ನು ನಾವು
"ಮೂಲಭೂತ ಕರ್ತವ್ಯ"ಗಳಿಗೆ ಕೊಟ್ಟಿಲ್ಲ. ನಮ್ಮ ಪ್ರಜೆಗಳು 'ಕರ್ತವ್ಯ'ವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ನಮ್ಮ ನಾಯಕರಿಗೆ 'ಕರ್ತವ್ಯ'
ಪಾಲಿಸುವುದು ಅಗತ್ಯ ಎಂದೇ ಅನಿಸುವುದಿಲ್ಲ. ಮತ
ಚಲಾವಣೆ, ಸರ್ಕಾರ, ಆಢಳಿತ ವ್ಯವಸ್ಥೆ......ಇವೆಲ್ಲವುಗಳನ್ನು ಸಮಗ್ರವಾಗಿ "ರಾಜಕೀಯ" ಎಂಬ ಅಚ್ಚಿನೊಳಗೆ ಎರಕ
ಹೊಯ್ಯಲಾಗಿದೆ. ಇನ್ನು ಜಾತಿ ಸಮೀಕರಣವನ್ನು ಅರ್ಥ
ಮಾಡಿಕೊಂಡು ಸರ್ಕಾರ ರಚಿಸುವುದೇ ರಾಜಕೀಯದ
ಗುರಿಯಾಗಿದೆ.
ನಮ್ಮದು
೧ ದೇಶ, ೨೯ ರಾಜ್ಯಗಳು,
೭ ಕೇಂದ್ರಢಳಿತ ಪ್ರದೇಶಗಳು - ನಮಗೆ ೧೮೦೦ಕ್ಕೂ ಹೆಚ್ಚು
ರಾಜಕೀಯ ಪಕ್ಷಗಳಿವೆ. ನೂರಾರು ಬಟ್ಟೆ ಅಂಗಡಿಗಳಿರುವ ಚಿಕ್ಕಪೇಟೆಗೆ ಹೋದಾಗಲೇ ಯಾವ
ಬಟ್ಟೆ ಅಂಗಡಿಗೆ ಹೋಗಬೇಕೆಂದು 'ಕನ್ಫ್ಯೂಸ್' ಆಗುವಾಗ, ೧೮೦೦ ಪಕ್ಷಗಳಿರುವಾಗ ಯಾವ
ಪಕ್ಷಕ್ಕೆ ಮತ ಹಾಕಬೇಕೆಂದು 'ಕನ್ಫ್ಯೂಸ್'
ಆಗುವುದು ಅತ್ಯಂತ ವಾಸ್ತವ....! ಆದ್ದರಿಂದಲೇ, ನಾವು "ಯಾರು ಹಿತವರು ನಮಗೆ
ಇಲ್ಲಿರುವವರೊಳಗೆ" ಎಂದು ಒಮ್ಮೆ ಇಡೀ
ಪಟ್ಟಿಯನ್ನು ನೋಡಿ ಕೊನೆಯಲ್ಲಿ ಒಂದು
ಬಟನ್ ಒತ್ತುತ್ತೇವೆ..!
ಮೊದಲನೇ
ಸಾರ್ವಜನಿಕ ಚುನಾವಣೆಯಿಂದ ಹಿಡಿದು ಕಳೆದ ಬಾರಿ ನೆಡೆದ
೧೬ನೇ ಚುನಾವಣೆಯಲ್ಲೂ ನೀರು ಕೊಡುವುದು, ಕರೆಂಟ್
ಕೊಡುವುದು, ರಸ್ತೆ ನಿರ್ಮಿಸುವುದು.....ಈ ಅಂಶಗಳೇ ಪ್ರಣಾಳಿಕೆಗಳ
ಭಾಗವಾಗಿರುವುದು ನಮ್ಮ ಪ್ರಜೆಗಳು ತಮ್ಮ
'ಮತ ಚಲಾವಣೆ'ಎಂಬ ಅಸ್ತ್ರವನ್ನು ಸರಿಯಾಗಿ
ಬಳಸದಿರುವುದಕ್ಕೆ ಸಾಕ್ಷಿ. ಇಂದಿನ 'ಬಿಸಿನೆಸ್ ಸ್ಕೂಲ್'ಗಳು "ಕಸ್ಟಮರ್ ಡಿಮ್ಯಾಂಡ್" ಎನ್ನುವ ಶಬ್ದವನ್ನು ಬಹಳವಾಗಿ ಬಳಸುತ್ತವೆ. ಬಿಗ್ ಬಜಾರ್ ನಲ್ಲಿ
'೨೦% ರಿಯಾಯಿತಿ' ಎಂದು ತೂಗಿ ಹಾಕಿರುವ
ವಸ್ತುವಿಗೆ, ಕ್ಯಾಶ್ ಕೌಂಟರ್ನಲ್ಲಿ ೨೦% ರಿಯಾಯಿತಿ ದೊರೆಯದೇ
ಇದ್ದಲ್ಲಿ, ರಣ ಪರಾಕ್ರಮ ತೋರಿಸುವ
ನಾವು, ಮೂಗಿಗೆ ತುಪ್ಪ ಸವರುವಂತಹ ಪ್ರಣಾಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ...!
ಭಾರತ ೮೦ ಕೋಟಿಗೂ ಹೆಚ್ಚು
ಮತದಾರರನ್ನು ಹೊಂದಿದೆ. ನಮಗೆ ನಾವು ಬೇಕಾದ
ಸರ್ಕಾರ ಆರಿಸುವ ಅವಕಾಶವೂ ಇದೆ. ಅನೇಕತೆಯಲ್ಲಿ ಏಕತೆ
ಕಾಣಬಯಸುವ ನಮ್ಮ ದೇಶದಲ್ಲಿ - ಪಕ್ಷಗಳೂ
ಅನೇಕ. ಇನ್ನು ಒಂದೇ ಪಕ್ಷದಲ್ಲಿ 'ಏಕತೆ' ಇಲ್ಲದಿರುವಾಗ,
ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಿ,
ಏಕತೆಯನ್ನು ಸಾಧಿಸುವುದು ಕಷ್ಟದ ಕೆಲಸ. ಹಾಗಾಗಿ, ಅಸಡ್ಡೆಯ, ಅಜಾಗರೂಕತೆಯ ನಿದ್ದೆಯಿಂದ ಭಾರತೀಯ ಮತದಾರ ಏಳಬೇಕು. ಹಳ್ಳಿಗಾಡಿನಲ್ಲಿ ಆಗುವಷ್ಟು ಮತ ಚಲಾವಣೆ ನಗರ
ಪ್ರದೇಶಗಳಲ್ಲಿ ಆಗುವುದಿಲ್ಲ. ೫೦% ರಿಯಾಯಿತಿ ಎಂದು
ಬೋರ್ಡ್ ನೇತು ಹಾಕಿದರೆ ಕಿಲೋಮೀಟರ್
ಉದ್ದ ಸರತಿಯಲ್ಲಿ ನಿಲ್ಲುವುದನ್ನು ಖುದ್ದು ನೋಡಿದ್ದೇನೆ. ಹೀಗಿರುವಾಗ, ನಗರವಾಸಿಗಳು ತಮ್ಮ ಹುಸಿ ಜಂಬವನ್ನು
ಬದಿಗಿರಿಸಿ ಸರತಿಯಲ್ಲಿ ನಿಂತು ಮತ ಚಲಾಯಿಸಲೇ ಬೇಕು.
ಎಲ್ಲರ
ಬಳಿಯೂ 'ನೋಟು' ತೆಗೆದುಕೊಂಡು ಕೊನೆಗೆ "NOTA" ಚಲಾಯಿಸುವ ಬದಲು, ಒಮ್ಮೆ ದೇಶದ ಭವಿಷ್ಯದ 'ನೋಟ'ವನ್ನು ಚಿಂತಿಸಿ ಮತ ಚಲಾಯಿಸಬೇಕು. ಬಾಯಿಗೆ
'ಬೆಣ್ಣೆ' - ಹೊಟ್ಟೆಗೆ 'ಎಣ್ಣೆ' ಕೊಟ್ಟು ಮತ ಕೇಳುವವರ ಮುಖಕ್ಕೆ
'ಸುಣ್ಣ' ಹಚ್ಚಬೇಕು. ಇನ್ನು 'ಬಟ್ಟೆ' ಕೊಟ್ಟು ಮತ ಕೇಳುವವರ 'ಹೊಟ್ಟೆ'ಯ ಮೇಲೆ ಹೊಡೆಯಬೇಕು.
ಜಾತಿ ಮೇಲೆ ಮತ ಕೇಳುವವರಿಗೆ
ಚಾಟಿ ಬೀಸಬೇಕು. ಒಟ್ಟಿನಲ್ಲಿ 'ಆಮಿಷ'ಕ್ಕೊಳಗಾಗದೇ, 'ಆಂಬಿಷನ್'
ನೋಡಿ ಮತ ಚಲಾಯಿಸಬೇಕು. ಮತ
ಚಲಾವಣೆ 'ದಾನ'ವಲ್ಲ, ಅದೊಂದು
ಮೂಲಭೂತ 'ಕರ್ತವ್ಯ'ವೆಂದು ಮನಗಾಣಬೇಕು.
ನಿಮ್ಮವ,
ಹ.ನಾ.ಮಾಧವ ಭಟ್
ಪುಷ್ಯ-ಕೃಷ್ಣ-ಪಂಚಮಿ, ೨೫-೦೧-೨೦೧೯
ಬೆಂಗಳೂರು.
